ಹಣವೇ ಇಂದು ಎಲ್ಲದಕ್ಕೂ ಪ್ರಧಾನ. ಹಣದಿಂದ ಏನು ಬೇಕಾದರೂ ಮಾಡಬಹುದು, ಹಣವಿದ್ದರೆ ಏನು ಬೇಕಾದರೂ ಸಿಗುತ್ತದೆ ಅನ್ನೋದು ಜಗತ್ತಿನ ಬಹುತೇಕ ಜನರ ಅಭಿಪ್ರಾಯ. ನಮ್ಮ ಸುತ್ತಮುತ್ತಲಿನ ಜನ, ಸಮಾಜ ಎಲ್ಲವೂ ಹಣಕ್ಕೇ ಅತಿಯಾದ ಮಹತ್ವ ಕೊಡುವುದರಿಂದ, ನಿಯತ್ತಿನಿಂದ ಹಣ ಸಂಪಾದಿಸಬೇಕು. ಜೀವನಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಹಣ ಸಂಪಾದಿಸಬೇಕು ಎನ್ನುವ ಕೆಲವೇ ಕೆಲವು ಮಂದಿ ಅನೇಕರ ಕಣ್ಣಿಗೆ ಶತ ಮೂರ್ಖರಂತೆ ಕಾಣಿಸಿಕೊಳ್ಳುತ್ತಾರೆ.
ಹಾಗಾದ್ರೆ ಈ ಪ್ರಪಂಚ ಅನ್ನೋ “ಮಾಯಾ ಬಜಾರ್’ನಲ್ಲಿ ನಿಜವಾಗಿಯೂ ಮನುಷ್ಯ ಖುಷಿಯಾಗಿರಲು ಹಣ ಎಷ್ಟು ಮುಖ್ಯ. ಇಂಥ ಹಣವನ್ನ ಯಾವ ಮಾರ್ಗದಲ್ಲಿ ಸಂಪಾದಿಸಿಕೊಂಡ್ರೆ ನೆಮ್ಮದಿ, ಯಾವ ಮಾರ್ಗದಲ್ಲಿ ಹೋದ್ರೆ ನೆಮ್ಮದಿ ಭಂಗ? ಇದೇ ವಿಷಯವನ್ನು ಇಟ್ಟುಕೊಂಡು ಮಾಡಿರುವ, ಇದರ ಸುತ್ತ ಸಾಗುವ ಚಿತ್ರ “ಮಾಯಾ ಬಜಾರ್’. ಒಬ್ಬ ನಿಷ್ಠಾವಂತ ಪೊಲೀಸ್ ಅಧಿಕಾರಿ, ಒಬ್ಬ ಚಾಲಾಕಿ ಕಳ್ಳ, ಮತ್ತೂಬ್ಬ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವವ ಈ ಮೂವರ ಕಣ್ಣಿಗೆ ಬೀಳುವ ಬೇನಾಮಿ ಹಣ ಯಾವ ವ್ಯಕ್ತಿಗಳ ಕೈಯಲ್ಲಿ ಏನೆಲ್ಲ ಮಾಡಿಸುತ್ತದೆ.
ಯಾರ್ಯಾರು ಏನೆಲ್ಲ ಮಾಡುತ್ತಾರೆ ಅಂತಿಮವಾಗಿ ಹಣ ಮತ್ತು ನಿಯತ್ತು ಅದರಲ್ಲಿ ಗೆಲ್ಲೋದು ಯಾವುದು ಅನ್ನೋದೇ “ಮಾಯಾ ಬಜಾರ್’ ಚಿತ್ರದ ಕಥಾಹಂದರ. ಒಂದು ಗಂಭೀರ ವಿಷಯವನ್ನು ಇಟ್ಟುಕೊಂಡು ಅದನ್ನು ನವಿರಾದ ಹಾಸ್ಯದ ಮೂಲಕ ತೆರೆಮೇಲೆ ಹೇಳುವ ಪ್ರಯತ್ನ ಚೆನ್ನಾಗಿದ್ದರೂ, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳುವ ಸಾಧ್ಯತೆಗಳೂ ನಿರ್ದೇಶಕರ ಮುಂದಿದ್ದವು. ಚಿತ್ರಕಥೆ ಮತ್ತು ನಿರೂಪಣೆಯ ಕಡೆಗೆ ಇನ್ನೂ ಸ್ವಲ್ಪ ಗಮನ ಕೊಡಬಹುದಿತ್ತು.
