Advertisement
ಉಡುಪಿ: ಜಿಲ್ಲೆಯ ಹೃದಯ ಭಾಗದಂತಿರುವ ಮಣಿಪಾಲಕ್ಕೆ ಹೊಂದಿಕೊಂಡಿರುವ ಮಣಿಪಾಲ-ಶಿವಳ್ಳಿ ಕೈಗಾರಿಕೆ ಪ್ರದೇಶಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕಾದದ್ದು ಬಹಳಷ್ಟಿದೆ.ಒಮ್ಮೆ ಈ ಪ್ರದೇಶಕ್ಕೆ ಭೇಟಿ ನೀಡಿದರೆ “ಏನಿಲ್ಲ’ ಎಂಬುದೇ ಕಣ್ಣಿಗೆ ರಾಚುತ್ತದೆ. ಯಾಕೆಂದರೆ ರಸ್ತೆಯಿಂದ ಹಿಡಿದು ಚರಂಡಿ ವ್ಯವಸ್ಥೆ ವರೆಗೂ ಎಲ್ಲವನ್ನೂ ಕಲ್ಪಿಸಬೇಕಿದೆ.
ಕೈಗಾರಿಕೆಗಳು-ಉದ್ಯಮಗಳು ತೆರಿಗೆ ಪಾವತಿಸುತ್ತಿವೆ. ನಿಯಮ ಪಾಲನೆಯಲ್ಲೂ ಹಿಂದೆ ಬಿದ್ದಿಲ್ಲ. ಆದರೆ ಮೂಲ ಸೌಕರ್ಯ ಮಾತ್ರ ಕೇಳುವಂತಿಲ್ಲ ಎನ್ನುವಂತಾಗಿದೆ. ದಶಕಗಳ ಹಿಂದೆ ನಿರ್ಮಾಣವಾದ ರಸ್ತೆ ವಿಸ್ತರಣೆಗೊಂಡಿಲ್ಲ. ಹಾಗಾಗಿ ಬೃಹತ್, ಮಧ್ಯಮ ಹಾಗೂ ಸಣ್ಣ ಪ್ರಮಾಣದ ಸರಕು ವಾಹನಗಳ ಸುಗಮ ಸಂಚಾರಕ್ಕೆ ಈ ರಸ್ತೆ ಹೊಂದುವುದಿಲ್ಲ. ಪ್ರತಿ ರಸ್ತೆಯಲ್ಲೂ ಬೃಹದಾಕಾರದ ಹೊಂಡವಿದೆ. ಹಾಗಾಗಿ ಉತ್ಪನ್ನಗಳನ್ನು ಕೊಂಡೊಯ್ಯುವ ವಾಹನಗಳಿಗೆ ಕೈಗಾರಿಕಾ ಪ್ರದೇಶ ದಾಟುವುದೇ ದೊಡ್ಡ ಸವಾಲು ಎನ್ನುತ್ತಾರೆ ಟ್ರಕ್ ಚಾಲಕರು.
Related Articles
ಈ ಪ್ರದೇಶ ಹೆಸರಿಗಷ್ಟೇ ಕೈಗಾರಿಕೆ ಪ್ರದೇಶ ಎಂಬಂತಾಗಿದೆ. ಪ್ರದೇಶದ ಸುತ್ತಲೆಲ್ಲಾ ಬೃಹದಾಕಾರವಾದ ಗಿಡಗಂಟಿಗಳು ಬೆಳೆದಿವೆ. ಅದು ಕಡಿದು ನಿರ್ವಹಣೆ ಮಾಡುವ ಕೆಲಸ ಆಗಿಲ್ಲ. ಒಂದೇ ಒಂದು ಸಾರ್ವಜನಿಕರ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ ಇಲ್ಲಿಲ್ಲ.
