ಹೊಸದಿಲ್ಲಿ: 2008ರಲ್ಲಿ ನಡೆದಿದ್ದ ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಹುತಾತ್ಮರಾಗಿದ್ದ ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಅವರಿಗೆ ಮರಣೋತ್ತರವಾಗಿ ಶೌರ್ಯ ಪದಕ ನೀಡಿ ಗೌರವಿಸಲಾಗಿದೆ.
ಸ್ವಾತಂತ್ರ್ಯೋತ್ಸವದ ದಿನದಂದು ಪ್ರದಾನ ಮಾಡಲಾಗುವ ಶೌರ್ಯ ಪದಕಗಳ ಪಟ್ಟಿಯನ್ನು ಶುಕ್ರವಾರ ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಈ ಬಾರಿ, ರಾಷ್ಟ್ರಪತಿಯವರ ಪೊಲೀಸ್ ಶೌರ್ಯ ಪದಕಗಳನ್ನು (ಪಿಪಿಎಂಜಿ) ಪ್ರಕಟಿಸಿಲ್ಲ. ಬದಲಿಗೆ, ಪೊಲೀಸ್ ಶೌರ್ಯ ಪದಕಗಳನ್ನಷ್ಟೇ ಪ್ರಕಟಿಸಲಾ ಗಿದೆ. ಒಟ್ಟು 296 ಪದಕಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯಗಳು ಹಾಗೂ ಕೇಂದ್ರ ಪೊಲೀಸ್ ಹಾಗೂ ಭದ್ರತಾ ಪಡೆಗಳಿಗೆ ಶೌರ್ಯ ಪದಕ ಪ್ರಕಟಿಸಲಾಗಿದೆ.
ಒಟ್ಟು 81 ಪದಕ ಬಾಚಿಕೊಂಡಿರುವ ಜಮ್ಮು ಕಾಶ್ಮೀರ ಪೊಲೀಸ್ ಪಡೆ, ಈ ಬಾರಿ ಅತಿ ಹೆಚ್ಚು ಶೌರ್ಯ ಪದಕ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. 55 ಪದಕ ಪಡೆದುಕೊಂಡಿರುವ ಸಿಆರ್‌ಪಿಎಫ್, 2ನೇ ಗರಿಷ್ಠ ಪದಕ ಪಡೆದ ಗೌರವ ಪಡೆದಿದೆ. ಕಾಶ್ಮೀರ ಕಣಿವೆಯಲ್ಲಿ ಉಗ್ರರ ವಿರುದ್ಧದ ಕಾರ್ಯಾ ಚರಣೆಗಳನ್ನು ಸಮರ್ಥವಾಗಿ ನಿಭಾಯಿಸಿದ ಸಿಆರ್‌ಪಿಎಫ್ನ ಹೆಚ್ಚುವರಿ ಕಮಾಂಡೆಂಟ್ ನರೇಶ್ ಕುಮಾರ್ ಅವರಿಗೆ ಈ ಬಾರಿಯ ಶೌರ್ಯ ಪದಕ ಸಿಕ್ಕಿದೆ. ಆನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ (23), ದೆಹಲಿ ಪೊಲೀಸ್ ಇಲಾಖೆ (16), ಮಹಾರಾಷ್ಟ್ರ ಪೊಲೀಸ್ (14) ಹಾಗೂ ಜಾರ್ಖಂಡ್ (12) ಇವೆ.
ಐಟಿಬಿಪಿ ಶಿಫಾರಸು: ಮತ್ತೂಂದೆಡೆ, ಲಡಾಖ್‌ನಲ್ಲಿ ಚೀನ ಸೈನಿಕರೊಂದಿಗೆ ಮುಖಾಮುಖೀ ಯಾಗಿದ್ದ ತನ್ನ 254 ಸಿಬಂದಿಗೆ ಪ್ರಧಾನ ನಿರ್ದೇಶಕ (ಡಿಜಿ) ಮಟ್ಟದ ಸೇನಾ ಗೌರವ ಪ್ರದಾನ ಮಾಡಲು ಇಂಡೋ-ಟಿಬೆಟಿಯನ್ ಪೊಲೀಸ್ (ಐಟಿಬಿಪಿ) ಪಡೆ ನಿರ್ಧರಿಸಿದೆ. ಇದಲ್ಲದೆ, ಗಡಿ ಕಾವಲಿಗೆ ನಿಯೋಜಿತವಾಗಿರುವ 21 ತುಕಡಿಗಳ ಸಿಬಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕಗಳನ್ನು ನೀಡುವಂತೆ ಕೇಂದ್ರ ಸರಕಾರ ಕ್ಕೆ ಶಿಫಾರಸು ಸಲ್ಲಿಸಲಾಗಿದೆ.
ನಿರಂತರ ಹೋರಾಟ
ಗಡಿಯಲ್ಲಿ ಕಾವಲು ಕಾಯುತ್ತಿರುವ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಸಿಬಂದಿ ಇತ್ತೀಚೆಗೆ ಲಡಾಖ್‌ನಲ್ಲಿ ಚೀನ ಸೈನಿಕರ ವಿರುದ್ಧ ಮುಖಾಮುಖೀಯಾಗಿದ್ದು ಮಾತ್ರವಲ್ಲ, ಗಡಿಯ ಇತರ ಭಾಗಗಳಲ್ಲಿಯೂ ಶತ್ರುಗಳ ವಿರುದ್ಧ ಹೋರಾಟ ನಡೆಸಿದ್ದಾರೆ ಎಂದು ಹೇಳಿ ದ್ದಾರೆ. ಹೆಚ್ಚಾಗಿ ಚೀನ ಸೈನಿಕರೇ ಭಾರತದ ವಿರುದ್ಧ ಗಡಿಯಲ್ಲಿ ಕಾಲು ಕೆದರಿಕೊಂಡು ಜಗಳಕ್ಕೆ ಇಳಿಯುತ್ತಾರೆ. ಅಂಥ ಸಂದರ್ಭ ಗಳಲ್ಲಿ ಕೈ ಮಿಲಾಯಿಸಿ ಹೋರಾಟ ನಡೆಸಿದ್ದುಂಟು. ಅಂಥ ಕಾದಾಟಗಳು ಒಮ್ಮೊಮ್ಮೆ 20 ಗಂಟೆಗಳ ಕಾಲ ನಿರಂತರವಾಗಿ ನಡೆದ ಉದಾಹರಣೆಯಿದೆ ಎಂದು ಐಟಿಬಿಪಿ ಸಿಬಂದಿ ತಿಳಿಸಿದ್ದಾರೆ.