ಶನಿವಾರ ಬೆಳಗಿನ ಜಾವದ ವೇಳೆ ತಾನು ಇರಾನಿನಲ್ಲಿರುವ ಮಿಲಿಟರಿ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ಘೋಷಿಸಿದೆ. ಇತ್ತೀಚೆಗೆ ಇಸ್ರೇಲ್ ಮೇಲೆ ನಡೆದ ಆಕ್ರಮಣಕ್ಕೆ ಪ್ರತಿಕ್ರಿಯೆಯಾಗಿ ಈ ದಾಳಿಯನ್ನು ನಡೆಸಲಾಗಿದೆ. ಈ ತಿಂಗಳ ಆರಂಭದಲ್ಲಿ ಇರಾನ್ ತನ್ನ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು ಎಂದು ಇಸ್ರೇಲ್ ಸರ್ಕಾರ ಆರೋಪಿಸಿತ್ತು. ಈಗಾಗಲೇ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಬಂಧ ಉದ್ವಿಗ್ನವಾಗಿದ್ದು, ಇಸ್ರೇಲ್ ನಡೆಸಿರುವ ಆಕ್ರಮಣ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಗಳಿವೆ. ಇಸ್ರೇಲ್ ಮತ್ತು ಇರಾನ್ ಎರಡೂ ಅತ್ಯಂತ ಶಸ್ತ್ರಸಜ್ಜಿತ ರಾಷ್ಟ್ರಗಳಾಗಿದ್ದು, ಅವುಗಳು ಅತ್ಯಂತ ಸಂಕೀರ್ಣ ಮತ್ತು ಅಪಾಯಕಾರ ಚಕಮಕಿಯಲ್ಲಿ ನಿರತವಾಗಿವೆ.
ಇರಾನಿನ ಮಾಧ್ಯಮಗಳು ಮುಂಜಾನೆಯ ಕೆಲವು ಗಂಟೆಗಳ ಅವಧಿಯಲ್ಲಿ ರಾಜಧಾನಿ ಟೆಹರಾನ್ ಮತ್ತು ಸನಿಹದ ಮಿಲಿಟರಿ ನೆಲೆಗಳಲ್ಲಿ ಸ್ಫೋಟದ ಸದ್ದು ಕೇಳಿಬಂತು ಎಂದು ವರದಿ ಮಾಡಿವೆ. ಆದರೆ, ಇದರಿಂದ ಸಂಭವಿಸಿರುವ ಹಾನಿ ಮತ್ತು ಸಾವುನೋವಿನ ಕುರಿತು ಯಾವುದೇ ನಿಖರ ವರದಿಗಳು ಲಭ್ಯವಾಗಿಲ್ಲ.
ಶನಿವಾರ ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ, ಇಸ್ರೇಲ್ ತಾನು ಇರಾನಿನ ಮೇಲೆ ಮೂರು ಸುತ್ತಿನ ವಾಯುದಾಳಿ ನಡೆಸಿದ್ದು, ಈಗ ತನ್ನ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಘೋಷಿಸಿತ್ತು.ಅಕ್ಟೋಬರ್ 1ರಂದು ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮರುದಾಳಿ ನಡೆಸುವ ಸಾಧ್ಯತೆಗಳು ದಟ್ಟವಾಗಿತ್ತು. ಈ ಕಾರಣದಿಂದ ಮಧ್ಯ ಪೂರ್ವದಲ್ಲಿ ಆತಂಕ ಹೆಚ್ಚಾಗಿತ್ತು. ಅಕ್ಟೋಬರ್ 1ರ ದಾಳಿಯಲ್ಲಿ, ಇರಾನ್ ಇಸ್ರೇಲ್ ಮೇಲೆ ಅಂದಾಜು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿತ್ತು. ಇದು ಕಳೆದ ಆರು ತಿಂಗಳ ಅವಧಿಯಲ್ಲಿ ಇಸ್ರೇಲ್ ಮೇಲೆ ಇರಾನಿನ ಎರಡನೇ ನೇರ ದಾಳಿಯಾಗಿತ್ತು.
