ಅಫಜಲಪುರ: ಪ್ರಸಿದ್ಧ ಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ಸನ್ನಿ ಧಿಗೆ ಬಂದ ಭಕ್ತರು ಭೀಮಾ ನದಿ ಖಾಲಿಯಾಗಿರುವುದನ್ನು ಕಂಡು 1972ರ ಬರಗಾಲ ನೆನಪಿಸಿಕೊಳ್ಳುತ್ತಿದ್ದಾರೆ.
ಭೀಕರ ಬರಕ್ಕೆ ಭೀಮಾ ಹಾಗೂ ಅಮರ್ಜಾ ನದಿಗಳು ಬತ್ತಿ ಹೋಗಿವೆ. ಇಲ್ಲಿಗೆ ಬರುವ ಭಕ್ತರಿಗೆ ನದಿಯಲ್ಲಿ 20 ರೂ.ಗೆ ಒಂದು ಬಕೆಟ್‌ನಂತೆ ನೀರು ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಸೀಮಾಂಧ್ರ, ಕೇರಳ ರಾಜ್ಯಗಳಿಂದ ಬರುವ ಭಕ್ತರು 20 ರೂ.ಗೆ ಬಕೆಟ್ ನೀರು ಪಡೆದು ನದಿಯಲ್ಲಿರುವ ಕಲ್ಲು ಬಂಡೆಗಳ ಪಕ್ಕದಲ್ಲಿ ಕುಳಿತು ಪುಣ್ಯಸ್ನಾನ ಮಾಡುವಂತಾಗಿದೆ.
ನದಿಯಲ್ಲಿ ನೀರು ಮಾರುವವರ ವ್ಯಾಪಾರ ಬಲು ಜೋರಾಗಿ ನಡೆದಿದೆ. ಭೀಮಾ, ಅಮರ್ಜಾ ನದಿ ಖಾಲಿಯಾಗಿದ್ದರಿಂದ ಗಾಣಗಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಜಾನುವಾರುಗಳಿಗೂ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ನದಿಯಲ್ಲಿ ಎಷ್ಟು ಆಳಕ್ಕೆ ಅಗೆದರೂ ನೀರು ಬರುತ್ತಿಲ್ಲ. ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ.
ಹೀಗಾಗಿ, ಕುಡಿಯುವ ನೀರಿಗಾಗಿ ದನ ಕರುಗಳು ನದಿಯಲ್ಲಿ ಸುಡು ಬಿಸಿಲಲ್ಲಿ ತಿರುಗುತ್ತಿವೆ. ನದಿಗೆ ಮರು ಜೀವ ಬರಬೇಕಾದರೆ ರಾಜ್ಯ ಸರ್ಕಾರ ಕೃಷ್ಣಾ ಅಥವಾ ಉಜನಿ ಜಲಾಶಯಗಳಿಂದ ನೀರು ತರುವ ಕೆಲಸ ಮಾಡಬೇಕು. ದತ್ತನ ದರ್ಶನಕ್ಕೆ ಬಂದಿದ್ದ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಭರವಸೆ ಕೊಟ್ಟಿದ್ದಾರೆ.
ಪರಿಶೀಲಿಸಿ ಕ್ರಮ: ನದಿಯಲ್ಲಿ ನೀರು ಮಾರುತ್ತಿರುವ ವಿಷಯ ಗ್ರಾಪಂಗೆ, ಇಲ್ಲವೇ ದೇವಸ್ಥನಾದ ಆಡಳಿತ ಮಂಡಳಿ ಗಮನಕ್ಕೆ ಬಂದಿಲ್ಲ. ಇಲ್ಲಿಗೆ ಬರುವ ಭಕ್ತರಿಗೆ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ.
ನೀರು ಮಾರಾಟ ಮಾಡುತ್ತಿರುವ ವ್ಯಕ್ತಿ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೇವಲ ಗಾಣಗಾಪುರ ಗ್ರಾಪಂ ಅಧ್ಯಕ್ಷ ಮಹೇಶ ಗುತ್ತೇದಾರ, ದೇವಲಗಾಣಗಾಪುರ ಪಿಡಿಒ ಶಂಕರ ದ್ಯಾಮಣ್ಣವರ, ದತ್ತ ದೇವಸ್ಥಾನ ಗಾಣಗಾಪುರ ದೇವಸ್ಥಾನದ ಮುಖ್ಯಾಧಿ ಕಾರಿ ಕೆ.ಜಿ.ಬಿರಾದಾರ ತಿಳಿಸಿದ್ದಾರೆ.
* ಮಲ್ಲಿಕಾರ್ಜುನ ಹಿರೇಮಠ