ಇನ್ನು ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಥಿಯೇಟರ್‌ಗೆ ಕರೆತರುವ ಕಸರತ್ತು ಎನ್ನುವಂತೆ ಚಿತ್ರದ ಕೊನೆಗೆ ಬರುವ ಹಾಡಿನಲ್ಲಿ ಪುನೀತ್ ರಾಜಕುಮಾರ್ ಮೂಲಕ ಭರ್ಜರಿ ಸ್ಟೆಪ್ಸ್ ಹಾಕಿಸಲಾಗಿದೆ. ಇನ್ನು ಇಡೀ ಚಿತ್ರಕ್ಕೆ ವಸಿಷ್ಠ ಸಿಂಹ, ರಾಜ್ ಬಿ. ಶೆಟ್ಟಿ ಮತ್ತು ಅಚ್ಯುತ ಕುಮಾರ್ ತಮ್ಮ ಪಾತ್ರದ ಮೂಲಕ ಹೆಗಲಾಗಿದ್ದಾರೆ. ಲವರ್ ಬಾಯ್ ಆಗಿ ವಸಿಷ್ಠ ಸಿಂಹ, ಚಾಲಾಕಿ ಕಳ್ಳನಾಗಿ ರಾಜ್ ಬಿ. ಶೆಟ್ಟಿ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಅಚ್ಯುತ ಕುಮಾರ್, ಮೂವರು ಕೂಡ ತಮ್ಮದೇ ಮ್ಯಾನರಿಸಂ ಮೂಲಕ ನೋಡುಗರಿಗೆ ಇಷ್ಟವಾಗುತ್ತಾರೆ.
ಉಳಿದಂತೆ ಪ್ರಕಾಶ್ ರೈ, ಸುಧಾರಾಣಿ, ಹೊನ್ನವಳ್ಳಿ ಕೃಷ್ಣ ಮೊದಲಾದ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಚಿತ್ರದ ಛಾಯಾಗ್ರಹಣ, ಲೈಟಿಂಗ್ಸ್, ಸಂಕಲನ ಸೇರಿದಂತೆ ತಾಂತ್ರಿಕ ಕಾರ್ಯಗಳ ಕಡೆಗೆ ನಿರ್ದೇಶಕರು ಇನ್ನಷ್ಟು ಗಮನ ಹರಿಸಬಹುದಿತ್ತು. ಹಿನ್ನೆಲೆ ಸಂಗೀತ ಅಲ್ಲಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಒಟ್ಟಾರೆ ವಾರಾಂತ್ಯಕ್ಕೆ “ಮಾಯಾ ಬಜಾರ್’ ಎನ್ನುವ ಸಸ್ಪೆನ್ಸ್ ಕಂ ಕಾಮಿಡಿ ಚಿತ್ರವನ್ನು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.
ಚಿತ್ರ: ಮಾಯಾಬಜಾರ್
ನಿರ್ಮಾಣ: ಅಶ್ವಿನಿ ಪುನೀತ್ ರಾಜಕುಮಾರ್, ಎಂ. ಗೋವಿಂದ
ನಿರ್ದೇಶನ: ರಾಧಾಕೃಷ್ಣ ರೆಡ್ಡಿ
ತಾರಾಗಣ: ವಸಿಷ್ಟ ಸಿಂಹ, ಅಚ್ಯುತ ಕುಮಾರ್, ರಾಜ್ ಬಿ ಶೆಟ್ಟಿ, ಪ್ರಕಾಶ್ ರೈ, ಸುಧಾರಾಣಿ, ಹೊನ್ನವಳ್ಳಿ ಕೃಷ್ಣ ಮತ್ತಿತರರು.
* ಜಿ.ಎಸ್.ಕಾರ್ತಿಕ ಸುಧನ್