Advertisement

ಬಸವ ಜನ್ಮಭೂಮಿಯಲ್ಲಿ ಗೆಲುವಿಗೆ ಕಾದಾಟ

04:55 PM Apr 06, 2018 | |

ವಿಜಯಪುರ: ಸಮಾನತೆಯ ಹರಿಹಾರ, ಜಗತ್ತಿನ ಮೂಢನಂಬಿಕೆ ತೊಡೆಯಲು ವೈಚಾರಿಕ ಪ್ರಜ್ಞೆಯ ಬೆಳಕು ನೀಡಿದ ಬಸವೇಶ್ವರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಜಿಲ್ಲೆಯ ಇತರೆ ಕ್ಷೇತ್ರಗಳಂತೆ ಅಭಿವೃದ್ಧಿ ಹೀನ ತಾಲೂಕುಗಳಲ್ಲಿ ಒಂದು. ಕೃಷ್ಣೆಯನ್ನೇ ಒಡಲಲ್ಲಿ ಇರಿಸಿಕೊಂಡರೂ ಕ್ಷೇತ್ರದಲ್ಲಿ ಕುಡಿಯುವ ನೀರಿನ ದಾಹ ಇದ್ದೇ ಇದೆ. ಕಾಂಗ್ರೆಸ್‌ ಭದ್ರಕೋಟೆ ಎನಿಸಿರುವ ಈ ನೆಲವನ್ನು ಮತ್ತೆ ಸ್ವಾಧೀನಕ್ಕೆ ಪಡೆಯಲು ಬಿಜೆಪಿ ಹವಣಿಸುತ್ತಿದ್ದರೆ, ಒಂದು ಬಾರಿಯಾದರೂ ಖಾತೆ ತೆರೆಯಲು ಜೆಡಿಸ್‌ ಪೈಪೋಟಿ ನಡೆಸಿದೆ.

Advertisement

ನೀರಾವರಿ ಈ ಕ್ಷೇತ್ರದ ಬಹು ದೊಡ್ಡ ಬಲವಾದರೆ, ನೀರಾವರಿ ಹಾಗೂ ವಿದ್ಯುತ್‌ ಯೋಜನೆಗಳಿಗೆ ಭೂಮಿ ಕಳೆದುಕೊಂಡು ಸಂತ್ರಸ್ತರ ಸಮಸ್ಯೆಯೇ ಇಲ್ಲಿನ ಬಲಹೀನತೆ. ಕೃಷ್ಣಾ ನದಿಗೆ ನಿರ್ಮಿಸಿರುವ ಲಾಲಬಹದ್ದೂರ ಶಾಸ್ತ್ರಿ ಜಲಾಶಯ ಇರುವುದು ಇದೇ ಕ್ಷೇತ್ರದ ಆಲಮಟ್ಟಿಯಲ್ಲಿ. ಸಂತ್ರಸ್ತರ ಪುನರ್ವಸತಿ ಕೇಂದ್ರಗಳು ಅಭಿವೃದ್ಧಿಗೆ ಕಾಯುತ್ತಿವೆ. ಈಚೆಗಷ್ಟೇ ತಲೆ ಎತ್ತಿರುವ ದೇಶಕ್ಕೆ ಬೆಳಕು ನೀಡುವ ಮಹತ್ವಾಕಾಂಕ್ಷೆಯ ಎನ್‌ಟಿಪಿಸಿ ಕೂಡಗಿ ಯೋಜನೆ ಕೂಡ ಈ ಕ್ಷೇತ್ರದಲ್ಲೇ ಇದೆ. ಪರಿಸರಕ್ಕೆ ಹಾನಿ ಎಂಬ ಕಾರಣಕ್ಕೆ ಈ ಯೋಜನೆ ವಿರೋಧಿಸಿ ರೈತರು ಗುಂಡೇಟು ತಿಂದಿದ್ದು, ನೂರಾರು ರೈತರು ಜೈಲು ಪಾಲಾಗಿ ಕೋರ್ಟ್‌ ಅಲೆಯುತ್ತಿದ್ದರು. ಈಚೆಗಷ್ಟೇ ಈ ರೈತರ ಮೇಲಿನ ಮೊಕದ್ದಮೆ ಹಿಂಪಡೆಯುವ ಮೂಲಕ ಸರ್ಕಾರ ರೈತರಿಗೆ ಸಂಕಷ್ಟದಿಂದ ಮುಕ್ತಿ ನೀಡಿದೆ.

