Advertisement

ಕದಡಿದ ಮನದೊಳು ಕಾಣದ ಕದನ

06:30 AM Feb 21, 2018 | |

ಅಮರ್‌ ನನ್ನ ಬಳಿ ಕೌನ್ಸೆಲಿಂಗ್‌ಗೆ ಬರುವ ಹೊತ್ತಿಗೆ, ಅವರ ಹೆಂಡತಿ ರೇಷ್ಮಾ ನಾಲ್ಕು ಕೌನ್ಸೆಲಿಂಗ್‌ ತೆಗೆದುಕೊಂಡಿದ್ದರು. ಮುಟ್ಟಿನ ದಿನದ ನಂತರವೂ ರಕ್ತಸ್ರಾವ ನಿಲ್ಲದಿರುವುದು ಆಕೆಯ ಗರ್ಭಧಾರಣೆಗೆ ಸಮಸ್ಯೆಯಾಗಿತ್ತು. ಸ್ತ್ರೀ ರೋಗ ತಜ್ಞರು ನನ್ನನ್ನು ಭೆಟ್ಟಿಯಾಗಲು ಹೇಳಿದ್ದರು. ನಿಲ್ಲದ ರಕ್ತಸ್ರಾವಕ್ಕೂ, ಗರ್ಭಧಾರಣೆಗೂ ಮತ್ತು ಮಾನಸಿಕ ಒತ್ತಡಕ್ಕೂ ಸಂಬಂಧವಿದೆ.  

Advertisement

ನಮ್ಮ ಮನಸ್ಸಿನಲ್ಲಿ ಜರುಗುವ ಪ್ರತಿಯೊಂದು ಆಲೋಚನೆಯೂ ಶರೀರದ ಅಂಗಾಂಗಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಅಮರ್‌ಗೆ ತಿಳಿಸಬೇಕಾಗಿತ್ತು. ಸ್ತ್ರೀಯ ಸೂಕ್ಷ್ಮ ಸಂವೇದಿ ಮನಸ್ಸನ್ನು ಪುರುಷರಿಗೆ ಅರ್ಥಮಾಡಿಸುವುದು ಚಿಕಿತ್ಸೆಯ ಒಂದು ಭಾಗ. ಗಂಡ ಚಿಕಿತ್ಸೆಯಲ್ಲಿ ಸಕ್ರಿಯ ಪಾತ್ರ ವಹಿಸಿದರೆ, ಹೆಂಡತಿಯ ಆರೋಗ್ಯ ಮತ್ತು ವರ್ತನೆ ಸುಲಭವಾಗಿ ಸುಧಾರಿಸುವುದು.

ಕೌಟುಂಬಿಕ ಸ್ವಾಸ್ಥದಲ್ಲಿ ಪುರುಷರೂ ಭಾಗವಹಿಸಿದರೆ ದಾಂಪತ್ಯ ಸಿಹಿ- ಸಿಹಿ. ವೈವಾಹಿಕ ಜೀವನದಲ್ಲಿ ನಮ್ಮೆಜಮಾನರು ನಮ್ಮ ಕಡೆಗೆ ಸ್ವಲ್ಪವಾದರೂ ನಿಂತರೆ, ನಾವೆಲ್ಲಾ ನೋಡ್ಕೊತೀವಿ ಅನ್ನೋ ಹೆಣ್ಣು ಮಕ್ಕಳಿಗೇನೂ ಕಮ್ಮಿ ಇಲ್ಲ. ಶಾರೀರಿಕ ಸಮಸ್ಯೆಗಳು ಏಕಾಏಕಿ ಶುರುವಾಗುವುದಿಲ್ಲ. ಚಿಕ್ಕ ಚಿಕ್ಕ ಘಟನೆಗಳು ಒತ್ತಡವಾಗಿ ಪರಿಣಮಿಸುತ್ತವೆ. ಮದುವೆಯಾದ ಮೊದಲ ರಾತ್ರಿಯಿಂದಲೇ ಅತ್ತೆಯದು ಮೈಂಡ್‌ ಗೇಮ್‌ ಅಂತನ್ನಿಸಿಬಿಟ್ಟಿದೆ ರೇಷ್ಮಾಗೆ.

