Advertisement

ಕಿಡಿಗೇಡಿಗಳಿಂದ ಅರಣ್ಯಕ್ಕೆ ಬೆಂಕಿ; 10 ಎಕರೆ ಭಸ್ಮ

10:21 AM Feb 28, 2017 | Harsha Rao |

ಹೊಸಕೋಟೆ: ತಾಲೂಕಿನ ನಂದಗುಡಿಯಲ್ಲಿ ಭಾನುವಾರ ಸಂಜೆ ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಅಗ್ನಿ ಸ್ಪರ್ಶಗೊಂಡು ಸುಮಾರು 10 ಎಕರೆ ಪ್ರದೇಶದಲ್ಲಿದ್ದ ಗಿಡ, ಮರಗಳು ಸಂಪೂರ್ಣ ಭಸ್ಮಗೊಂಡಿದ್ದು, ಪಕ್ಷಿಗಳೂ ಸಹ
ಬಲಿಯಾಗಿವೆ. ಬೆಂಕಿ ಹೊತ್ತಿಕೊಂಡು ಹೊಗೆಯಾಡುತ್ತಿರುವುದನ್ನು ಕಂಡ ಸುತ್ತಮುತ್ತಲ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ, ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಆದರೆ, ಅಧಿಕಾರಿಗಳು ಫೋನ್‌ ಮಾಡಿದ
2- 3 ಗಂಟೆ ನಂತರ ಆಗಮಿಸಿದ್ದು, ಅವರ ನಿರ್ಲಕ್ಷ್ಯವೇ ಅನಾಹುತ ಪ್ರಮಾಣ ಹೆಚ್ಚಲು ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ.

Advertisement

ನಂದಗುಡಿಯಲ್ಲಿ ಅರಣ್ಯ ಇಲಾಖೆಗೆ ಸೇರಿದ 50 ಎಕರೆ ಪ್ರದೇಶವಿದ್ದು, ಬೆಂಗಳೂರು-ಮದನಪಲ್ಲಿ ರಸ್ತೆಯ ಮಧ್ಯೆ ಹಾದುಹೋಗುತ್ತಿದೆ. ಆಕೇಶಿಯಾ, ಬೇವು, ನೇರಳೆ, ಸರ್ವೆ, ನೀಲಗಿರಿ ಒಳಗೊಂಡಂತೆ ಬಹಳಷ್ಟು ಅಪರೂಪದ
ಸಸ್ಯಗಳು ಅರಣ್ಯದಲ್ಲಿವೆ. ಅನಾಹುತದಿಂದ ಬಹುತೇಕ ಸಸ್ಯ ಸಂಪತ್ತು ಭಸ್ಮವಾಗಿದೆ. ಇನ್ನು ಅರಣ್ಯದಲ್ಲಿ ಆಶ್ರಯ ಪಡೆದಿದ್ದ ಕೋತಿ, ನವಿಲು, ಹಂದಿ, ಜಿಂಕೆಗಳು ಬೆದರಿ ದಿಕ್ಕಾಪಾಲಾಗಿ ಓಡಿಹೋಗಿದ್ದು, ದಟ್ಟವಾದ ಹೊಗೆಯಿಂದಾಗಿ ಕೆಲವು ಮೃತಪಟ್ಟಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಒಣಗಿ ಬಿದ್ದಿದ್ದ ಎಲೆಗಳಿಗೆ ಕಿಡಿಗೇಡಿಗಳು ಬೀಡಿ, ಸಿಗರೇಟ್‌ ಸೇದಿ ಎಸೆದಿರುವ ಕಾರಣ ಬೆಂಕಿ ಹತ್ತಿಕೊಂಡಿದೆ. ಸಿಬ್ಬಂದಿ ಹೆಚ್ಚಿನ ಹಾನಿ ಸಂಭವಿಸುವುದನ್ನು ತಡೆಗಟ್ಟಿದ್ದಾರೆ ಎಂದಿದ್ದಾರೆ.

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯ?:
ಆದರೆ, ಅರಣ್ಯ ಇಲಾಖೆಗಳ ಈ ಹೇಳಿಕೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಅನಾಹುತ ನಡೆದಿದೆ. ನಿರ್ಜನ ಹಾಗೂ ರಸ್ತೆ ಬದಿಯಲ್ಲೇ ಇರುವ ಕಾರಣ ಅನೇಕರು ಅತಿಕ್ರಮವಾಗಿ ಅರಣ್ಯ ಪ್ರವೇಶಿಸಿ, ಮದ್ಯಪಾನ ಸೇರಿದಂತೆ ಅನೇಕ ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. 

ಅಗ್ನಿಶಾಮಕ ಸಿಬ್ಬಂದಿ ದಾರಿ ತಪ್ಪಿಸಿದ ಕಿಡಿಗೇಡಿಗಳು
ತಮ್ಮ ಅಚಾತುರ್ಯದಿಂದ ಬೆಂಕಿ ಬಿದ್ದಿದನ್ನು ಕಂಡ ಕಿಡಿಗೇಡಿಗಳೇ ಮೊದಲು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ನಂತರ ಅಗ್ನಿ ನಂದಿಹೋಗಿದೆ, ಬರುವುದು ಬೇಡವೆಂದು ಸುಳ್ಳು ಮಾಹಿತಿ ನೀಡಿದ ಕಾರಣ ಅರ್ಧ ದಾರಿಗೆ ಹೋಗಿದ್ದ ಅಗ್ನಿಶಾಮಕ ದಳದ ವಾಹನದೊಂದಿಗೆ ಸಿಬ್ಬಂದಿ ಹಿಂದಿರುಗಿದ್ದರು ಎಂಬ ಮಾಹಿತಿಯನ್ನು ಅಗ್ನಿಶಾಮಕದಳ ಮುಖ್ಯಸ್ಥ ಸಂಪಂಗಿರಾಮಯ್ಯ ತಿಳಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯವರು ಫೋನ್‌ ಮಾಡಿ ಬೆಂಕಿ ಹೆಚ್ಚಾಗುತ್ತಿದೆ ಎಂದು ತಿಳಿಸಿದರು. ಇದಾದ ಬಳಿಕ ಕೂಡಲೇ ಸ್ಥಳಕ್ಕೆ ಬೆಂಕಿ ನಿಯಂತ್ರಿಸಲಾಯಿತು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next