Advertisement

ಭಾರತ- ಇಂಗ್ಲೆಂಡ್‌ ನಡುವಿನ ಅಂತಿಮ ಪಂದ್ಯಕ್ಕೆ ಬ್ಯಾಟಿಂಗ್‌ ಬ್ಯೂಟಿ ಟ್ರ್ಯಾಕ್‌

03:24 AM Feb 28, 2021 | Team Udayavani |

ಅಹ್ಮದಾಬಾದ್‌: ಭಾರತ- ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಎರಡೇ ದಿನದಲ್ಲಿ ಮುಗಿದದ್ದು ಇತಿಹಾಸ. ಉಳಿದ ಮೂರು ದಿನಗಳಲ್ಲಿ ಅಂತಿಮ ಟೆಸ್ಟ್‌ ಪಂದ್ಯವನ್ನೂ ಇಲ್ಲಿ ಆಡಿ ಮುಗಿಸಬಹುದಿತ್ತು ಎಂಬುದು ವ್ಯಂಗ್ಯಭರಿತ ವಾಸ್ತವ!

Advertisement

ಭಾರತ ಈ “ಟರ್ನಿಂಗ್‌ ಟ್ರ್ಯಾಕ್‌’ ಅನ್ನು ಸಮರ್ಥಿಸಿಕೊಂಡರೂ ಇಂಗ್ಲೆಂಡ್‌ ಸೇರಿದಂತೆ ವಿಶ್ವದ ಬಹುತೇಕ ಕ್ರಿಕೆಟ್‌ ರಾಷ್ಟ್ರಗಳ ಪರಿಣಿತರು, ಮಾಜಿಗಳು, ಮಾಧ್ಯಮದವರು ಮೊಟೆರಾ ಪಿಚ್‌ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಪಿಚ್‌ ಐಸಿಸಿ ಕೆಂಗಣ್ಣಿಗೆ ಗುರಿಯಾಗಿಲ್ಲ ಎಂಬುದೊಂದು ಸಮಾಧಾನಕರ ಸಂಗತಿ. ಬಹುಶಃ ಇಲ್ಲೇ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯ ಕೂಡ ಇಂಥದೇ ಟ್ರ್ಯಾಕ್‌ ಮೇಲೆ ನಡೆದು, ಮತ್ತೆ 2-3 ದಿನಗಳಲ್ಲಿ ಮುಗಿದರೆ ಆಗ ಐಸಿಸಿ ಪ್ರವೇಶವಾಗುವುದರಲ್ಲಿ ಅನುಮಾನವಿಲ್ಲ.

ಇದನ್ನು ತಪ್ಪಿಸಲೆಂದೇ “ಬ್ಯಾಟಿಂಗ್‌ ಬ್ಯೂಟಿ ಟ್ರ್ಯಾಕ್‌’ ಮೇಲೆ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಲಾಗುವುದು ಎಂಬ ಮಾಹಿತಿ ಲಭಿಸಿದೆ. ಹೆಸರು ಹೇಳ ಬಯಸದ ಬಿಸಿಸಿಐ ಉನ್ನತ ಅಧಿಕಾರಿ ಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ.

“ಅಂತಿಮ ಪಂದ್ಯಕ್ಕಾಗಿ ಉತ್ತಮ ದರ್ಜೆಯ ಹಾರ್ಡ್‌ ಟ್ರ್ಯಾಕ್‌ ಒಂದನ್ನು ನಿರೀಕ್ಷಿಸಬಹುದು. ಇದು ಬ್ಯಾಟಿಂಗಿಗೆ ಅತ್ಯಂತ ಪ್ರಶಸ್ತವಾಗಿದ್ದು, ಸಾಕಷ್ಟು ಬೌನ್ಸ್‌ ಕೂಡ ಇರಲಿದೆ. ಇದು ಸಾಂಪ್ರದಾಯಿಕ ರೆಡ್‌ ಬಾಲ್‌ ಪಂದ್ಯವಾಗಿದ್ದು, ಎಲ್ಲರೂ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿರಬಹುದು’ ಎಂದು ಬಿಸಿಸಿಐ ಅಧಿಕಾರಿ ಹೇಳಿದರು. ಈ ಪಂದ್ಯ ಮಾ. 4ರಿಂದ ಆರಂಭವಾಗಲಿದೆ.

“ಡಸ್ಟ್‌ ಆಫ್ ಬೌಲ್‌’
ವಿಶ್ವದ ಈ ದೈತ್ಯ ಸ್ಟೇಡಿಯಂಗೆ ಧೂಳು ತುಂಬಿದ ಪಿಚ್‌ (ಡಸ್ಟ್‌ ಆಫ್ ಬೌಲ್‌) ಕಪ್ಪುಚುಕ್ಕಿಯಾಗಿ ಪರಿಣಮಿಸಿತ್ತು. ಉದ್ಘಾಟನ ಪಂದ್ಯದಲ್ಲೇ ಎಲ್ಲ ದಿಕ್ಕು ಗಳಿಂದಲೂ ಟೀಕೆ ಎದುರಿಸುವಂತಾದದ್ದು ವಿಪರ್ಯಾಸ. ಇಂಥ ಸ್ಥಿತಿ ಮರುಕಳಿಸದಂತೆ ಮಾಡುವುದು ಬಿಸಿಸಿಐ ಉದ್ದೇಶ.

Advertisement

“ಒಂದೇ ಸ್ಟೇಡಿಯಂನಲ್ಲಿ ಸತತ ಎರಡು ಟೆಸ್ಟ್‌ ಪಂದ್ಯಗಳು ನಡೆಯುವುದಿದ್ದರೆ ಆಗ ಮೊದಲಿನ ಪಂದ್ಯದ ಪಿಚ್‌ ವರದಿಯನ್ನಷ್ಟೇ ಗಮನಿಸಲಾಗುವುದಿಲ್ಲ. ಮತ್ತೂಂದು ಟೆಸ್ಟ್‌ ಇಲ್ಲಿ ಹೇಗೆ ಸಾಗುತ್ತದೆ, ಪಿಚ್‌ ಹೇಗೆ ವರ್ತಿಸುತ್ತದೆ ಎಂಬುದೂ ಮುಖ್ಯವಾಗುತ್ತದೆ. ಅಂತಿಮ ಟೆಸ್ಟ್‌ ಮುಗಿದ ಬಳಿಕ ಮ್ಯಾಚ್‌ ರೆಫ್ರಿ ಜಾವಗಲ್‌ ಶ್ರೀನಾಥ್‌ ಐಸಿಸಿಗೆ ವರದಿ ನೀಡಲಿದ್ದಾರೆ. ಸದ್ಯ ಇಂಗ್ಲೆಂಡ್‌ ತಂಡ ಕೂಡ ಈ ಪಿಚ್‌ ವಿರುದ್ಧ ಐಸಿಸಿಗೆ ಅಧಿಕೃತ ದೂರು ಸಲ್ಲಿಸಿಲ್ಲ’ ಎಂದು ಬಿಸಿಸಿಐ ಅಧಿಕಾರಿ ಹೇಳಿದರು.

ಪಿಂಕ್‌ ಬಾಲ್‌, ಲೋ ಸ್ಕೋರ್‌
ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ತಂಡವೊಂದು ತೀವ್ರ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ ಸಣ್ಣ ಮೊತ್ತಕ್ಕೆ ಕುಸಿಯುವುದು ಸಾಮಾನ್ಯವಾಗುತ್ತಿದೆ. ಭಾರತ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ 36 ರನ್ನಿಗೆ ಆಲೌಟ್‌ ಆದ ನಿದರ್ಶನ ಇನ್ನೂ ಮಾಸಿಲ್ಲ. ಅದೇ ರೀತಿ ಇಂಗ್ಲೆಂಡ್‌ ಕೂಡ ನ್ಯೂಜಿಲ್ಯಾಂಡ್‌ ಎದುರಿನ 2018ರ ಆಕ್ಲೆಂಡ್‌ ಟೆಸ್ಟ್‌ ನಲ್ಲಿ 58 ರನ್ನಿಗೆ ದಿಂಡುರುಳಿ ಇನ್ನಿಂಗ್ಸ್‌ ಸೋಲಿಗೆ ತುತ್ತಾಗಿತ್ತು. ಹಾಗಾದರೆ ಇಲ್ಲಿನ ಪಿಚ್‌ ವಿರುದ್ಧವೂ ಅಪಸ್ವರ ಎತ್ತಬೇಕಿತ್ತಲ್ಲವೇ ಎಂಬುದೊಂದು ಪ್ರಶ್ನೆ!

Advertisement

Udayavani is now on Telegram. Click here to join our channel and stay updated with the latest news.

Next