ಮೊದಲ ರಾತ್ರಿಯ ಮಧ್ಯರಾತ್ರಿಯಲ್ಲಿ, ಏಕಾಂತದಲ್ಲಿದ್ದವರನ್ನು ಯಾವುದೋ ಓಬಿರಾಯನ ಕಾಲದ ಶಾಸ್ತ್ರಕ್ಕಾಗಿ ಅತ್ತೆ ಬಾಗಿಲು ಬಡಿದು ಎಬ್ಬಿಸಿದ್ದಾರೆ.  ಸವಿ ಅನುಭವದಲ್ಲಿದ್ದ ಇಬ್ಬರಿಗೂ ಬ್ರೇಕ್‌ ಕೊಟ್ಟುಬಿಟ್ಟಿದ್ದರು ಆ ಹಿರಿಯ ತಲೆ. ಆಫೀಸಿನಲ್ಲಿ ರಜವಿಲ್ಲದೆ ಹನಿಮೂನ್‌ ಮುಂದಕ್ಕೆ ಹೋಯಿತು ಎಂಬ ಸಂಕಟ ಕಡಿಮೆಯೇ? ಎರಡು ದಿನ ಬಿಟ್ಟು ಅಮರ್‌ ಬೆಂಗಳೂರಿಗೆ ಹಿಂತಿರುಗಿದಾಗ ರೇಷ್ಮಾ ಹೊರಡುವಂತಿರಲಿಲ್ಲ.

ಸೊಸೆ, ಮೊದಲು ಅತ್ತೆ- ಮಾವನಿಗೆ ಹೊಂದಿಕೊಳ್ಳಬೇಕಲ್ಲ! ಮೂರು ತಿಂಗಳು ರೇಷ್ಮಾ ಮತ್ತು ಅಮರ್‌ ಒಬ್ಬರಿಗೊಬ್ಬರು ಹಾತೊರೆದುಬಿಟ್ಟಿದ್ದರು. ಮಗನಿಗೆ ನಿ¨ªೆ ಹಾಳಾದರೆ ಆಫೀಸಿನಲ್ಲಿ ತೊಂದರೆ ಎಂದು ರಾತ್ರಿ ವಿಡಿಯೋ ಚಾಟ್‌ ಮಾಡಲು ಬಿಡುತ್ತಿರಲಿಲ್ಲ. ಮಾತ್ಸರ್ಯ ತುಂಬಿದರೆ ಹೆಣ್ಣಿನ ಮನಸ್ಸು ಎಷ್ಟು ನಕಾರಾತ್ಮಕ ಎಂದು ಹೆಣ್ಣಿಗೇ ತಿಳಿದಿರುವುದಿಲ್ಲ. ತಾಯಿಗೆ ಎದುರು ಮಾತಾಡದಿರುವುದು, ಅಮರನ ಹೆದರಿಕೆಯೋ, ಗೌರವವೋ ಗೊತ್ತಾಗುತ್ತಿರಲಿಲ್ಲ.

Advertisement

ತನ್ನನ್ನು ಅತೀವವಾಗಿ ಪ್ರೀತಿಸಿದರೆ ತಾಯಿಯನ್ನು ಎದುರಿಸಬಹುದು ಎಂದು ರೇಷ್ಮಾ ನಂಬಿದ್ದಳು. ಕಡೆಗೂ ಗಂಡನ ಬಳಿ ತೆರಳಲು ಅನುಮತಿ ಬರುವ ಹೊತ್ತಿಗೆ, ವಯಸ್ಕ ಮೈದುನ ನೆವ ಮಾಡಿಕೊಂಡು ಬೆಂಗಳೂರಿಗೇ ಬಂದ. ಇಷ್ಟರ ಮಧ್ಯೆ, ಮಗನ ಸಂಬಳ ಸೊಸೆಗೆ ಗೊತ್ತಾಗಬಾರದು ಎಂಬ ನಿಯಮ ಬೇರೆ. “ಮಗ ಎನ್ನುವ ಮರವನ್ನು ಬೆಳೆಸಿ ಫ‌ಲ ಕೊಡುವ ಸಮಯಕ್ಕೆ ಸೊಸೆಗೆ ಏನು ಅಧಿಕಾರ?’ ಎಂಬ ಅತ್ತೆಯ ನೀತಿ, ಈಕೆಗೆ ನೋವುಂಟು ಮಾಡಿದೆ.