ಇಂಥ ನೆಲಕ್ಕೆ ಒಂದೂವರೆ ದಶಕದ ಹಿಂದೆ ಕಾಲಿಟ್ಟವರು ತಿಕೋಟಾ ಕ್ಷೇತ್ರದಲ್ಲಿ ಜನತಾದಳ ಹಾಗೂ ಬಿಜೆಪಿಯಿಂದ
ಎರಡು ಬಾರಿ ಶಾಸಕರಾಗಿದ್ದ ಶಿವಾನಂದ ಪಾಟೀಲ. ಇದೀಗ ಬಸವನಬಾಗೇವಾಡಿ ಕ್ಷೇತ್ರಕ್ಕೆ ಅವರೇ ಶಾಸಕರು. ಈ
ಕ್ಷೇತ್ರದಿಂದಲೂ ಎರಡು ಬಾರಿ ಶಾಸಕರಾಗಿರುವ ಶಿವಾನಂದ ಪಾಟೀಲ ಅವರು ನಾಲ್ಕು ಬಾರಿ ಶಾಸಕರಾದರೂ ಸಚಿವರಾಗುವ ಕನಸು ಈಡೇರಿಲ್ಲ.

ಇದೀಗ ಇದೇ ಕ್ಷೇತ್ರದಿಂದ ಐದನೇ ಬಾರಿಗೆ ವಿಧಾನಸಭೆ ಪ್ರವೇಶಕ್ಕೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿರುವ ಏಕಮೇವಾದ್ವಿತಿಯ ನಾಯಕ.

ಮಾಜಿ ಸಿಎಂ ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ ಬಿಜೆಪಿ ಸೇರುವ ಮೂಲಕ ಬಸವನಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಭದ್ರಕೋಟೆ ಛಿದ್ರಗೊಳಿಸಿ ಎರಡು ಬಾರಿ ಗೆದ್ದವರು. ತಮ್ಮ ಮೂಲಕ ಬಿಜೆಪಿ ಖಾತೆ ತೆರೆದ ಎಸ್‌.ಕೆ. ಬೆಳ್ಳುಬ್ಬಿ ಅಪ್ಪಟ ಹಳ್ಳಿ ಸೊಗಡಿನ ರಾಜಕೀಯ ನಾಯಕ.

Advertisement

ಯಡಿಯೂರಪ್ಪ ಸಿಎಂ ಆಗಿದ್ದಾಗ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದು ಶಾಸಕತ್ವ ಅನರ್ಹತೆಯಿಂದ ಶಾಸಕ ಸ್ಥಾನಕ್ಕೆ
ಕುತ್ತು ತಂದುಕೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ನಂತರ ಸಚಿವರೂ ಆಗಿದ್ದರು. ಇದೀಗ ಅವರು ಸಂಗರಾಜ
ದೇಸಾಯಿ ಎಂಬ ಯುವಕನೊಂದಿಗೆ ಬಿಜೆಪಿ ಟಿಕೆಟ್‌ ಪಡೆಯಲು ಪೈಪೋಟಿ ಎದುರಿಸುತ್ತಿದ್ದಾರೆ. ಸಂಗರಾಜ ದೇಸಾಯಿ ಕಳೆದ ಚುನಾವಣೆಯಲ್ಲಿ ಕೆಜೆಪಿ  ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಇತ್ತ ಜೆಡಿಎಸ್‌ ಟಿಕೆಟ್‌ ಪಡೆದು ಕಳೆದ ಎರಡು ಚುನಾವಣೆಯಲ್ಲಿ ಪರಾಭವ ಹೊಂದಿರುವ ಸೋಮನಗೌಡ ಬಿ. ಪಾಟೀಲ ಉರ್ಫ್‌ ಅಪ್ಪುಗೌಡ, ಈ ಬಾರಿಯೂ ಟಿಕೆಟ್‌ ಆಕಾಂಕ್ಷಿ. ಇದೇ ಕ್ಷೇತ್ರದಿಂದ ಸೋಮನಗೌಡ ಅವರ ತಂದೆ ಬಿ.ಎಸ್‌.ಪಾಟೀಲ ಮನಗೂಳಿ ಅವರನ್ನು ಐದು ಬಾರಿ ಆಯ್ಕೆ ಮಾಡಿದ್ದ ಕ್ಷೇತ್ರದ ಮತದಾರರು, ಅವರು ಸಚಿವರಾಗಲು ನೆರವಾಗಿದ್ದರು. ಆದರೆ ಈ ಕ್ಷೇತ್ರದ ಮತದಾರ ಪ್ರಭು ಇದೀಗ ಬಿ.ಎಸ್‌. ಪಾಟೀಲ ಮನಗೂಳಿ ಅವರ ಪುತ್ರ ಅಪ್ಪುಗೌಡರಿಗೆ ಮಾತ್ರ ಎರಡು ಚುನಾವಣೆಯಲ್ಲೂ ಆಶೀರ್ವಾದ ಮಾಡಿಲ್ಲ ಎಂಬುದು ಗಮನೀಯ. ಎರಡು ಸೋಲಿನ ಕಹಿ ಅನುಭವ ಮೂರನೇ ಸ್ಪರ್ಧೆಯಾದರೂ ಗೆಲುವಿನ ನಗೆಯಾಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