ಇರಾನ್ ತನ್ನ ಕ್ಷಿಪಣಿ ದಾಳಿಗಳು ಇಸ್ರೇಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿದ್ದವು ಎಂದು ಹೇಳಿಕೆ ನೀಡಿತ್ತು. ಇಸ್ರೇಲ್ ಲೆಬನಾನ್‌ನಲ್ಲಿ ಕಾರ್ಯಾಚರಣೆ ನಡೆಸಿ, ಇರಾನ್ ಬೆಂಬಲ ಹೊಂದಿರುವ ಹೆಜ್ಬೊಲ್ಲಾ ಗುಂಪಿನ ಪ್ರಮುಖ ನಾಯಕರನ್ನು ಹತ್ಯೆಗೈದುದಕ್ಕೆ ಪ್ರತೀಕಾರದ ರೂಪದಲ್ಲಿ ಇರಾನ್ ಈ ದಾಳಿ ನಡೆಸಿತ್ತು.
ಹೆಜ್ಬೊಲ್ಲಾ ಸಂಘಟನೆಯ ಉಗ್ರರು, ಗಾಜಾದಿಂದ ಇಸ್ರೇಲ್ ವಿರುದ್ಧ ಹೋರಾಡುತ್ತಿರುವ, ಇರಾನ್ ಜೊತೆ ಬಾಂಧವ್ಯ ಹೊಂದಿರುವ ಹಮಾಸ್ ಉಗ್ರರನ್ನು ಬೆಂಬಲಿಸುವ ಸಲುವಾಗಿ ಯುದ್ಧರಂಗಕ್ಕೆ ಇಳಿದಿದ್ದರು. ಅಕ್ಟೋಬರ್ 7, 2023ರಂದು ಇಸ್ರೇಲ್ ಮೇಲೆ ಹಮಾಸ್ ಆಕ್ರಮಣ ನಡೆಸಿದ ಬಳಿಕ ಇಂತಹ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ತನ್ನ ಮೇಲೆ ಇರಾನ್ ಮತ್ತು ಅದರ ಬೆಂಬಲಿತ ಸಂಘಟನೆಗಳು ನಡೆಸುವ ಆಕ್ರಮಣಕ್ಕೆ ಪ್ರತಿಯಾಗಿ ಮರು ಆಕ್ರಮಣ ನಡೆಸುವುದು ತನ್ನ ಹಕ್ಕು ಮತ್ತು ಕರ್ತವ್ಯ ಎಂದು ಇಸ್ರೇಲ್ ವಾದಿಸಿದೆ. ಇಸ್ರೇಲ್ ಮೇಲೆ ನಡೆದ ದಾಳಿಯಲ್ಲಿ, ಕ್ಷಿಪಣಿಗಳನ್ನು ನೇರವಾಗಿ ಇರಾನಿನ ನೆಲದಿಂದ ಇಸ್ರೇಲ್ ಮೇಲೆ ಉಡಾವಣೆಗೊಳಿಸಲಾಗಿತ್ತು.