ಪತಿಯ ಮೇಲೆ ಸಲುಗೆ- ಅಧಿಕಾರವಿಲ್ಲದಿದ್ದರೆ ನಾನು ಮನೆಕೆಲಸದವಳೇ? ಮಗನನ್ನು ಬಿಟ್ಟುಕೊಡಲಾಗದಿದ್ದರೆ, ಮದುವೆ ಏಕೆ ಮಾಡಿದರು? ಅತ್ತೆಯ, ಅಧಿಕಾರ ಮತ್ತು ಅಹಂಕಾರಕ್ಕೆ ತಾನು ಹರಕೆಯ ಕುರಿಯೇ? ರೇಷ್ಮಾ ಅತ್ತೆಯನ್ನು ಬಾಯಿಗೆ ಬಂದಂತೆ ಬಯ್ದಾಗ, ಅಮರ್‌ ಕೆನ್ನೆಗೆ ಬಾರಿಸಿದ್ದಾರೆ. ರೇಷ್ಮಾ ಅವಮಾನದಿಂದ ಕುದ್ದು ಕಿಡಿಯಾಗಿದ್ದಾಳೆ. ಒಂಟಿ ಭಾವನೆ, ದುಃಖ ದುಮ್ಮಾನದಲ್ಲಿ ಮಗು ಹೇಗೆ ಆಗಬೇಕು? ಪರಿಣಾಮ ಅನಾರೋಗ್ಯ.

ಈ ಸ್ಥಿತಿಯಲ್ಲಿ ಸಹಜ- ಸ್ವಾಭಾವಿಕವಾದ ಋತುಚಕ್ರದ ಕ್ರಿಯೆಯಲ್ಲಿ ಅಸಹಜತೆ ಉಂಟಾಗುತ್ತದೆ. ಈ ವೈರುಧ್ಯ ಪರಿಸ್ಥಿತಿಗಳನ್ನು ಎದುರಿಸಲು ರೇಷ್ಮಾಗೆ ಚಿಕಿತ್ಸೆ ನೀಡಲಾಯಿತು. ರೇಷ್ಮಾ ಈಗ ಮಗುವಿನ ತಾಯಿ. ಸ್ತ್ರೀ ಸಹಜ ಮಾತ್ಸರ್ಯ ಒಬ್ಬ ಸಾತ್ವಿಕ ತಾಯಿಯನ್ನೂ ಕಾಡಬಹುದು ಎಂಬ ಅಂದಾಜು ಮಗನಿಗಿರಿವುದಿಲ್ಲ. ನಂಬಿಕೆಯೂ ಬರುವುದಿಲ್ಲ. ತಾಯಿ ಮಗನ ತಪ್ಪುಗಳನ್ನು ಮುಚ್ಚಿಟ್ಟು ಅಪ್ಪನ ಬೈಗುಳಗಳಿಂದ ರಕ್ಷಿಸಿದ ಮಮತೆಯ ಖನಿ.

ಮಕ್ಕಳು ಹಸಿದು ಮಲಗಬಾರದು ಎಂದು ತನ್ನ ಪಾಲಿನ ಊಟವನ್ನು ಬಡಿಸಿದ ಅಮೃತಾನಂದಮಯಿ! ಅತ್ತೆಯ ಮಾತ್ಸರ್ಯದ ಮೇಲ್ಮೆ„ಯನ್ನು ಹೆಂಡತಿ ಗಂಡನಿಗೆ ಪರಿಚಯಿಸುವುದು ವ್ಯರ್ಥ ಪ್ರಯತ್ನ. ಅನೇಕ ಕುಟುಂಬಗಳನ್ನು ನೋಡಿ ಕಲಿತ ಅರ್ಹತೆಯಿಂದಾಗಿ, ಚಿಕಿತ್ಸಕರಾಗಿ ನಾವು ತಿಳಿಸಬಹುದು. ತಾಯಿಯ ಅನ್ನದ ಋಣ; ಇನ್ನೊಂದು ಕಡೆ ಪ್ರತಿಯೊಂದು ಕಷ್ಟ- ಸುಖದಲ್ಲೂ ಭಾಗಿಯಾಗುವ ಭಾರ್ಯೆಯ ಮುಗ್ಧ ಅಂತರಂಗ. ಎರಡು ಅಪೂರ್ವ ಆತ್ಮಗಳ ನಡುವೆ ನಲುಗುವ ಪುರುಷರಿಗೆ ನನ್ನ ಸಲಾಮು.

* ಡಾ. ಶುಭಾ ಮಧುಸೂದನ್‌, ಮನೋಚಿಕಿತ್ಸಾವಿಜ್ಞಾನಿ

Advertisement

Udayavani is now on Telegram. Click here to join our channel and stay updated with the latest news.

Next