Advertisement

ಶಾಲೆಗಳು ಚಾರಿತ್ರ್ಯ ರೂಪಿಸುವ ಕೇಂದ್ರ

06:38 AM Jan 27, 2019 | |

ಬಂಕಾಪುರ: ಶಾಲೆಗಳು ಮನುಷ್ಯನ ಚಾರಿತ್ರ್ಯ ರೂಪಿಸುವ ಕೇಂದ್ರಗಳಾಗಿವೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.ಸದಾಶಿವಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 14ನೇ ದಶಮಾನೋತ್ಸವ ಸಮಾರಂಭ, ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಕನಿಗೆ ಸಾವು ಅಂತ್ಯವಾಗಬಾರದು. ನಾವು ಸತ್ತ ನಂತರವೂ ನಮ್ಮ ಜೀವಿತಾ ಅವಧಿಯಲ್ಲಿ ಮಾಡಿರುವ ಸಾಧನೆ ಶಾಶ್ವತವಾಗಿರಬೇಕು ಎಂದು ಹೇಳಿದರು.

Advertisement

ಸಾಧನೆ ಎಂಬುದು ಸಾಧಕನ ಸೊತ್ತೇ ವಿನಃ ಸೋಮಾರಿಗಳ ಸೊತ್ತಲ್ಲ. ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಅಧ್ಯಯನ ಮಾಡುವ ಮೂಲಕ ಸಾಧಕರಾಗಿ ನೀವು ಕಲೆತ ಶಾಲೆ ಕೀರ್ತಿ ಪತಾಕೆ ಬಾನೆತ್ತರಕೆ ಕೊಂಡೊಯ್ಯುವಂತವರಾಗಿ ಎಂದು ಕರೆ ನೀಡಿದರು.

ಬೆಂಗಳೂರಿನ ರೋಟರಿ ಕ್ಲಬ್‌ ಅಧ್ಯಕ್ಷ ನವೀನ ಕೊಳಾವರ ಮಾತನಾಡಿ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಶರಣಬಸಪ್ಪನವರು ಈ ಶಾಲೆಯ ಮೇಲಿರಿಸಿದ ಕಾಳಜಿ ಗುರುತಿಸಿ ಈ ಸರ್ಕಾರಿ ಶಾಲೆಗೆ ನಮ್ಮ ಕ್ಲಬ್‌ ವತಿಯಿಂದ ಸ್ಮಾರ್ಟ್‌ಕ್ಲಾಸ್‌ ಸೌಲಭ್ಯ ಕೊಡುಗೆಯಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಡೆಸ್ಕ್ ಹಾಗೂ ಬ್ಯಾಂಡ್‌ ಸೆಟ್ನ್ನು ನೀಡುವುದಾಗಿ ಹೇಳಿದರು.

ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಕಿವುಡನವರ ಮಾತನಾಡಿ, ನಾನು ಕೆಡಿಪಿ ಸದಸ್ಯನಾಗಿ ಸಲ್ಲಿಸಿದ ಸೇವೆಗಿಂತ ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿ, ಎಸ್‌ಡಿಎಂಸಿ ಅಧ್ಯಕ್ಷನಾಗಿ ಮಾಡಿದ ಅಭಿವೃದ್ಧಿ ಕೆಲಸ ನನಗೆ ಕಾಯಕ ತೃಪ್ತಿ ತಂದಿದೆ. ಬರುವ ದಿನಗಳಲ್ಲಿ ಈ ಶಾಲೆಯನ್ನು ರಾಜ್ಯದಲ್ಲಿಯೆ ಮಾದರಿಯನ್ನಾಗಿ ಮಾಡುವ ಗುರಿ ಇದೆ ಎಂದು ಹೇಳಿದರು.

