ಇಸ್ಲಮಾಬಾದ್: ಪಾಕಿಸ್ತಾನ ಕ್ರಿಕೆಟ್ ಕಂಡ ಖ್ಯಾತ ಬ್ಯಾಟ್ಸ್‌ಮನ್ ಜಾವೆದ್ ಮಿಯಾಂದಾದ್ ರನ್ನು ತಂಡದಲ್ಲಿ ಮೂಲೆಗುಂಪು ಮಾಡಲು ಕಾರಣವಾಗಿದ್ದು ವಿಶ್ವಕಪ್ ಗೆದ್ದ ನಾಯಕ, ಸದ್ಯದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಎಂದು ಪಾಕ್‌ನ ಮಾಜಿ ಆಟಗಾರ ಬಾಸಿತ್ ಅಲಿ ಆರೋಪಿಸಿದ್ದಾರೆ
1992ರಲ್ಲಿ ಪಾಕ್ ವಿಶ್ವಕಪ್ ಗೆದ್ದ ನಂತರ ಇಮ್ರಾನ್ ನಿವೃತ್ತರಾದರು. ಆದರೆ ತಂಡದ ಮೇಲಿನ ನಿಯಂತ್ರಣ ಅವರ ಕೈಯಲ್ಲೇ ಇತ್ತು. ಇದನ್ನು ಬಳಸಿ ಅವರು ಮಿಯಾಂದಾದ್ ರನ್ನು ಹೊರ ಹಾಕಿದರು. ಆಗ ಅವರನ್ನು ಹೊರಹಾಕಲು ನನ್ನನ್ನು ಒಂದು ದಾಳವಾಗಿ ಬಳಸಿದರು ಎಂದು ಬಾಸಿತ್ ಹೇಳಿದ್ದಾರೆ.
1993ರಲ್ಲಿ ವಾಸಿಂ ಅಕ್ರಂ ನಾಯಕರಾಗಿದ್ದರು. ಆದರೆ ನಿರ್ಧಾರ ತೆಗೆದುಕೊಳ್ಳುತ್ತಿದ್ದದ್ದು ಇಮ್ರಾನ್. ಆಗ ನನ್ನನ್ನು ಮಿಯಾಂದಾದ್‌ಗೆ ಹೋಲಿಸಲು ಆರಂಭಿಸಲಾಯಿತು. ಇದೂ ಮಿಯಾಂದಾದ್‌ರನ್ನು ಮೂಲೆಗುಂಪು ಮಾಡಲು ಒಂದು ಪಿತೂರಿ ಅಷ್ಟೇ. ನಾನು ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದೆ. ಮಿಯಾಂದಾದ್ ಹೊರಬಿದ್ದ ನಂತರ ನನ್ನನ್ನು 6ನೇ ಕ್ರಮಾಂಕಕ್ಕೆ ಇಳಿಸಲಾಯಿತು. ಇಲ್ಲಿ ನಂಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುವುದೇ ಕಡಿಮೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು ಎಂದು ಬಾಸಿತ್ ಹೇಳಿದ್ದಾರೆ.
1993ರಿಂದ 1996ರ ಅವಧಿಯವರೆಗೆ ಬಾಸಿತ್ ಪಾಕ್ ತಂಡದಲ್ಲಿದ್ದರು. ಆಗ 50 ಏಕದಿನ, 19 ಟೆಸ್ಟ್ ಪಂದ್ಯವಾಡಿದ್ದರು. ತಮ್ಮ ಆಕ್ರಮಣಕಾರಿ ಶೈಲಿಗೆ ಹೆಸರಾಗಿದ್ದರು. ಮಿಯಾಂದಾದ್‌ಗಾಗಿ ಸ್ಥಾನ ತ್ಯಾಗ: ನಿಮಗೆ ಗೊತ್ತಿರಲಿಕ್ಕಿಲ್ಲ. ಮಿಯಾಂದಾದ್ 1993ರಲ್ಲಿ ತಂಡದಿಂದ ಹೊರಬಿದ್ದ ನಂತರ, 1996ರ ವಿಶ್ವಕಪ್‌ನಲ್ಲಿ ಆಡುವುದಕ್ಕಾಗಿ ಆಟಗಾರರಲ್ಲಿ ಮನವಿ ಮಾಡಲು ಆರಂಭಿಸಿದರು. ಆಗ ನಾನು ಅತ್ಯುತ್ತಮ ಲಯದಲ್ಲಿದ್ದೆ. ಕಡೆಗೆ ನನ್ನ ಸ್ಥಾನವನ್ನೇ ಬಿಟ್ಟುಕೊಟ್ಟೆ. ನಿಜ ಹೇಳುವುದಾದರೆ ನಾನು ಮಿಯಾಂದಾದ್ ರ ಶೇ.1ರಷ್ಟೂ ಇಲ್ಲ ಎಂದು ಬಾಸಿತ್ ಹೇಳಿದ್ದಾರೆ. ಸದ್ಯ ಬಾಸಿತ್ ಹೇಳಿಕೆ ಪಾಕ್ ಕ್ರಿಕೆಟ್ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.