ಕ್ಷೇತ್ರದ ಬೆಸ್ಟ್‌ ಏನು?
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ ಬಸವನಬಾಗೇವಾಡಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ, ಕೂಡಗಿ ಎನ್‌ಟಿಪಿಸಿ ವಿವಾದ ಇತ್ಯರ್ಥ, ರೈತರ ಮೇಲಿನ 224 ಮೊಕದ್ದಮೆ ಹಿಂದಕ್ಕೆ, ಗುತ್ತಿಬಸವಣ್ಣ ಏತ ನೀರಾವರಿ ಯೋಜನೆಗಳಿಗೆ ಚಾಲನೆ, ರಾಜ್ಯಕ್ಕೆ ಮಾದರಿ ವಸತಿ ಯೋಜನೆಗಾಗಿ ಬಡವರಿಗೆ ಬಸವ ವಸತಿಗಾಗಿ ಜಿ-1 ಮನೆ ನಿರ್ಮಾಣ, ನಿಡಗುಂದಿ, ಕೊಲ್ಹಾರ ತಾಲೂಕು ಕೇಂದ್ರದ ಮಾನ್ಯತೆ, ಮನಗೂಳಿ, ಕೊಲ್ಹಾರ, ನಿಡಗುಂದಿ ಗ್ರಾಪಂನಿಂದ ಪಟ್ಟಣ ಪಂಚಾಯತ್‌ ಮೇಲ್ದರ್ಜೆಗೆ, ಮೆಘಾ ಮಾರುಕಟ್ಟೆ ನಿರ್ಮಾಣಕ್ಕೆ ಚಾಲನೆ, ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ನೀಗಲು 44 ಕೋಟಿ ರೂ, ಯೋಜನೆ ಅನುಷ್ಠಾನ, ಮನಗೂಳಿ ಬಿಜ್ಜಳ-ಬಾರಖೇಡ-ಬೀಳಗಿ ಸೇರಿದಂತೆ ತಾಲೂಕಿನಲ್ಲಿ 7 ಪ್ರಮುಖ ದ್ವಿಪಥ ರಸ್ತೆಯ ನಿರ್ಮಾಣ, ಡೋಣಿ ನದಿಗೆ ಪ್ರವಾಹ ತಪ್ಪಿಸಲು ಬ್ರಿಜ್‌-ರಸ್ತೆ ನಿರ್ಮಾಣ, ಶೈಕ್ಷಣಿಕ ಪ್ರಗತಿಗಾಗಿ ಹಲವು ಸರ್ಕಾರಿ ಕಾಲೇಜುಗಳ ಮಂಜೂರು.