ಗದಗ ಪುಣ್ಯಾಶ್ರಮದ ಪಂಡಿತ ಶ್ರೀ ಕಲ್ಲಿನಾಥ ಶಾಸ್ತ್ರಿಗಳು ಮಾತನಾಡಿ, ಅಧ್ಯಯನ ವಿಲ್ಲದೆ ವಿದ್ಯೆ ಸಿದ್ಧಿಯಾಗಲಾರದು. ಮರಳು, ತಾಳೆಗರಿ, ಬಿದಿರಿನಕಡ್ಡಿ, ನವಿಲುಗರಿ, ಸೀಸ್‌ ಪೆನ್ಸಿಲ್‌, ಪಾಟಿ, ಪೆನ್ಸಿಲ್‌ ನಿಂದ ಪ್ರಾರಂಭವಾದ ಶಿಕ್ಷಣ ಇಗ ಅತ್ಯಾಧುನಿಕ ತಂತ್ರಜ್ಞಾನದ ಕಂಪ್ಯೂಟರ್‌ ವರೆಗೆ ಬಂದು ತಲುಪಿದೆ. ಅಂಧರಾದರೂ ಶ್ರೀ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಮಿನುಗುತಾರೆಯಾಗಿ ಮೆರೆದರೆ, ತುಮಕೂರಿನ ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮಿಗಳು ಬಡ ಮಕ್ಕಳಿಗೆ ಉಚಿತವಾಗಿ ವಿದ್ಯೆ, ಅನ್ನದಾನ ಮಾಡಿ ಶೈಕ್ಷಣಿಕ ಕ್ರಾಂತಿ ಮೊಳಗಿಸಿದವರು ಎಂದರು.

Advertisement

ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಇಂದಿನ ಮಕ್ಕಳಿಗೆ ಕೇವಲ ಪಠ್ಯ, ಪುಸ್ತಕದ ವಿದ್ಯೆ ನೀಡದೆ ಬದುಕಿಗೆ ಬೇಕಾದ ಮೌಲ್ಯಗಳನ್ನು ನೀಡುವ ಕಾರ್ಯವಾಗಬೇಕಿದೆ. ಮಕ್ಕಳ ಮೇಲೆ ಶಿಕ್ಷಕರಿಗೆ ಹಕ್ಕು ಇದ್ದಾಗ ಮಕ್ಕಳು ವಿಕಾಸ ಹೊಂದಲು ಸಾಧ್ಯವಿದೆ. ಹಿಂದಿನ ಕಾಲದಲ್ಲಿ ಛಡಿ.. ಛಂ..ಛಂ.. ವಿದ್ಯಾ ಘಂ..ಘಂ.. ಎಂದು ಹೇಳಲಾಗುತ್ತಿತ್ತು, ಆದರೆ ಇಗ ಶಿಕ್ಷಕರು ಛಡಿ ಹಿಡಿದುಕೊಳ್ಳುವುದೇ ಅಪರಾಧವಾಗಿರುವುದು ವಿಷಾದ ಸಂಗತಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಶಿರಹಟ್ಟಿ ಸಂಸ್ಥಾನಮಠದ ಜ| ಫಕೀರಸಿದ್ಧರಾಮ ಸ್ವಾಮೀಜಿ ಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಚಂದಾಪುರ ವೀರಕ್ತಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ, ಶರಣಬಸವೇಶ್ವರ ದಾಸೋಹ ಮಠದ ಶ್ರೀ ಶಿವದೇವ ಶರಣರು, ನಿವೃತ್ತ ಎಇ ಸುಭಾಷಚಂದ್ರ ವಿಶ್ವಬ್ರಾಹ್ಮಣ, ನಿವೃತ್ತ ಸಿಡಿಪಿಒ ಬಿ.ಆರ್‌. ಶೇಟ್ಟರ, ಗ್ರಾಪಂ ಅಧ್ಯಕ್ಷ ವೀರಣ್ಣ ನಾಗನೂರ, ರಮೇಶ ದುಗ್ಗತ್ತಿ, ಶೋಭಾ ಗಂಜಿಗಟ್ಟಿ, ಯಲ್ಲಪ್ಪ ನರಗುಂದ, ಉಮೇಶ ಅಂಗಡಿ, ಶಶಿಧರ ಹೊನ್ನಣ್ಣವರ, ಲಿಂಗರಾಜ ಹಳವಳ್ಳಿ ಸೇರಿದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next