ಇಸ್ರೇಲ್ ತನ್ನ ದಾಳಿಯಲ್ಲಿ ಇರಾನಿನ ಇಂಧನ ವ್ಯವಸ್ಥೆ ಅಥವಾ ಪರಮಾಣು ಘಟಕಗಳನ್ನು ಗುರಿಯಾಗಿಸಿಲ್ಲ ಎಂದು ಅಮೆರಿಕನ್ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ. ಅಮೆರಿಕಾದ ಮಾಧ್ಯಮ ಸಂಸ್ಥೆಯಾದ ಎಬಿಸಿ ನ್ಯೂಸ್ ದಾಳಿಯ ಕುರಿತು ವರದಿ ಮಾಡಿದ್ದು, ಇಸ್ರೇಲ್ ಪ್ರತಿದಾಳಿ ಇನ್ನೂ ನಡೆಯುತ್ತಿದೆ. ಆದರೆ, ಇದು ಕೇವಲ ಇಂದಿಗೆ ಮಾತ್ರ ಸೀಮಿತವಾಗಿರುವ ಸಾಧ್ಯತೆಗಳಿವೆ ಎಂದಿತ್ತು. ಇಸ್ರೇಲಿನ ಪ್ರಮುಖ ಬೆಂಬಲಿಗನಾಗಿರುವ, ಜೋ ಬೈಡನ್ ನೇತೃತ್ವದ ಅಮೆರಿಕಾ ಸರ್ಕಾರ, ಇಸ್ರೇಲ್ ಏನಾದರೂ ಇರಾನಿನ ಪರಮಾಣು ಘಟಕಗಳ ಮೇಲೆ ದಾಳಿ ನಡೆಸಿದರೆ ತಾನು ಬೆಂಬಲ ನೀಡುವುದಿಲ್ಲ ಎಂದು ಮೊದಲೇ ಎಚ್ಚರಿಕೆ ನೀಡಿತ್ತು. ಇರಾನಿನ ತೈಲಾಗಾರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಬದಲು, ಪರ್ಯಾಯ ಆಯ್ಕೆಗಳನ್ನು ಪರಿಶೀಲಿಸುವಂತೆ ಇಸ್ರೇಲ್‌ಗೆ ಬೈಡನ್ ಸಲಹೆ ನೀಡಿದ್ದರು.
ರಾಜಧಾನಿ ಟೆಹರಾನ್‌ನಲ್ಲಿ ಕೇಳಿ ಬಂದ ಸ್ಫೋಟದ ಸದ್ದುಗಳು ಇಸ್ರೇಲ್ ದಾಳಿ ನಡೆಸಲು ಪ್ರಯತ್ನಿಸುವುದನ್ನು ಇರಾನಿನ ವಾಯು ರಕ್ಷಣಾ ವ್ಯವಸ್ಥೆಗಳು ತಡೆಯಲು ಪ್ರಯತ್ನಿಸುವ ಸಂದರ್ಭದಲ್ಲಿ ಉಂಟಾಗಿರುವುದು ಎಂದು ಇರಾನಿ ಮಿಲಿಟರಿ ವಕ್ತಾರರು ಹೇಳಿಕೆ ನೀಡಿರುವುದಾಗಿ ಇರಾನಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಇಸ್ರೇಲ್ ಟೆಹರಾನ್ ನಗರದ ಹೊರವಲಯದಲ್ಲಿ ಮೂರು ಗುರಿಗಳ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸಿತ್ತು ಎಂದು ಇರಾನಿನ ಸರ್ಕಾರಿ ಮಾಧ್ಯಮ ತಿಳಿಸಿದೆ.
ಇರಾನಿನ ಸರ್ಕಾರಿ ಮಾಧ್ಯಮ ಟೆಹರಾನ್ ಮತ್ತು ಸನಿಹದ ಕರಾಜ್ ನಗರದಲ್ಲಿ ಭಾರೀ ಸ್ಫೋಟದ ಸದ್ದು ಕೇಳಿ ಬಂದಿತ್ತು ಎಂದು ವರದಿ ಮಾಡಿತ್ತು. ಆದರೆ, ಪರಿಸ್ಥಿತಿ ಕೈಮೀರಿ ಹೋಗಿಲ್ಲ ಎಂದು ಸಾಬೀತುಪಡಿಸುವ ಸಲುವಾಗಿ ದಾಳಿ ಗಂಭೀರ ಸ್ವರೂಪದ್ದಲ್ಲ ಎಂದು ಅದು ಹೇಳಿಕೊಂಡಿದ್ದು, ಇರಾನಿನ ಜನಜೀವನ ಎಂದಿನಂತೆ ಸುಗಮವಾಗಿ ಮುಂದುವರಿದಿದೆ ಎಂದು ವರದಿ ಮಾಡಿತ್ತು.