ಕ್ಷೇತ್ರದ ದೊಡ್ಡ ಸಮಸ್ಯೆ?
ಬಸವನಬಾಗೇವಾಡಿ ಪಟ್ಟಣದಲ್ಲಿ ಸಂಚಾರಿ ಜನದಟ್ಟಣೆ ನೀಗಲು ರಿಂಗ್‌ ರಸ್ತೆ ನಿರ್ಮಾಣ ಯೋಜನೆ ನನೆಗುದಿಗೆ. ಕಂದಾಯ ವೀಭಾಗಿ ಕಚೇರಿ ಬೇಡಿಕೆ ಈಡೇರಿಲ್ಲ, ತಾಲೂಕು ಕ್ರೀಡಾಂಗಣ ಕನಸು ಕೈಗೂಡಲಿಲ್ಲ. ಬಸವೇಶ್ವರ ಆರ್ಟ್‌ ಗ್ಯಾರಲಿ ಭರವಸೆ ಅನುಷ್ಠಾನಕ್ಕೆ ಬಂದಿಲ್ಲ. ಬಸವ ಜನ್ಮಭೂಮಿಗೆ ಸರಕಾರಿ ವೈದ್ಯಕೀಯ ಇಂಜನೀಯರಿಂಗ್‌
ಕಾಲೇಜು ಮಂಜೂರಿ ಬೇಡಿಕೆ ಈಡೇರಿಲ್ಲ. ಮುಳವಾಡ, ಚಿಮ್ಮಲಗಿ, ಪ್ರಮುಖ ಹಳ್ಳಿಗಳಿಗೆ ಕರೆ ನೀರು ತುಂಬುವ
ಯೋಜನೆ ಹೆಚ್ಚಬೇಕು.

ಶಾಸಕರು ಏನಂತಾರೆ?
ಚುನಾವಣಾ ರಾಜಕೀಯಕ್ಕಿಂತ ಅಭಿವೃದ್ಧಿಗೆ ನಾನು ಆದ್ಯತೆ ನೀಡಿದ್ದೇನೆ. ವಿರೋಧಿಗಳು ಮೆಚ್ಚುವಂತೆ ಕ್ಷೇತ್ರದಲ್ಲಿ ಓರ್ವ ಶಾಸಕನಾಗಿ ನನ್ನ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಬಹು ದಿನಗಳ ಬೇಡಿಕೆಯಾಗಿದ್ದ ಬಸವನಬಾಗೇವಾಡಿ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನ, ಹೊಸ ತಾಲೂಕುಗಳ ಸ್ಥಾಪನೆ, ಪ್ರಮುಖ ಪಟ್ಟಣಗಳಿಗೆ ಪಟ್ಟಣ ಪಂಚಾಯತ್‌ ಮೇಲ್ದರ್ಜೆಗೆ, ಶೈಕ್ಷಣಿಕ ಪ್ರಗತಿಗೆ ಹಲವು ಕಾಲೇಜುಗಳನ್ನು ಮಂಜೂರು ಮಾಡಿಸಿದ್ದೇನೆ. ಬಸವ ಪಥದ ಕಾಯಕವೇ ನನ್ನ ಆದ್ಯತೆ, ನನ್ನ ಕೆಲಗಳೇ ನನ್ನ ಗೆಲುವಿಗೆ ಬಸವ ಶ್ರೀರಕ್ಷೆ.. 
ಶಿವಾನಂದ ಎಸ್‌. ಪಾಟೀಲ

