ಬಸ್ರೂರು: ಸರಿ ಸುಮಾರು 7 ದಶಕಗಳ ಬೇಡಿಕೆಯಾಗಿದ್ದ ಹಟ್ಟಿಕುದ್ರು ಸೇತುವೆ ಕಾಮಗಾರಿ ಪೂರ್ಣಗೊಂಡು ಹಲವು ಸಮಯಗಳೇ ಕಳೆದರೂ, ಇನ್ನೂ ಸೇತುವೆ ಉದ್ಘಾಟನೆಗೆ ಮಾತ್ರ ಕಾಲ ಕೂಡಿ ಬಂದಂತಿಲ್ಲ. ಮಾಜಿ ಸಭಾಪತಿ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪ್ರತಾಪಚಂದ್ರ ಶೆಟ್ಟಿಯವರ ಶಿಫಾರಸಿನ ಮೇರೆಗೆ 14.59 ಕೋ.ರೂ. ಮಂಜೂರಾಗಿ, ಕಾಮಗಾರಿಯೂ ಪೂರ್ಣಗೊಂಡಿದೆ.
320 ಮೀ. ಉದ್ದದ 18 ಪಿಲ್ಲರ್‌ಗಳು ಹಾಗೂ ಎರಡೂ ಕಡೆ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಸೇತುವೆಯ ಮೇಲ್ಭಾಗದ ಕಾಮಗಾರಿಯೂ ಈಗ ಮುಗಿದಿದೆ. ಆದರೆ ಸ್ಥಳೀಯರ ಕೆಲವೊಂದು ಸಣ್ಣ ಬೇಡಿಕೆಗಳು ಮಾತ್ರ ಉಳಿದುಕೊಂಡಿದೆ.
ಪ್ರಸ್ತುತ ಸೇತುವೆಯ ಮೇಲೆ ವಾಹನಗಳು ಸರಾಗವಾಗಿ ಚಲಿಸುತ್ತವೆ. ಹಟ್ಟಿಕುದ್ರು ದ್ವೀಪವಾಸಿಗಳ ಹಲವು ವರ್ಷಗಳ ಕನಸು ನನಸಾದ ಕಾರಣ ಈ ಸೇತುವೆಯನ್ನು ಉದ್ಘಾಟಿಸಬೇಕೆಂಬ ಮಾತುಗಳು ಕೇಳಿ ಬರುತ್ತಿತ್ತು. ಬಸ್ರೂರು ಮಂಡಿಕೇರಿಯ ತುದಿಯಲ್ಲಿ ಸ್ವಲ್ಪ ಜಾಗದಲ್ಲಿ ಮಣ್ಣನ್ನು ತುಂಬಿಸುವ ಮತ್ತಿತರ ಸಣ್ಣ ಪುಟ್ಟ ಕಾರ್ಯಗಳಷ್ಟೆ ನಡೆಯಬೇಕಾಗಿದೆ. ಇವೆಲ್ಲದರ ನಡುವೆ ಹಟ್ಟಿಕುದ್ರು ಸೇತುವೆಯ ಉದ್ಘಾಟನೆ ಯಾವಾಗ? ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗುತ್ತಿಲ್ಲ.
ಶೀಘ್ರದಲ್ಲಿ ಉದ್ಘಾಟನೆ
ಕೆಲವೊಂದು ಸಣ್ಣ- ಪುಟ್ಟ ಕಾರ್ಯಗಳು ಬಾಕಿಯಿದ್ದು ಆದಷ್ಟು ಶೀಘ್ರ ಹಟ್ಟಿಕುದ್ರು ಸೇತುವೆಯ ಉದ್ಘಾಟನೆಯನ್ನು ನೆರವೇರಿಸಲಾಗುವುದು.
ಬಿ. ರಾಮ್ ಕಿಶನ್ ಹೆಗ್ಡೆ,
ತಾ.ಪಂ. ಮಾಜಿ ಉಪಾಧ್ಯಕ್ಷ