ಭಾಗ್ಯಮ್ಮ ಬಿಸಿ ಬಿಸಿ ಹೊಗೆಯಾಡುವ ಚಹಾವನ್ನು ತುಟಿಗಿಡುವ ಸಮಯದಲ್ಲೇ ಹೊರಗೆ ತುಂತುರು ಮಳೆಹನಿಯಲು ಶುರುವಾಗಿತ್ತು. ಹನಿಹನಿ ಮಳೆ ಜಡಿಮಳೆಯಾಗಿ ಸುರಿದು ಊರ ನಡುವೆ ಹರಿಯುವ ಹೊಳೆ ಉಕ್ಕೇರಿ ಕುಣಿಯುವ ಮುನ್ನ ಹೊಳೆಯಾಚೆಗಿನ ಗದ್ದೆಯಲ್ಲಿ ಬಿತ್ತನೆ ಮುಗಿಯಬೇಕು. ಅದಕ್ಕಾಗಿ ಮನೆಯ ಗಂಡಸರೆಲ್ಲ ಬೆಳಕು ಹರಿಯುವ ಮೊದಲೇ ಹೊಲದ ಕೆಲಸಕ್ಕೆ ಹೊರಡಬೇಕು. ಅವರು ಹೊರಡುವ ತಾಸು ಮೊದಲೇ ಭಾಗ್ಯಮ್ಮ ಏಳಲೇಬೇಕು. ಬೆಳಗಿನ ನಿದ್ದೆಯನ್ನು ಕದಿಯುವ ಈ ದಿನಗಳು ಅವಳ ಪಾಲಿಗೆ ಕಷ್ಟದ ದಿನಗಳು. ಎಲ್ಲರಿಗೂ ಹೊಟ್ಟೆ ತುಂಬ ತಿನಿಸಿ, ಎತ್ತುಗಳಿಗೆ ಮೇವನ್ನು ಉಣಿಸಿ, ಮಧ್ಯಾಹ್ನಕ್ಕೆಂದು ಬುತ್ತಿಯನ್ನೂ ಕಳಿಸಿಯಾದ ಮೇಲೆ ಅವಳು ಬಿಸಿಬಿಸಿ ಚಹಾವನ್ನು ಹಿಡಿದು ಕುಳಿತಿದ್ದಾಳೆ. ಇನ್ನು ಮನೆಯ ಸ್ವಚ್ಛತೆಯ ಕೆಲಸವೆಲ್ಲ ಮುಗಿದು, ತೋಟವನ್ನು ಸುತ್ತಾಡಿ ಬಂದು ಮತ್ತೆ ಸಂಜೆಯ ಅಡಿಗೆಯ ಯೋಚನೆ ಮಾಡಬೇಕು. ಗಂಡಸರೊಂದಿಗೆ ಬರುವ ಎತ್ತುಗಳಿಗೂ ಹುರುಳಿ ಬೇಯಿಸಿ, ಹಿಂಡಿ ನೆನೆಸಿ, ಬಾಯಾರು ತಯಾರಿಸಬೇಕು. ಹಳ್ಳಿಯ ಈ ಕೆಲಸಗಳಿಗೆ ಕೊನೆಯೇ ಇಲ್ಲ. ಅದರಲ್ಲಿ ಏನಾದರೂ ಒಂದಿನಿತು ಕೊರೆಯಾದರೂ ಸಾಕು, ಇಡೀ ದಿನ ಮನೆಯಲ್ಲಿದ್ದು ಮಾಡುವುದಾದರೂ ಏನು? ಎಂಬ ಬೈಗುಳ ಖಚಿತ. ಯೋಚನಾಲಹರಿಯಲ್ಲಿದ್ದವಳನ್ನು ಹೊರಗಿನಿಂದ ಬಂದ ಕರೆ ಎಚ್ಚರಿಸಿತು.
