Advertisement

ಬಸ್ರೂರು –ಹಟ್ಟಿಕುದ್ರು ಸೇತುವೆ ಕಾಮಗಾರಿ ಶೀಘ್ರ ಆರಂಭ ?

06:20 PM Oct 12, 2020 | mahesh |

ಬಸ್ರೂರು: ಮಂಡಿಕೇರಿಯ ಕಳುವಿನ ಬಾಗಿಲಿನಿಂದ 330 ಮೀ. ಉದ್ದದ ಹಟ್ಟಿಕುದ್ರುವಿಗೆ ಹೋಗುವ ಸೇತುವೆಗೆ ಶಿಲಾನ್ಯಾಸ ಜನವರಿಯಲ್ಲಾಗಿದ್ದು, ಆದರೆ ಕೋವಿಡ್ ಕಾರಣದಿಂದ ಸ್ಥಗಿತಗೊಂಡ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಈಗ ಮಳೆ ಕಡಿಮೆಯಾಗಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ.

Advertisement

ಕೊರೊನಾ, ಮಳೆಯಿಂದಾಗಿ ಸೇತುವೆ ಕಾಮಗಾರಿಯನ್ನು ಮಾರ್ಚ್‌ನಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದಲ್ಲದೆ ಒಂಭತ್ತು ಪಿಲ್ಲರ್‌ಗಳ ಮುಂದೆ ನೀರಿದ್ದಲ್ಲಿ ಗಟ್ಟಿ ಮಣ್ಣನ್ನು ತುಂಬಿಸಲಾಗಿತ್ತು. ಆದರೆ ನದಿ ತುಂಬಿ ಹರಿಯುವಾಗ ಇಲ್ಲಿ ಮಣ್ಣಿನ ತಡೆಯಿಂದ ಹಟ್ಟಿಕುದ್ರು ಭಾಗದ ನದಿ ಪ್ರದೇಶದಲ್ಲಿ ಕೊರೆತ ಆರಂಭವಾಗುವ ಅಪಾಯವೂ ಇತ್ತು. ಈ ಕಾರಣದಿಂದ ಅಲ್ಲಿ ತುಂಬಿಸಿದ್ದ ಮಣ್ಣನ್ನು ಮಳೆಗಾಲದಲ್ಲಿ ಕಡಿದು ಕೊಡಲಾಗಿತ್ತು.

ಹಟ್ಟಿಕುದ್ರು ಸೇತುವೆ ಜನರ ಬಹು ಹಿಂದಿನ ಕನಸಾಗಿತ್ತು. ಆದರೆ ಇಲ್ಲಿಯವರೆಗೆ ಕಾಲ ಕೂಡಿ ಬಂದಿರಲಿಲ್ಲ. ವಿಧಾನ ಪರಿಷತ್‌ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಶಿಫಾರಸಿನ ಮೇರೆಗೆ ವಾರಾಹಿ ನೀರಾವರಿ ನಿಗಮದಿಂದ ಈ ಸೇತುವೆ ನಿರ್ಮಾಣಕ್ಕೆ 14.59 ಕೋ.ರೂ. ಮಂಜೂರಾಗುವ ಮೂಲಕ ದಶಕಗಳ ಕನಸು ನನಸಾಗಿತ್ತು.

ಇನ್ನೂ 12 ಪಿಲ್ಲರ್‌
ಇಲ್ಲಿ ಇನ್ನೂ 12 ಫಿಲ್ಲರ್‌ ನಿರ್ಮಿಸಬೇಕಾಗಿದ್ದು ಎಷ್ಟು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಒಟ್ಟು 21 ಪಿಲ್ಲರ್‌ಗಳನ್ನು ನಿರ್ಮಿಸಬೇಕಾಗಿದ್ದು ಒಮ್ಮೆ ಕಾಮಗಾರಿ ಆರಂಭವಾದರೆ ಅನಂತರ ಯಾವ ಕಾರಣಕ್ಕೂ ನಿಲ್ಲದು ಎನ್ನುವುದು ಇಲ್ಲಿನ ಜನರ ನಂಬಿಕೆಯಾಗಿದೆ. ಪ್ರಸ್ತುತ ಶಾಲಾ ಕಾಲೇಜು ಇಲ್ಲದಿದ್ದರೂ ವಿದ್ಯಾಗಮ ತರಗತಿ ಮತ್ತಿತರ ಕೆಲಸಗಳಿಗಾಗಿ ವಿದ್ಯಾರ್ಥಿಗಳು, ಜನರು ಇರುವ ಒಂದೇ ದೋಣಿಯಲ್ಲಿ ಸಾಗಬೇಕಾಗಿದೆ.

ಶೀಘ್ರ ಕಾಮಗಾರಿ
ಕೊರೊನಾ, ಮಳೆಗಾಲದ ಕಾರಣದಿಂದ ಸೇತುವೆ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಸದ್ಯ ಮಳೆ ಕಡಿಮೆಯಾಗಿದೆ. ಈ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದು ಬಿಹಾರ, ಉತ್ತರ ಪ್ರದೇಶ ಮತ್ತು ಒರಿಸ್ಸಾ ಪ್ರದೇಶದ ಕಾರ್ಮಿಕರು ಆಗಮಿಸಲಿದ್ದು ಸೇತುವೆ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ.
– ರಾಮ್‌ ಕಿಶನ್‌ ಹೆಗ್ಡೆ ಬಸ್ರೂರು, ಉಪಾಧ್ಯಕ್ಷ, ತಾ.ಪಂ. ಕುಂದಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next