ಗಾಝಾ ಸಿಟಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಉಗ್ರರ ನಡುವೆ ಮತ್ತೆ ಘರ್ಷಣೆ ಶುರುವಾಗಿದೆ. ಮಂಗಳವಾರ ಹಮಾಸ್ ಉಗ್ರರು ಇಸ್ರೇಲ್‌ನತ್ತ 400 ರಾಕೆಟ್‌ಗಳನ್ನು ಹಾರಿಸಿದ್ದಾರೆ. ಅದರಿಂದ ಕ್ರುದ್ಧ ಗೊಂಡ ಇಸ್ರೇಲ್ ಗಡಿಗೆ ಹೆಚ್ಚುವರಿ ಸೇನೆ ರವಾನೆ ಮಾಡಿದೆಯಲ್ಲದೆ, ಪ್ರತಿ ದಾಳಿ ನಡೆಸಿದೆ. ಅದರಿಂದಾಗಿ ಆರು ಮಂದಿ ಪ್ಯಾಲೆಸ್ತೀನ್ ಉಗ್ರರು ಜೀವ ಕಳೆದು ಕೊಂಡಿದ್ದು, ಇತರ ಹಲವಾರು ಮಂದಿ ಗಾಯಗೊಂಡಿದ್ದಾರೆ. ರಾಕೆಟ್ ದಾಳಿಯಿಂದಾಗಿ ಗಡಿ ಪ್ರದೇಶದಲ್ಲಿದ್ದ ಕಟ್ಟಡಗಳು ಧ್ವಂಸಗೊಂಡಿವೆ. ಎಲ್ಲೆಡೆಯೂ ಹೊಗೆ, ಧೂಳು ತುಂಬಿ ಹೋಗಿದೆ. ಇದರಿಂದಾಗಿ 2014ರ ಬಳಿಕ ಅತ್ಯಂತ ಸಂಘರ್ಷಮಯ ವಾತಾವರಣ ಗಾಝಾದಲ್ಲಿ ಉಂಟಾಗಿದೆ. ಉಗ್ರರು ಹಾರಿಸಿದ ರಾಕೆಟ್‌ಗಳನ್ನು ಇಸ್ರೇಲ್ ಸೇನೆಯ ಛೇದಕಗಳು ತುಂಡರಿಸಿವೆ. ಅದು ಎಲ್ಲೆಂದರಲ್ಲಿ ಚದುರಿ ಬಿದ್ದಿದೆ. ಗಾಝಾ ಪಟ್ಟಿಯಲ್ಲಿರುವ ಶಾಲೆಗಳು ಮತ್ತು ಇತರ ಸಂಸ್ಥೆಗಳನ್ನು ಮುಚ್ಚ ಲಾಗಿದೆ. ಹಮಸ್ ಉಗ್ರ ಸಂಘಟನೆಯ ವಕ್ತಾರ ಪ್ರತಿಕ್ರಿಯೆ ನೀಡಿ ಇಸ್ರೇಲ್‌ನತ್ತ ಮತ್ತಷ್ಟು ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅದಕ್ಕೆ ಇಸ್ರೇಲ್ ಮಿಲಿಟರಿ ವಕ್ತಾರರೂ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಮಧ್ಯಪ್ರಾಚ್ಯಕ್ಕಾಗಿನ ರಾಯಭಾರಿ ನಿಕೋಲೇ ಮ್ಲಡೆನೋವ್ ಕೂಡಲೇ ಇಸ್ರೇಲ್-ಹಮಸ್ ದಾಳಿ ನಿಲ್ಲಿಸಬೇಕು. ಶಾಂತಿ ಸ್ಥಾಪನೆಯತ್ತ ಮನಸ್ಸು ಮಾಡಬೇಕು ಎಂದು ಹೇಳಿದ್ದಾರೆ. ಇಂಥ ಪರಿಸ್ಥಿತಿ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.