Advertisement

ಬ್ಯಾಟಿಂಗ್‌ ವೈಫ‌ಲ್ಯ; ಭಾರತಕ್ಕೆ ಸೋಲು

12:30 AM Mar 05, 2019 | |

ಗುವಾಹಟಿ: ಘೋರ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ಭಾರತದ ವನಿತೆಯರು ಸೋಮವಾರ ನಡೆದ ಪ್ರವಾಸಿ ಇಂಗ್ಲೆಂಡ್‌ ಎದುರಿನ ಮೊದಲ ಟಿ20 ಪಂದ್ಯದಲ್ಲಿ 41 ರನ್ನುಗಳ ಸೋಲಿಗೆ ತುತ್ತಾಗಿದ್ದಾರೆ.

Advertisement

ಏಕದಿನ ಸರಣಿ ಕಳೆದುಕೊಂಡ ಹತಾಶೆಯಲ್ಲಿದ್ದ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ನಡೆಸಿ 4ಕ್ಕೆ 160 ರನ್‌ ಪೇರಿಸಿ ಸವಾಲೊಡ್ಡಿತು. ಭಾರತ 6 ವಿಕೆಟಿಗೆ 119 ರನ್ನನ್ನಷ್ಟೇ ಗಳಿಸಿ ಶರಣಾಯಿತು. ಇದರಲ್ಲಿ 22 ರನ್‌ ಎಕ್ಸ್‌ಟ್ರಾ ರೂಪದಲ್ಲಿ ಬಂದಿತ್ತು. ಹರ್ಮನ್‌ಪ್ರೀತ್‌ ಕೌರ್‌ ಅನುಪಸ್ಥಿತಿಯಲ್ಲಿ ಸ್ಮತಿ ಮಂಧನಾ ಭಾರತ ತಂಡವನ್ನು ಮುನ್ನಡೆಸಿದ್ದರು. ದುರದೃಷ್ಟವಶಾತ್‌ ಮಂಧನಾ ಕೂಡ ಕ್ರೀಸ್‌ ಆಕ್ರಮಿಸಿಕೊಳ್ಳುವಲ್ಲಿ ವಿಫ‌ಲರಾದರು.

ಭಾರತ 46 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಸೋಲನ್ನು ಖಾತ್ರಿಪಡಿಸಿತ್ತು. ಆಗ ಹಲೀìನ್‌ ಡಿಯೋಲ್‌ (8). ಸ್ಮತಿ ಮಂಧನಾ (2), ಜೆಮಿಮಾ ರೋಡ್ರಿಗಸ್‌ (2), ಮಿಥಾಲಿ ರಾಜ್‌ (7) ಮತ್ತು ವೇದಾ ಕೃಷ್ಣಮೂರ್ತಿ (15) ಪೆವಿಲಿಯನ್‌ ಸೇರಿಯಾಗಿತ್ತು.

ದೀಪ್ತಿ ಶರ್ಮ (ಔಟಾಗದೆ 22) ಮತ್ತು ಶಿಖಾ ಪಾಂಡೆ (ಔಟಾಗದೆ 23) ಕೊನೆಯ 5.1 ಓವರ್‌ಗಳಲ್ಲಿ ಅಜೇಯ ಜತೆಯಾಟವೊಂದನ್ನು ನಡೆಸಿದ್ದರಿಂದ ಭಾರತ ಆಲೌಟ್‌ ಆಗುವುದರಿಂದ ಪಾರಾಯಿತು. ಈ ನಡುವೆ ಅರುಂಧತಿ ರೆಡ್ಡಿ 18 ರನ್‌ ಮಾಡಿದರು.

ಇಂಗ್ಲೆಂಡ್‌ ಭರ್ಜರಿ ಆರಂಭ
ಇಂಗ್ಲೆಂಡಿಗೆ ಟಾಮಿ ಬೇಮಂಟ್‌ (62) ಮತ್ತು ಡೇನಿಯಲ್‌ ವ್ಯಾಟ್‌ (35) ಸೇರಿಕೊಂಡು ಭರ್ಜರಿ ಆರಂಭ ಒದಗಿಸಿದರು. ಇವರಿಬ್ಬರ 11.3 ಓವರ್‌ ಜತೆಯಾಟದಲ್ಲಿ 89 ರನ್‌ ಒಟ್ಟುಗೂಡಿತು. ನಥಾಲಿ ಸಿವರ್‌ (4) ಬೇಗನೇ ಔಟಾದರೂ ನಾಯಕಿಯ ಆಟವಾಡಿದ ಹೀತರ್‌ ನೈಟ್‌ 40 ರನ್‌ ಬಾರಿಸಿ ಭಾರತವನ್ನು ಕಾಡಿದರು.

Advertisement

62 ರನ್‌ ಮಾಡಿದ ಟಾಮಿ ಬೇಮಂಟ್‌ ಈ ಪಂದ್ಯದ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 57 ಎಸೆತಗಳ ಈ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಒಳಗೊಂಡಿತ್ತು. ಈ ಪಂದ್ಯದಲ್ಲಿ ಒಂದೂ ಸಿಕ್ಸರ್‌ ಸಿಡಿಯಲಿಲ್ಲ.

ಸರಣಿಯ ಮುಂದಿನೆರಡು ಪಂದ್ಯಗಳು ಮಾ. 7 ಮತ್ತು 9ರಂದು ಗುವಾಹಟಿಯಲ್ಲೇ ನಡೆಯಲಿವೆ.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-4 ವಿಕೆಟಿಗೆ 160 (ಬೇಮಂಟ್‌ 62, ನೈಟ್‌ 40, ವ್ಯಾಟ್‌ 35, ರಾಧಾ ಯಾದವ್‌ 33ಕ್ಕೆ 2). ಭಾರತ-6 ವಿಕೆಟಿಗೆ 119 (ಶಿಖಾ ಔಟಾಗದೆ 23, ದೀಪ್ತಿ ಔಟಾಗದೆ 22, ಅರುಂಧತಿ 18, ಬ್ರಂಟ್‌ 21ಕ್ಕೆ 2, ಲಿನ್ಸೆ ಸ್ಮಿತ್‌ 22ಕ್ಕೆ 2). ಪಂದ್ಯಶ್ರೇಷ್ಠ: ಟಾಮಿ ಬೇಮಂಟ್‌.

Advertisement

Udayavani is now on Telegram. Click here to join our channel and stay updated with the latest news.

Next