ಕ್ಷೇತ್ರ ಮಹಿಮೆ
13 ಚುನಾವಣೆ ಕಂಡಿರುವ ಬಸವ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರದಲ್ಲಿ 8 ಬಾರಿ ಗೆದ್ದಿರುವ ಕಾಂಗ್ರೆಸ್‌, ಒಂದು ಬಾರಿ ಅಂಗ ಪಕ್ಷ ಕಾಂಗ್ರೆಸ್‌-ಐ ಅಭ್ಯರ್ಥಿಯನ್ನೂ ಆಯ್ಕೆ ಮಾಡಿ ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ. ಕ್ಷೇತ್ರಕ್ಕೆ ನಡೆದ ಮೊದಲ ಎರಡು ಚುನಾವಣೆಯಲ್ಲಿ ಸುಶೀಲಾಬಾಯಿ ಶಹಾ ಎಂಬ ಮಹಿಳೆ ಗೆದ್ದಿರುವುದು ವಿಶೇಷ. ಮಹಿಳಾ ಸಮಾನತೆ ಹರಿಕಾರ ಬಸವ ಜನ್ಮಭೂಮಿ ಜನರು ಮಹಿಳೆಯನ್ನು ಆಯ್ಕೆ ಮಾಡಿದ್ದೇ ಬಸವ ತತ್ವಕ್ಕೆ ಆದ್ಯತೆ ನೀಡಿದ್ದಕ್ಕೆ ಸಾಕ್ಷಿ. ವ್ಯಕ್ತಿ ಪೂಜೆಗೆ ಆದ್ಯತೆ ನೀಡಿರುವ ಈ ಕ್ಷೇತ್ರ ಮನಗೂಳಿಯ ಬಿ.ಎಸ್‌. ಪಾಟೀಲ ಅವರನ್ನು ಐದು ಬಾರಿ ವಿಧಾನಸೌಧಕ್ಕೆ ಕಳಿಸಿದ್ದು, ಎಸ್‌.ಕೆ.ಬೆಳ್ಳುಬ್ಬಿ ಅವರ ಮೂಲಕ ಬಿಜೆಪಿ ಎರಡು ಬಾರಿ ಇಲ್ಲಿ ನೆಲೆ ಕಂಡುಕೊಂಡಿದೆ. ಹಾಲಿ ಶಾಸಕ ಶಿವಾನಂದ ಪಾಟೀಲ ಕೂಡ ಎರಡು ಬಾರಿ ಗೆದ್ದಿದ್ದು ಈ ಕ್ಷೇತ್ರದಿಂದ ಮೂರನೇ ಅವಧಿಗೆ ಸನ್ನದ್ಧರಾಗಿದ್ದಾರೆ. ಕುಮಾರಗೌಡ ಸೇರಿ ಇಬ್ಬರು ಈ ಕ್ಷೇತ್ರದಲ್ಲಿ ಜನತಾಪಕ್ಷದಿಂದ ಗೆದ್ದಿದ್ದಾರೆ. 

ಯಾವುದೇ ಒಂದು ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಮೊದಲು ಶಿಕ್ಷಣ, ಕುಡಿಯುವ ನೀರು, ವಿದ್ಯುತ್‌, ರಸ್ತೆಗಳಂಥ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕು. ಶಾಸಕ ಶಿವಾನಂದ ಪಾಟೀಲ ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಆದ್ಯತೆ ನೀಡಿದ್ದಾರೆ. ಶೈಕ್ಷಣಿಕ ಪ್ರಗತಿಗಾಗಿ ಹಲವು ಕಾಲೇಜುಗಳನ್ನು ಮಂಜೂರು ಮಾಡಿಸಿದ್ದಾರೆ.
ಆಶ್ರೀಶೈಲ ಹೆಬ್ಟಾಳ, ಬಸವನಬಾಗೇವಾಡಿ

ವಿದ್ಯಾವಂತರ ನಿರುದ್ಯೋಗಿಗಳಿಗೆ ಉದ್ಯೋಗಕ್ಕಾಗಿ ಕೈಗಾರಿಕೆ ಸ್ಥಾಪನೆ ಆಗಲಿಲ್ಲ. ನಿರುದ್ಯೋಗ ಕೂಡಗಿ ಬಳಿ
ಸ್ಥಾಪನೆ ಆಗಿರುವ ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಉತ್ಪಾದನಾ ಉದ್ಯಮದಲ್ಲೂ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ. ಸ್ಥಳೀಯ ನಿರುದ್ಯೋಗಿಗಳಿಗೆ ಸುಲಭವಾಗಿ ಉದ್ಯೋಗ ನೀಡುವ ಕೈಗಾರಿಕೆಗಳು ಸ್ಥಾಪನೆ ಆಗಲಿ.
ದುಂಡಪ್ಪ ಹಂಡಿ, ಮುತ್ತಗಿ

ಕಳೆದ 5 ದಶಕಗಳಿಂದ ಜಾಳಿಹಾಳ ತಾಂಡಾಕ್ಕೆ ರಸ್ತೆ ಸಂಪರ್ಕ ಇರಲಿಲ್ಲ. ಆದರೆ ಶಾಸಕ ಶಿವಾನಂದ ಪಾಟೀಲ ರಸ್ತೆ ಸಂಪರ್ಕ ಕಲ್ಪಿಸಿದ್ದಾರೆ ಮತ್ತು ರೈತರ ತೋಟ, ಹೊಲ, ಗದ್ದೆಗಳಿಗೂ ರಸ್ತೆ ಸಂಪರ್ಕ ಕಲ್ಪಿಸಿದ್ದು, ಅನುಕೂಲವಾಗಿದೆ.
ಅಶೋಕ ರಾಠೊಡ, ಜಾಲಿಹಾಳ ತಾಂಡಾ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next