ಅರೆ! ಮೀನು ತರುವ ಬಾಯಮ್ಮ ಅಂಗಳದಲ್ಲಿ ಮೀನು ಬುಟ್ಟಿಯನ್ನಿಟ್ಟು ಕುಳಿತಿದ್ದಾಳೆ. ಪ್ರತಿ ತಿಂಗಳಿಗೊಮ್ಮೆ ಊರಿಗೆ ಬರುವ ಅಪರೂಪದ ಅತಿಥಿ ಈ ಬಾಯಮ್ಮ. ಆದರೆ, ಪ್ರತಿಸಲ ಬರುತ್ತಿದ್ದುದು ಇವಳ ಅತ್ತೆಯೋ, ಅಮ್ಮನೋ ಇರಬೇಕು. ಇವಳಿನ್ನೂ ಚಿಕ್ಕ ಪ್ರಾಯದವಳು. ದೂರದಲ್ಲಿ ಮೀನು ಬುಟ್ಟಿಯನ್ನು ಹೊತ್ತು ಹೋಗುವ ಅವಳನ್ನು ಭಾಗ್ಯಮ್ಮ ಅನೇಕ ಸಲ ನೋಡಿದ್ದಳು. ಇವರನ್ನು ಕಂಡದ್ದೇ ಬಾಯಮ್ಮ “ಒಳ್ಳೆ ಮೀನದೆ. ಬನ್ನಿ. ಯಾಪಾರ ಮಾಡಿ’ ಎಂದಳು. ಭಾಗ್ಯಮ್ಮ ನಗುತ್ತಾ, “ಅಯ್ನಾ, ನಾವು ಮೀನು ತಿಂಬೂದಿಲ್ವೆ ಮಾರಾಯ್ತಿ. ನಮ್ಮನೆ ಎದುರು ಮೀನು ತರೂದೆ?’ ಎಂದಳು. ಇವಳು ಹಾಗಂದದ್ದೇ ಬಾಯಮ್ಮನ ಕೋಪ ನೆತ್ತಿಗೇರಿತು. “ಆಹಾಹಾ, ಭಾರೀ ಸುಳ್ಳು ಹೆಳ್ರಿ ಕಾಣಿ. ಕಳೆದ ತಿಂಗಳು ನೀವೇ ಮೀನು ತೆಕೊಂಡು ಮುಂದಿನ ಸಲ ಬಂದಾಗ ದುಡ್ಡು ಕೊಡ್ತೆ ಅಂದದ್ದಲ್ಲವಾ? ಈಗ ಮೀನು ತಿನ್ನುದಿಲ್ಲ ಅಂತ ನಾಟಕ ಆಡ್ತಾ? ಇದೆಲ್ಲ ನನ್ನತ್ರ ನಡೆಯೂದಿಲ್ಲ’ ಎಂದು ಜಗಳಕ್ಕೇ ನಿಂತಳು. ಅನಿರೀಕ್ಷಿತವಾದ ಅವಳ ವಾಗ್ಬಾಣಕ್ಕೆ ಹೇಗೆ ಉತ್ತರಿಸಬೇಕೆಂದು ತಿಳಿಯದೇ ಭಾಗ್ಯಮ್ಮ ಕಕ್ಕಾಬಿಕ್ಕಿಯಾಗಿ ನಿಂತಿರುವಾಗಲೇ ಕೆಲಸದ ಆಳು ಅಲ್ಲಿಗೆ ಬಂದಳು. ಪರಿಸ್ಥಿತಿಯನ್ನು ಅರಿತ ಅವಳು ಬಾಯಮ್ಮನಿಗೆ ಸಮಜಾಯಿಸಿ ನೀಡಿ ವಾತಾವರಣವನ್ನು ತಿಳಿಗೊಳಿಸಿದಳು.
ತನಗೂ ಸ್ವಲ್ಪ ನೀರು ಬೇಕೆಂದು ಕೇಳಿದ ಬಾಯಮ್ಮನಿಗೆ ಆಳಿನ ಜೊತೆಗೆ ಕಡೆದ ಮಜ್ಜಿಗೆಯನ್ನು ನೀಡಿದರು ಭಾಗ್ಯಮ್ಮ. ತಂಪು ಮಜ್ಜಿಗೆ ಹೊಟ್ಟೆಗಿಳಿಯುತ್ತಲೇ ತಾನಾಡಿದ ಮಾತಿನ ಬಿಸಿ ಹೆಚ್ಚಾಯೆ¤àನೊ ಅನಿಸಿತು ಬಾಯಮ್ಮನಿಗೆ. “ಅಲ್ಲಾ ಮಾರಾರ್ರೆ, ನಿಮ್ಮವರೆಲ್ಲ ಒಳ್ಳೆ ಮಾಳಿಗೆ ಮನೆಯಲ್ಲಿರೋದನ್ನ ನೋಡಿದ್ದೇನೆ. ಹೀಗೆ ಮುಳಿಹುಲ್ಲಿನ ಮನೆಯಲ್ಲಿ ಇರಿ¤àರಂತ ನಂಗೆಂತ ಗೊತ್ತಿತ್ತು? ಆದರೂ ಮನೆಯೆದುರಿನ ತುಳಸೀವನ ನೋಡಿಯಾದರೂ ನಾನು ನಿಮ್ಮಂದೋರ ಮನೆ ಅಂತ ತಿಳೀಬೇಕಿತ್ತು’ ಎಂದು ತನ್ನ ಅಭಿಪ್ರಾಯಕ್ಕೆ ಕಾರಣ ನೀಡತೊಡಗಿದಳು. ಬಾಯಮ್ಮನ ಸಹಜವಾದ ಮಾತುಗಳು ಬಾಣಗಳಂತೆ ಭಾಗ್ಯಮ್ಮನ ಎದೆಯನ್ನು ಬಗೆದು ಎದೆಯಾಳದ ದುಃಖವನ್ನು ಹೊರಗೆ ಬರುವಂತೆ ಮಾಡಿದ್ದವು. “ಜಾತಿ ಯಾವುದಾದರೇನು ಬಾಯಮ್ಮ? ಮಾಳಿಗೆ ಮನೆ ಮಾಡೋದಿಕ್ಕೆ ಅದೃಷ್ಟ ಇರಬೇಕು. ಮಾಳಿಗೆ ಮನೆಯಲ್ಲಿ ಹುಟ್ಟಿ ಬೆಳೆದೋಳೆ ನಾನು. ಸಾಲಲ್ಲಿ ಹೆಣ್ಣಾಗಿ ಹುಟ್ಟಿದ ಕಾರಣಕ್ಕೆ ಯಾವ್ಯಾವುದೋ ಮನೆಗೆ ಬರಬೇಕಾಯ್ತು. ಎಲ್ಲದಕ್ಕೂ ನಸೀಬು ಗಟ್ಟಿಯಿರಬೇಕು’ ಎಂದು ನಿಡುಸುಯ್ದಳು. ಈ ನಸೀಬು ಎಂಬ ಪದ ಕಿವಿಗೆ ಬಿತ್ತೋ ಇಲ್ಲವೋ ಬಾಯಮ್ಮನಿಗೆ ತನ್ನೆದುರು ಕುಳಿತದ್ದು ತನ್ನ ತಾಯಿಯೇ ಎನಿಸಿ, ಅದೆಷ್ಟೋ ದಿನಗಳಿಂದ ಬಚ್ಚಿಟ್ಟುಕೊಂಡಿದ್ದ ದುಗುಡಗಳನ್ನೆಲ್ಲ ಅವಳೆದುರು ಹರಡತೊಡಗಿದಳು. ಅವರ ನೋವು ಮಾತಾಗಿ ಹರಿಯುತ್ತಿದ್ದಂತೇ ಆಗಸದ ಮೋಡವೂ ಕರಗಿ ಮಳೆಯಾಗಿ ಸುರಿಯಿತು.
ನಂತರದ ದಿನಗಳಲ್ಲಿ ಅವಳಿಗರಿವಿಲ್ಲದೇ ಭಾಗ್ಯಮ್ಮ ಬಾಯಮ್ಮನ ಬರವಿಗೆ ಕಾಯುವುದು, ಮನೆಯಲ್ಲಿ ಗಂಡಸರಿ¨ªಾರೆಂದರೆ ಬಾಯಮ್ಮ ಹಿತ್ತಲ ಬಾಗಿಲಲ್ಲಿ ಬಂದು ಅವರನ್ನು ಕೂಗುವುದು, ಇವರೂ ಮಜ್ಜಿಗೆಯ ಪಾತ್ರೆ ಹಿಡಿದು ಅವಳೆಡೆಗೆ ಹೋಗುವುದು, ಅಲ್ಲೇ ಬಟ್ಟೆ ತೊಳೆಯುವ ಕಲ್ಲಿನ ಅಕ್ಕಪಕ್ಕದಲ್ಲಿ ಕುಳಿತು ಎದೆಯ ಭಾವಗಳಿಗೆಲ್ಲ ಮಾತಿನ ಬಣ್ಣ ನೀಡಿ ಹಗುರಾಗುವುದು ಎಲ್ಲವೂ ಸಹಜವೆಂಬಂತೆ ನಡೆಯುತ್ತಲೇ ಇರುತ್ತಿದ್ದವು. ನಡುನಡುವೆ ಅವರಿಬ್ಬರೂ ತಮ್ಮ ತಮ್ಮ ಗಂಡಸರ ಪೆದ್ದುತನದ ಬಗ್ಗೆ, ಅದನ್ನು ಬಳಸಿಕೊಂಡು ತಾವು