Advertisement
ಶಂಕರ ಪೂಜಾರಿ ಅವರು 3 ತಿಂಗಳಿನಿಂದ ಜೈಲಿನಲ್ಲಿದ್ದು, ಯಾವ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭಿಸಿಲ್ಲ. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಶಂಕರ ಪೂಜಾರಿ ಅವರ ಪತ್ನಿ ಜ್ಯೋತಿ ಅವರನ್ನು ಬುಧವಾರವೂ ಕಚೇರಿಗೆ ಕರೆಸಿ ಪೂರಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಮಾನವ ಹಕ್ಕುಗಳ ಪ್ರತಿಷ್ಠಾನದ ವತಿಯಿಂದಲೂ ಮಾಹಿತಿ ಕಲೆ ಹಾಕುತ್ತಿದ್ದು, ಅವರು ಕೂಡ ಕುವೈಟ್‌ನಲ್ಲಿರುವ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ.
ಈ ನಡುವೆ ಸಂಸದರ ಮೂಲಕ ವಿದೇಶಾಂಗ ಇಲಾಖೆಗೂ ಅವರ ಕುಟುಂಬ ಮನವಿ ಮಾಡಿದ್ದು, ಅದಕ್ಕೆ ಪ್ರತಿಯಾಗಿ ವಿದೇಶಾಂಗ ಇಲಾಖೆಯಿಂದ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪತ್ರ ಬಂದಿದೆ. ಶಂಕರ ಪೂಜಾರಿ ನಾಪತ್ತೆ ಸಂಬಂಧ ವಿದೇಶಾಂಗ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ. ಪತ್ತೆಗೆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವ ಪತ್ರ ರವಾನೆಯಾಗಿದೆ. ಕುವೈಟ್‌ನ ಕಂಪೆನಿಯೊಂದರಲ್ಲಿ 4 ವರ್ಷದಿಂದ ಕೆಲಸ ಮಾಡುತ್ತಿದ್ದ ಶಂಕರ ಪೂಜಾರಿ ಅವರು 3 ತಿಂಗಳ ಹಿಂದೆ ಊರಿಗೆ ಬಂದು ವಾಪಸಾಗುವಾಗ ಪರಿಚಯಸ್ಥರೊಬ್ಬರು ಕುವೈಟ್‌ನಲ್ಲಿ ರುವ ಅವರ ಸಂಬಂಧಿಗೆ ನೀಡುವಂತೆ ಪಾರ್ಸೆಲ್ ಒಂದನ್ನು ಕೊಟ್ಟಿದ್ದರು. ಕುವೈಟ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಪೊಲೀಸರಿಗೆ ಮಾತ್ರೆಗಳ
ಕಟ್ಟು ಪತ್ತೆಯಾದ್ದರಿಂದ ವಿಚಾರಣೆ ನಡೆಸಿದ್ದು, ಸಹೋದ್ಯೋಗಿಯ ವಿನಂತಿಯಂತೆ ಕುವೈಟ್‌ನಲ್ಲಿರುವ ಮಹಿಳೆಗೆ ನೀಡಲು ತಂದಿರುವುದಾಗಿ ಶಂಕರ ಪೂಜಾರಿ ಹೇಳಿದ್ದರು.
Related Articles
Advertisement
ಈ ಸಂಬಂಧ ಮಂಗಳವಾರದಿಂದಲೇ ನಾವು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ಹಾಗೂ ಕುವೈಟ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಶಂಕರ ಪೂಜಾರಿ ಕುರಿತು ಸರಿಯಾದ ಮಾಹಿತಿ ಸಿಗದ ಕಾರಣ ಸಮಸ್ಯೆಯಾಗಿದ್ದು, ಆದರೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್,ಉಡುಪಿ ಡಿಸಿ ನನ್ನ ಪತಿಯನ್ನು ವಾಪಸು ಭಾರತಕ್ಕೆ ಕರೆ ತರುವ ಸಂಬಂಧ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಜಿಲ್ಲಾಡಳಿತ ಹೇಳಿದ್ದು, ಅದೇ ಭರವಸೆಯಲ್ಲಿ ನಾವೆಲ್ಲ ಇದ್ದೇವೆ.
ಜ್ಯೋತಿ (ಶಂಕರ ಪೂಜಾರಿ ಅವರ ಪತ್ನಿ)