ಇರಾನಿನ ತಸ್ನಿಮ್ ನ್ಯೂಸ್ ಏಜೆನ್ಸಿ ಈ ಕುರಿತು ವರದಿ ಮಾಡಿದ್ದು, ಇಸ್ರೇಲ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೆಲೆಗಳ ಮೇಲೆ ಗುರಿಯಾಗಿಸಿ ದಾಳಿ ನಡೆಸಿದೆ. ಆದರೆ, ಈ ನೆಲೆಗಳಿಗೆ ಯಾವುದೇ ಹಾನಿ ತಲೆದೋರಿಲ್ಲ ಎಂದಿದೆ.
ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್ಎ ಪ್ರಕಾರ, ಮುಂದಿನ ಆದೇಶದ ತನಕ ಇರಾನಿನ ನಾಗರಿಕ ವಿಮಾನಯಾನ ಸಂಸ್ಥೆ ಎಲ್ಲಾ ಮಾರ್ಗಗಳ, ಎಲ್ಲಾ ವಿಮಾನಗಳನ್ನೂ ರದ್ದುಪಡಿಸಿದೆ. ಶನಿವಾರ ಮುಂಜಾನೆಯ ವೇಳೆ ಇಸ್ರೇಲ್ ಸಿರಿಯಾದ ಮಧ್ಯ ಮತ್ತು ದಕ್ಷಿಣ ಭಾಗದಲ್ಲಿನ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿದೆ ಎಂದು ಸಿರಿಯಾದ ಸರ್ಕಾರಿ ಸುದ್ದಿ ಸಂಸ್ಥೆ ಸನಾ (SANA) ವರದಿ ಮಾಡಿದೆ.
ಸಿರಿಯಾದ ವಾಯು ರಕ್ಷಣಾ ವ್ಯವಸ್ಥೆಗಳು ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಪ್ರದೇಶ ಮತ್ತು ಲೆಬನಾನ್‌ನ ಕೆಲ ಭಾಗಗಳಿಂದ ಹಾರಿಬಂದ ಇಸ್ರೇಲಿ ಕ್ಷಿಪಣಿಗಳ ಪೈಕಿ ಹಲವನ್ನು ಹೊಡೆದುರುಳಿಸಲು ಯಶಸ್ವಿಯಾಗಿವೆ ಎಂದು ಸನಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆದರೆ ಸಿರಿಯಾ ಮೇಲೆ ಯಾವುದೇ ದಾಳಿ ನಡೆಸಿರುವುದನ್ನು ಇಸ್ರೇಲ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.ಇರಾನ್ ಮೇಲೆ ಏನಾದರೂ ದಾಳಿ ನಡೆಸಿದರೆ, ಅದಕ್ಕೆ ಅತ್ಯಂತ ಗಂಭೀರವಾದ ಪ್ರತಿಕ್ರಿಯೆ ನೀಡುವುದಾಗಿ ಇರಾನಿನ ಅಧಿಕಾರಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದರು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಅವರು ರಾಜಧಾನಿ ಟೆಲ್ ಅವೀವ್‌ನಲ್ಲಿರುವ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರದಿಂದ ಕಾರ್ಯಾಚರಣೆಯನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದಾರೆ ಎಂದು ಇಸ್ರೇಲ್ ಹೇಳಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿರ್ವಹಿಸಲು ಅವರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ.
ಅಮೆರಿಕಾದ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಇಸ್ರೇಲ್ ತನ್ನ ಪ್ರತಿದಾಳಿ ನಡೆಸಿದ ಕೆಲ ಸಮಯದಲ್ಲಿ, ರಕ್ಷಣಾ ಸಚಿವರಾದ ಯೊವಾವ್ ಗ್ಯಾಲಂಟ್ ಅವರು ಅಮೆರಿಕಾದ ಭದ್ರತಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಡನೆ ಸಮಾಲೋಚನೆ ನಡೆಸಿದ್ದಾರೆ. ಈ ಸಂವಹನದ ಮೂಲಕ, ಇಸ್ರೇಲ್ ಅಮೆರಿಕಾಗೆ ಪರಿಸ್ಥಿತಿಯ ಕುರಿತಾದ ಸ್ಪಷ್ಟ ಚಿತ್ರಣ ಒದಗಿಸಿದೆ.
