ಶಿಡ್ಲಘಟ್ಟ: ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹೊಂದಿರುವ ಶಿಡ್ಲಘಟ್ಟ ತಾಲೂಕಿನ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿವೆ.
ತಾಲೂಕಿನ ಇ.ತಿಮ್ಮಸಂದ್ರ ಗ್ರಾಪಂ ಕೇಂದ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ನಿರ್ಮಿಸಿರುವ ಬಾಸ್ಕೆಟ್‌ಬಾಲ್ ಕೋರ್ಟ್‌ನಿರ್ಮಿಸಿರುವ ಆಕರ್ಷಣೀಯವಾಗಿದೆ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಬಾಸ್ಕೆಟ್‌ಬಾಲ್ ಕೋರ್ಟ್ ಇರುವುದು ಸಹಜ. ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ಮತ್ತು ಕ್ರೀಡೆಗೆ ಪ್ರೋತ್ಸಾಹಿಸುವ ಸಲುವಾಗಿ ಜಿಲ್ಲೆಯಲ್ಲಿ ಮಾದರಿ ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಲಾಗಿದೆ.
ಚೆಕ್ ಡ್ಯಾಂ: ಪಂಚಾಯಿತಿಯ ಆಡಳಿತ ಮಂಡಳಿ ಸದಸ್ಯರು ಮತ್ತು ಪಿಡಿಒ ವಿಶೇಷ ಕಾಳಜಿ ವಹಿಸಿ ಮಳೆ ನೀರು ಸಂರಕ್ಷಣೆಗೆ ನಿರ್ಮಿಸಿರುವ ಬಹುಕಮಾನ್ ಚೆಕ್ ಡ್ಯಾಂನ ಡ್ರೋನ್ ಚಿತ್ರ ಕೇವಲ ರಾಜ್ಯವಲ್ಲದೇ ಕೇಂದ್ರದ ಸರ್ಕಾರದ ಗಮನ ಸೆಳೆದಿದೆ. ನರೇಗಾ ಯೋಜನೆಯಡಿ ಈಗಾಗಲೇ 162 ಆಟದ ಮೈದಾನಗಳನ್ನು ಅಭಿವೃದ್ಧಿಗೊಳಿಸಲಾಗಿದೆ.
ಪ್ರಮುಖವಾಗಿ ಬಾಗೇಪಲ್ಲಿ ತಾ. ಮಿಟ್ಟೇಮೇರಿ ಗ್ರಾಪಂ ವ್ಯಾಪ್ತಿಯಲ್ಲಿ ಖೋಖೋ, ಕಬಡ್ಡಿ, ವಾಲಿಬಾಲ್ ಕೋರ್ಟ್, ಚಿಕ್ಕಬಳ್ಳಾಪುರ ತಾ.ಮುದ್ದೇನಹಳ್ಳಿ ಗ್ರಾಪಂನಲ್ಲಿ ಕಬಡ್ಡಿ ಕೋರ್ಟ್, ಚಿಂತಾಮಣಿ ತಾ. ಇರಗಂಪಲ್ಲಿ ಗ್ರಾಪಂನಲ್ಲಿ ಕಬಡ್ಡಿ ಕೋರ್ಟ್, ಗೌರಿಬಿದನೂರು ತಾ.ಮೇಳ್ಯ ಗ್ರಾಪಂನಲ್ಲಿ ಖೋಖೋ, ಬ್ಯಾಡ್ಮಿಂಟನ್ ಕೋರ್ಟ್, ಗೌಡಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ಕಬಡ್ಡಿ ಮತ್ತು ಖೋಖೋ ಕೋರ್ಟ್‌ಗಳನ್ನು ಮಾದರಿಯಾಗಿ ನಿರ್ಮಿಸಲಾಗಿದೆ ಎಂದು ಜಿಪಂ ಸಿಇಒ ಫೌಝೀಯಾ ತರುನ್ನುಮ್ ತಿಳಿಸಿದ್ದಾರೆ.
ಶಿಡ್ಲಘಟ್ಟ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಇ.ತಿಮ್ಮಸಂದ್ರ ಗ್ರಾಮ ಪಂಚಾಯಿತಿಯಲ್ಲಿ ಅನೇಕ ಮಾದರಿ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಿರುವುದು ಪ್ರಶಂಸನೀಯ.
-ವಿ.ಮುನಿಯಪ್ಪ, ಶಾಸಕರು, ಶಿಡ್ಲಘಟ್ಟ ಕ್ಷೇತ್ರ
ಗ್ರಾಮೀಣ ಪ್ರದೇಶದಲ್ಲಿರುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ನರೇಗಾ ಯೋಜನೆಯಡಿ ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಲಾಗಿದೆ.
-ದೇವರಾಜ್, ಅಧ್ಯಕ್ಷ ಇ.ತಿಮ್ಮಸಂದ್ರ ಗ್ರಾಪಂ
ಜಿಪಂ ಸಿಇಒ ಫೌಝೀಯಾ ತರುನ್ನುಮ್ ಮಾರ್ಗದರ್ಶನದಲ್ಲಿ ತಾಪಂ ಇಒ ಶಿವಕುಮಾರ್ ಸಲಹೆ ಪಡೆದು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಸಹಕಾರ ಮತ್ತು ಗ್ರಾಮಸ್ಥರ ಬೆಂಬಲದಿಂದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಿಸಲಾಗಿದೆ.
-ತನ್ವೀರ್ ಅಹಮದ್, ಪಿಡಿಒ ಇ.ತಿಮ್ಮಸಂದ್ರ ಗ್ರಾಪಂ
* ಎಂ.ಎ.ತಮೀಮ್ ಪಾಷ