ಸಾಧಿಸಿದ ಗೆಲುವಿನ ಬಗೆಗೆಲ್ಲ ಹಂಚಿಕೊಳ್ಳುತ್ತ¤ ಗೊಳ್ಳೆಂದು ಬಾಯ್ತುಂಬ ನಗುವುದೂ ಇತ್ತು. ಭಾಗ್ಯಮ್ಮ ತಾನು ತವರಿಂದ ಬಂದಮೇಲೆ ಮರೆತೇಬಿಟ್ಟಿದ್ದ ಪೇಟೆಯ ಪ್ರಸಾದನ ಸಾಧನಗಳನ್ನೆಲ್ಲ ಮತ್ತೆ ಬಾಯಮ್ಮ ಅವಳಿಗಾಗಿ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ತಂದು ಕೊಡುತ್ತಿದ್ದಳು. ಇವಳೂ ತಾನೇನು ಕಡಿಮೆಯಿಲ್ಲವೆಂಬಂತೆ ಮನೆಯಲ್ಲಿ ಮಾಡಿದ ಸಿಹಿ ತಿಂಡಿಗಳನ್ನೆಲ್ಲ ಪೊಟ್ಟಣ ಕಟ್ಟಿ ಬಾಯಮ್ಮನ ಬುಟ್ಟಿಯಲ್ಲಿಡುತ್ತಿದ್ದಳು. “ಆ ಮೀನು ಮಾರುವವಳೊಡನೆ ಏನು ನಿನ್ನ ಮಾತು?’ ಎಂದು ಗದರಿಸಿದ ಗಂಡನಿಗೆ ಭಾಗ್ಯಮ್ಮ, “ಅಯ್ಯೋ, ನೀರು ಕೇಳಿದವರಿಗೆ ಯಾವ ಬಾಯಲ್ಲಿ ಇಲ್ಲ ಅನ್ನಲಿ? ಹಾಗೇ ಏನೋ ಕಷ್ಟ ಸುಖ ಹೇಳಿದಳು, ಕೇಳಿದೆ ಅಷ್ಟೆ. ನಿಮ್ಮಂಥ ಗಂಡಸರಿಗ್ಯಾಕೆ ಗೌರಿದುಃಖ?’ ಎಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದಳು. ಇವರನ್ನು ಕಂಡ ಸಾತಜ್ಜಿ ಒಮ್ಮೆ, “ಒಳ್ಳೆ ಅಕ್ಕ ತಂಗಂದೀರ ಥರಾ ಇದ್ದೀರಿ’ ಎಂದು ನೆಟಿಗೆ ಮುರಿದಿದ್ದಳು. ಅದಕ್ಕೆ ಭಾಗ್ಯಮ್ಮ, “ಯಾರಿಗೆ ಗೊತ್ತು ಸಾತಜ್ಜಿ? ಬಾಯಮ್ಮನ ಅಜ್ಜನ ಅಜ್ಜನೂ, ನನ್ನ ಅಜ್ಜನ ಅಜ್ಜನೂ ಅಣ್ಣತಮ್ಮಂದಿರಾಗಿರಲಿಕ್ಕೂ ಸಾಕು’ ಎಂದು ನಕ್ಕಿದ್ದಳು. ಇವಳ ಮಾತಿನ ತಾತ್ಪರ್ಯವರಿಯದ ಸಾತಜ್ಜಿ, “ಜನುಮಾಂತರದ ಕಥೆಯ ಸಿವನೇ ಬಲ್ಲ’ ಎಂದು ಆಕಾಶ ನೋಡಿದ್ದಳು.
ಇವೆಲ್ಲದರ ನಡುವೆ ಭಾಗ್ಯಮ್ಮನ ಮನೆಯ ಬೆಕ್ಕು ಮಾತ್ರ ಪ್ರತಿಸಲವೂ ಬಾಯಮ್ಮ ತರುವ ಮೀನಿಗಾಗಿ ಆಸೆಯಿಂದ ಕಾಯುತ್ತಿತ್ತು. ನಾನೆಷ್ಟು ಹಾಲು ಅನ್ನ ಹಾಕಿದರೂ ನಿನಗೆ ಅವಳ ಮೀನೇ ಬೇಕಲ್ವಾ? ಅಂತ ಭಾಗ್ಯಮ್ಮ ಬೆಕ್ಕಿನ ಮೂತಿಗೆ ತಿವಿಯುತ್ತಿದ್ದಳು.
ಸುಧಾ ಆಡುಕಳ