ಓರ್ವ ಅಮೆರಿಕನ್ ಅಧಿಕಾರಿಯ ಪ್ರಕಾರ, ಇಸ್ರೇಲ್ ಇರಾನಿನಲ್ಲಿ ತನ್ನ ಗುರಿಗಳ ಮೇಲೆ ದಾಳಿ ನಡೆಸುವ ಮುನ್ನ ಅಮೆರಿಕಾಗೆ ಮಾಹಿತಿ ನೀಡಿದೆ. ಆದರೆ ಅಮೆರಿಕಾ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿಲ್ಲ.
ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸುತ್ತಿರುವಂತೆ, ಇರಾನ್ ಮತ್ತು ಅಮೆರಿಕಾಗಳು ಒಂದು ಪ್ರಾದೇಶಿಕ ಯುದ್ಧಕ್ಕೆ ಎಳೆಯಲ್ಪಡಬಹುದು ಎಂಬ ಆತಂಕಗಳು ಈಗ ಮನೆಮಾಡಿವೆ. ಇದರಲ್ಲಿ ಬೈರುತ್ ಮೇಲಿನ ವಾಯುದಾಳಿಗಳು, ಭೂ ಕಾರ್ಯಾಚರಣೆ, ಮತ್ತು ಗಾಜಾ ಪಟ್ಟಿಯಲ್ಲಿ ಕಳೆದ ಒಂದು ವರ್ಷದಿಂದ ಮುಂದುವರಿದಿರುವ ಯುದ್ಧಗಳು ಸೇರಿವೆ.
ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳದಂತೆ, ಇರಾನ್ ಮೇಲೆ ಜಾಗರೂಕವಾಗಿ ವಾಯುದಾಳಿ ನಡೆಸುವಂತೆ ಅಮೆರಿಕಾ ಇಸ್ರೇಲ್‌ಗೆ ಸೂಚನೆ ನೀಡಿತ್ತು. ಇದೇ ವೇಳೆ, ಒಂದೊಮ್ಮೆ ಇರಾನ್ ಏನಾದರೂ ಪ್ರತಿದಾಳಿ ನಡೆಸಿದರೆ ತಾನು ಇಸ್ರೇಲ್‌ಗೆ ಬೆಂಬಲ ಸೂಚಿಸುವುದಾಗಿಯೂ ಅಮೆರಿಕಾ ಸ್ಪಷ್ಟಪಡಿಸಿತ್ತು.
ಈ ಬೆಂಬಲದ ಅಂಗವಾಗಿ, ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗೆ ಅಮೆರಿಕನ್ ಸೇನೆಯ ಥಾಡ್ ಕ್ಷಿಪಣಿ ನಿರೋಧಕ ವ್ಯವಸ್ಥೆ ಮತ್ತು ಅದನ್ನು ನಿರ್ವಹಿಸಲು 100 ಅಮೆರಿಕನ್ ಸೈನಿಕರನ್ನು ಇಸ್ರೇಲ್‌ಗೆ ಕಳುಹಿಸಿ ಕೊಟ್ಟಿದ್ದರು. ಈ ಕ್ರಮ ಸಂಭಾವ್ಯ ದಾಳಿಗಳಿಂದ ಇಸ್ರೇಲನ್ನು ರಕ್ಷಿಸಲು ನೆರವಾಗಲಿದೆ.
ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕನ್ ಅವರು ಬುಧವಾರ ಇಸ್ರೇಲ್ ದಾಳಿಯ ಸಾಧ್ಯತೆಯ ಕುರಿತು ಹೇಳಿಕೆ ನೀಡಿದ್ದು, ಇಸ್ರೇಲ್ ತನ್ನ ಕಾರ್ಯಾಚರಣೆಯಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗದಂತೆ ಜಾಗರೂಕತೆ ವಹಿಸಬೇಕು ಎಂದು ಕರೆ ನೀಡಿದ್ದರು.
*ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)