Advertisement
16ನೇ ಶತಮಾನದಲ್ಲಿ ವಸುಪುರ (ಬಸ್ರೂರು) ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು. ಇದು ಪೋರ್ಚುಗೀಸರ ವಶವಾಗಿದ್ದು, ಇದರಿಂದ ಆತಂಕಿತನಾದ ಕೆಳದಿಯ ಅರಸ ಛತ್ರಪತಿ ಶಿವಾಜಿಯ ಸಹಾಯ ಕೋರಿದ. 1665 ರ ಫೆಬ್ರವರಿಯಲ್ಲಿ ಸಿಂಧೂ ದುರ್ಗದಿಂದ 50 ಯುದ್ಧ ನೌಕೆ, 3 ಸಣ್ಣ ನೌಕೆ, 4 ಸಾವಿರ ಸೈನಿಕರೊಂದಿಗೆ ನೌಕದಳದ ದಂಡಯಾತ್ರೆ ಹೊರಟ ಶಿವಾಜಿಯು ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಬಂದು ಪೋರ್ಚುಗೀಸರ ವಿರುದ್ಧ ಯುದ್ಧದಲ್ಲಿ ವಿಜಯ ಸಾಧಿಸಿದ. ಇದಾದ ಕೆಲ ದಿನ ಶಿವಾಜಿ ಗೋಕರ್ಣದಲ್ಲಿ ತಂಗಿ, ಬಳಿಕ ತನ್ನ ದಂಡಯಾತ್ರೆ ಮುಂದುವರಿಸಿದ ಬಗ್ಗೆ ದಾಖಲೆಗಳಲ್ಲಿ ಕಂಡುಬರುತ್ತದೆ.
ರಲ್ಲಿ ಡಚ್ಚರು ಬಸ್ರೂರಿನಲ್ಲಿ ವ್ಯಾಪಾರಕ್ಕಾಗಿ ಮ್ಮ ಬಂಡಶಾಲೆ ಆರಂಭಿಸುತ್ತಾರೆ. ಡಚ್ಚರು ಹಾಗೂ ಪೋರ್ಚುಗೀಸರ ವ್ಯಾಪಾರದ ಪೈಪೋಟಿಯು ಬಸ್ರೂರಿಗರಿಗೆ ಆತಂಕ ಹುಟ್ಟುಹಾಕಿತ್ತು. ಇದಕ್ಕಾಗಿಯೇ ಕೆಳದಿಯ ಅರಸ ಛತ್ರಪತಿ ಶಿವಾಜಿಯ ಸಹಾಯ ಕೋರಿದ್ದ. ವಿದೇಶಿಯರ ವಿರುದ್ಧ ಮೊದಲೇ ಕೆಂಡಕಾರಿದ್ದ ಶಿವಾಜಿಯು ಪೋರ್ಚುಗೀಸರ ವಿರುದ್ಧ ಹೋರಾಡಲು ಕ್ರಿ.ಶ. 1665ರ ಫೆ. 13 ರಂದು 400 – 500 ಹಡಗುಗಳೊಂದಿಗೆ, 4 ಸಾವಿರ ಸೈನಿಕರೊಂದಿಗೆ ಬಸ್ರೂರಿನ ಕಡೆಗೆ ದಂಡೆತ್ತಿ ಬರುತ್ತಾನೆ. ಎರಡು ದಿನಗಳ ಕಾಲ ನಡೆದ ಹೋರಾಟದಲ್ಲಿ ಬಸ್ರೂರನ್ನು ಪೋರ್ಚುಗೀಸರ ಕಪಿಮುಷ್ಠಿಯಿಂದ ಶಿವಾಜಿಯು ಬಂಧಮುಕ್ತಗೊಳಿಸಿದ.
Related Articles
ಕ್ರಿ.ಶ. 12ನೇ ಶತಮಾನದಲ್ಲಿ ವೈಭವದ ಪಟ್ಟಣದಂತಿದ್ದ ಬಸ್ರೂರು ಬೃಹತ್ ಸಂಪತ್ಭರಿತ ಪ್ರದೇಶವಾಗಿತ್ತು. ಈ ಭಾಗದ ತೆಂಗಿನಕಾಯಿ, ತಾಳೆಮರ, ಲವಂಗ, ದಾಲ್ಚಿನ್ನಿ ಮತ್ತು ಅಕ್ಕಿ, ಧವಸ ಧಾನ್ಯಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತಿತ್ತು. ಇದನ್ನು ವಿದೇಶಿಗರು ಪಡೆದುಕೊಳ್ಳುತ್ತಿದ್ದರು. ಈ ಪ್ರದೇಶಗಳಿಗೆ ಬೇಕಾದ ವಸ್ತುಗಳನ್ನು ಸಹಾ ಆಮದು ಮಾಡಿಕೊಳ್ಳುತ್ತಿದ್ದರು. ಕೆಲ ಹಳೆಯ ಮನೆಗಳಲ್ಲಿ ಪಿಂಗಾಣಿ ಪಾತ್ರೆಗಳು ಇಂದಿಗೂ ಕಂಡು ಬರುತ್ತದೆ. ಚೀನಾದಿಂದ ಪಾತ್ರೆ, ರೇಷ್ಮೆ ವಸ್ತ್ರಗಳಿಗೆ ಈ ಭಾಗದಲ್ಲಿ ಬಹು ಬೇಡಿಕೆಗಳಿತ್ತು. ಚೀನಿಯರು ಇಲ್ಲಿಯ ಕಬ್ಬು ಆಮದು ಮಾಡಿಕೊಳ್ಳುತ್ತಿದ್ದರು.
Advertisement
ಹಟ್ಟಿಕುದ್ರು ಭಾಗದಲ್ಲಿ ಇಂದಿಗೂ ಕಬ್ಬು ಬೆಳೆಯುತ್ತಿದ್ದಾರೆ. ಮಲಬಾರಿಗಳು ತಾಮ್ರ , ತೆಂಗಿನಕಾಯಿ, ಬೆಲ್ಲ, ಕೊಬ್ಬರಿ ಎಣ್ಣೆಯನ್ನು ಇಲ್ಲಿಗೆ ತಂದು ಮಾರುತ್ತಿದ್ದರು. ಹೀಗೆ ವಾಣಿಜ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ಬಸ್ರೂರು ನೀಡಿತ್ತು. ಇದರಿಂದಲೇ ವಿದೇಶಿಗರು ಇಲ್ಲಿ ಬಂದು ಭದ್ರವಾಗಿ ನೆಲೆಯೂರುವಂತಾಯಿತು. ಫ್ರೆಂಚ್ ಪ್ರವಾಸಿಗ ಪಿರಾಲ್ಡ್ ಕ್ರಿ.ಶ. 1600 ರಲ್ಲಿ ಮಲಬಾರ್ ಕರಾವಳಿಗೆ ಬಂದಿದ್ದಾಗ “ಬಸ್ರೂರು ವ್ಯಾಪಾರ ಮಾಲ್ಡೀವ್ಸ್ ದ್ವೀಪದವರೆಗೆ ಹಬ್ಬಿತ್ತು’ ಎಂದು ಉಲ್ಲೇಖಿಸಿದ್ದರು.
ಪ್ರತಿ ವರ್ಷ ಆಚರಣೆದೇಶ ಕಂಡ ಅಪ್ರತಿಮ ಸಾಮ್ರಾಟ, ನೌಕಾ ಸೇನೆಯ ಪಿತಾಮಹ ಎನಿಸಿಕೊಂಡ ಛತ್ರಪತಿ ಶಿವಾಜಿ ಮಹಾರಾಜರು ಮೊದಲ ನೌಕಾ ವಿಜಯ ಸಾಧಿಸಿದ ಸ್ಥಳ ಬಸ್ರೂರು. ಅದು 1665ರ ಫೆ. 13. ಇತಿಹಾಸದ ಪುಟದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿ ಉಳಿಯುತ್ತದೆ. ಬಸ್ರೂರು ಪೋರ್ಚುಗೀಸರಿಂದ ಬಂಧಮುಕ್ತವಾದ ಆ ದಿನವನ್ನು ಬಸ್ರೂರಿನ ಸ್ವಾತಂತ್ರ್ಯ ದಿನವನ್ನಾಗಿ ಪ್ರತೀ ವರ್ಷ ಆಚರಿಸಲಾಗುತ್ತಿದೆ.
-ಪ್ರದೀಪ್ ಕುಮಾರ್ ಬಸ್ರೂರು, ಜಿಲ್ಲಾ ಸಂಚಾಲಕ, ಭಾರತೀಯ ಇತಿಹಾಸ ಸಂಕಲನ ಸಮಿತಿ