ಬಸ್ರೂರು: ಐತಿಹಾಸಿಕ ನಗರಿ ಹಾಗೂ ಬಂದರು ಪ್ರದೇಶವಾಗಿದ್ದ ಬಸ್ರೂರಿನಲ್ಲಿ ನಗರದ ಇತಿಹಾಸ ಸಾರುವ ಶಿಲಾ ಶಾಸನಗಳನ್ನು ಉಳಿಸಿಕೊಳ್ಳುವ ಕುರಿತಂತೆ ಯಾರೂ ಗಮನವೇ ಹರಿಸುತ್ತಿಲ್ಲ. ಅಲ್ಲಲ್ಲಿ ಬಿದ್ದಿದ್ದ 12 ಶಿಲಾ ಶಾಸನಗಳನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ವತಿಯಿಂದ ಸಂರಕ್ಷಿಸುವ ಕಾರ್ಯ ಮಾಡಲಾಗುತ್ತಿದೆ. ಆದರೆ ಸುಮಾರು 45 ಕ್ಕೂ ಹೆಚ್ಚು ಶಿಲಾ ಶಾಸನಗಳು ಸರಿಯಾದ ಸಂರಕ್ಷಣೆಯಿಲ್ಲದೆ ವಿನಾಶದಂಚಿಗೆ ಸರಿಯುತ್ತಿದ್ದು, ಅವುಗಳನ್ನು ಸಂಗ್ರಹಿಸಿ ಉಳಿಸುವ ಕಾರ್ಯ ಆಗಬೇಕಾಗಿದೆ.
ಈಗಾಗಲೇ ಎಲ್ಲೆಲ್ಲೊ ಬಿದ್ದಿದ್ದ 12 ಶಿಲಾ ಶಾಸನಗಳನ್ನು ಬಸ್ರೂರು ಶ್ರೀ ಶಾರದಾ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಿವೃತ್ತ ಉಪನ್ಯಾಸಕ, ಅಧ್ಯಯನಕಾರ ಡಾ| ಕನರಾಡಿ ವಾದಿರಾಜ ಭಟ್ ಅವರು ತಂದು ಶಾರದಾ ಕಾಲೇಜಿನಲ್ಲಿ ಸಂರಕ್ಷಿಸಿದ್ದಾರೆ.
ಅಲ್ಲದೆ ದಿ| ಡಾ.ಪಿ.ಗುರುರಾಜ ಭಟ್ಟರು, ದಿ| ಡಾ.ಬಿ.ವಸಂತ ಶೆಟ್ಟಿ ಮತ್ತು ಡಾ| ಪಿ.ಎನ್.ನರಸಿಂಹ ಮೂರ್ತಿಯವರು ಇಲ್ಲಿನ ಶಾಸನಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿ ಹಲವು ಶಾಸನಗಳನ್ನು ಉಳಿಸಿ ಅಧ್ಯಯನ ನಡೆಸಿದ್ದಾರೆ. ಇಲ್ಲಿನ ಶ್ರೀ ಆದಿನಾಥೇಶ್ವರ ದೇವಸ್ಥಾನ, ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಳ್ಳೂರು ಶ್ರೀ ಕಾರ್ತಿಕೇಯ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಹೇರಿಕೆರೆಯ ಶ್ರೀ ಕೊಳನಕೋಡು ಈಶ್ವರ ದೇವಸ್ಥಾನಗಳಲ್ಲಿ ಕೆಲವು ಶಾಸನಗಳಿದ್ದು, ಅವುಗಳು ಅಲ್ಲೇ ಉಳಿದುಕೊಂಡಿವೆೆ. ಹೇರಿಕೆರೆಯ ಶ್ರೀ ಕೊಳನಕೋಡು ಈಶ್ವರ ದೇವಸ್ಥಾನದಲ್ಲಿ ಕಾಣ ಸಿಗುವ ಒಂದು ಶಿಲಾ ಶಾಸನದಲ್ಲಿ ತುಳು ಲಿಪಿಯಿದೆ ಎಂದು ಹೇಳಲಾಗಿದೆ.
ಸಮೀಪದ ಕಂದಾವರ, ಹಟ್ಟಿಕುದ್ರು, ಬಳ್ಕೂರು, ಜಪ್ತಿ, ಆನಗಳ್ಳಿ ಮುಂತಾದೆಡೆಯಲ್ಲಿ ಹಲವು ಶಾಸನಗಳು ಇದೆಯಾದರೂ ಅವುಗಳನ್ನು ಸಂರಕ್ಷಿಸಿಡುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ. ಇಲ್ಲಿನ ಪಂತ್ರ ಮನೆಯ ಭೂಮಿಯ ಅಡಿಯಲ್ಲಿ ಹುದುಗಿ ಹೋಗಿದ್ದ ಒಂದು ಶಿಲಾ ಶಾಸನವನ್ನು ಅಗೆದು ತೆಗೆದಿಟ್ಟಿದ್ದಾರೆ. ಆದರೆ ಆ ಶಾಸನವನ್ನು ಇನ್ನೂ ಓದಲಾಗಿಲ್ಲ.
ಶಿಲಾ ಶಾಸನಗಳನ್ನು ಉಳಿಸುವ ಕೆಲಸವನ್ನು ಪ್ರಾಚ್ಯ ಸಂಶೋಧನಾ ಇಲಾಖೆ ಮಾಡಬೇಕಾಗಿದೆ.
ಸ್ಥಳೀಯರು, ಗ್ರಾ.ಪಂ. ಸಹ ಇದಕ್ಕೆ ಆಸಕ್ತಿ ತೋರಬೇಕಾಗಿದೆ. ಬಸ್ರೂರಿನ ಶಿಲಾ ಶಾಸನಗಳ ಬಗ್ಗೆ ನಡೆದ ಸಂಶೋಧನೆ ಇನ್ನೂ ಪೂರ್ಣವಾಗಿಲ್ಲ ಎನ್ನುವುದು ಗಮನಾರ್ಹ.