Advertisement
ಕಳ್ಳರ ಕಾಟಈ ಕೈಗಾರಿಕೆ ಪ್ರದೇಶದ ಉದ್ಯಮಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯೂ ದೊಡ್ಡದಿದೆ. ಆದರೆ ಇಲ್ಲಿ ಸಂಜೆ ಅನಂತರ ಮಹಿಳೆಯರ ಸಂಚಾರ ಕಷ್ಟ ಎಂಬಂತಿದೆ. ಕೆಲವು ರಸ್ತೆಗಳಲ್ಲಂತೂ ಗಿಡಗಂಟಿಗಳು ರಸ್ತೆಯೇ ಕಾಣದಂತೆ ಬೆಳೆದಿವೆ. ಹಾವು ಸಹಿತ ವಿಷಜಂತುಗಳು ಇಲ್ಲಿವೆ. ಇಲ್ಲಿ ಕಳ್ಳರ ಹಾವಳಿಯೂ ಇದೆ. ಸಂಜೆ ವೇಳೆಯಲ್ಲೇ ಕಷ್ಟ. ಇನ್ನು ರಾತ್ರಿ ಪಾಳಿಗೆ ಹೋಗುವುದಂತೂ ಬಹಳ ಕಷ್ಟ ಎಂಬುದು ಇಲ್ಲಿನವರ ಅಭಿಪ್ರಾಯ. ಅದೃಷ್ಟವಶಾತ್ ಬೀದಿದೀಪದ ಸಮಸ್ಯೆಯನ್ನು ಇತ್ತೀಚೆಗೆ ಸರಿಪಡಿಸಲಾಗಿದೆ. ಹೊಸದಾಗಿ ಟೆಂಡರ್ ಪ್ರಕ್ರಿಯೆಯೂ ನಡೆಯುತ್ತಿದ್ದು, ಹೊಸ ಬೀದಿ ದೀಪ ಅಳವಡಿಕೆಯಾಗುವುದಂತೆ. ಗಿಡಗಂಟಿಗಳು ಕಡಿದು ಉತ್ತಮ ವಾತಾವರಣ ನಿರ್ಮಿಸುವುದು, ಭದ್ರತೆ ಸೌಲಭ್ಯ ಹೆಚ್ಚಿಸುವುದೂ ಸೇರಿದಂತೆ ಉಳಿದ ವ್ಯವಸ್ಥೆಗಳೂ ಬೇಗ ಒದಗಬೇಕಿದೆ. ದೊಡ್ಡ ವಾಹನ ಸಂಚಾರವೂ ಕಷ್ಟ
ಕೈಗಾರಿಕೆ ಪ್ರದೇಶದಲ್ಲಿ ಪ್ರಸ್ತುತ ಅಗತ್ಯಕ್ಕೆ ತಕ್ಕಂತೆ ಮೂಲ ಸೌಕರ್ಯ ತುರ್ತಾಗಿ ಒದಗಿಸಬೇಕಿದೆ. ಹೀಗಾಗಿ ದೊಡ್ಡ ಗಾತ್ರದ ವಾಹನಗಳು ಕೈಗಾರಿಕೆ ಪ್ರದೇಶದ ಒಳಗೆ ಸಂಚರಿಸುವುದೇ ಕಷ್ಟ. ಉತ್ಪನ್ನಗಳನ್ನು ತುಂಬಿಕೊಂಡು ಹೋಗುವ ವಾಹನಗಳು ಅಕ್ಕ ಪಕ್ಕದ ಮಳಿಗೆಗಳಿಗೆ ತಾಗಿಸಿದರೂ ಅಚ್ಚರಿ ಪಡುವಂತಿಲ್ಲ. ಅಷ್ಟು ಕಿರಿದಾಗಿದೆ ರಸ್ತೆ. ಇನ್ನು ಕೆಲವೆಡೆ ರಸ್ತೆ ಮೇಲೇ ಸರಕುಗಳ ಲೋಡಿಂಗ್ ಮತ್ತು ಅನ್ ಲೋಡಿಂಗ್ ಮಾಡುವ ಪರಿಸ್ಥಿತಿ ಇದೆ. ಇದರಿಂದ ಉಳಿದ ವಾಹನಗಳ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ದೊಡ್ಡ ಗಾತ್ರದ ವಾಹನಗಳ ಸಂಚಾರಕ್ಕೆ ಅಗತ್ಯವಿರುವ ಸುಸಜ್ಜಿತ ರಸ್ತೆ ಮಾಡಬೇಕು. ಜತೆಗೆ ಆ ರಸ್ತೆಗಳಲ್ಲಿ ಕೈಗಾರಿಕೆಗಳ ಎದುರು ಉತ್ಪನ್ನಗಳನ್ನು ಲೋಡ್ ಮಾಡಲು ಅಥವಾ ಕಚ್ಚಾ ವಸ್ತುಗಳ ಅನ್ ಲೋಡ್‌ಗೆ ಅನುಕೂಲವಾಗುವಂತೆ ಅಗಲಗವಾಗಿರಬೇಕು ಎಂಬುದು ಕೈಗಾರಿಕೋದ್ಯಮಿಗಳ ಆಗ್ರಹ. ಕೊರೊನಾ ಹೊಡೆತ
ಕೈಗಾರಿಕೆ ಪ್ರದೇಶದ ಎಲ್ಲ ಯುನಿಟ್‌ಗಳನ್ನು ಈಗಾಗಲೇ ಹಂಚಿಕೆ ಮಾಡಿ, ಸಂಬಂಧಪಟ್ಟ ಮಂಡಳಿ ಮತ್ತು ಮಾಲಕರ ನಡುವೆ ಏರ್ಪಟ್ಟಿರುವ ಒಪ್ಪಂದದ ಅವಧಿಯೂ ಬಹುತೇಕ ಮುಗಿದಿದೆ. ಈಗ ಮಾಲಕರು ತಮ್ಮ ಯುನಿಟ್‌ಗಳನ್ನು ಬೇರೆಯವರಿಗೆ ಮಾರಬಹುದು. ಆದರೆ 2020ರಲ್ಲಿ ಕೊರೊನಾ ಕಾರಣ ಕೈಗಾರಿಕೆಗಳಲ್ಲಿ ಉತ್ಪನ್ನ ಕಡಿಮೆಯಾ
ಗಿದೆ. ಇತ್ತೀಚಿಗೆ ಉದ್ಯಮಗಳು ಕೊಂಚ ಸುಧಾರಿಸಿ ಕೊಳ್ಳುತ್ತಿವೆ. ಮಣಿಪಾಲ ಕೈಗಾರಿಕೆ ಪ್ರದೇಶದಲ್ಲಿ ಶೇ. 10ಕ್ಕಿಂತ ಅಧಿಕ ಯುನಿಟ್‌ಗಳು ಖಾಲಿಯಿವೆ. ಕೈಗಾರಿಕೆ ಪ್ರದೇಶದ ಸಮಗ್ರ ಅಭಿವೃದ್ಧಿಯಿಂದ ಕೈಗಾರಿಕೆಗಳ ಪುನಶ್ಚೇತನ ಸಾಧ್ಯ ಎಂಬುದು ಉದ್ಯಮಿಗಳ ಅಭಿಪ್ರಾಯ. ಸರಿಯಾದ ಚರಂಡಿಯೇ ಇಲ್ಲ
ಇಡೀ ಕೈಗಾರಿಕೆ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆಯೇ ಸರಿಯಾಗಿ ಇಲ್ಲ. ಕೈಗಾರಿಕೆಗಳ ನೀರು ಚರಂಡಿಯಲ್ಲಿ ಸರಾಗವಾಗಿ ಸಾಗದೇ ನಿಂತು ಸುತ್ತಲಿನ ವಾತಾವರಣವೆಲ್ಲಾ ದುರ್ನಾತ. ಇನ್ನು ಕೆಲವೆಡೆ ಹೂಳು ತುಂಬಿ ನೀರು ಹರಿಯದಂತಾಗಿದೆ. ಇನ್ನೂ ಕೆಲವೆಡೆ ಶೌಚದ ನೀರೂ ಇದರೊಂದಿಗೆ ಸೇರಿ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸಿದೆ. ಮಳೆಗಾಲದಲ್ಲಂತೂ ಚರಂಡಿ ನೀರು ನೇರವಾಗಿ ಕೈಗಾರಿಕೆಗಳ ಒಳಗೆ ನುಗ್ಗುತ್ತದೆ. ಇನ್ನು ತೋಡುಗಳಂತೂ ಸಂಪೂರ್ಣ ಮುಚ್ಚಿವೆ. ಆಗಬೇಕಿರುವುದೇನು?
– ಸುಸಜ್ಜಿತ ರಸ್ತೆ
– ಚರಂಡಿ ವ್ಯವಸ್ಥೆ
– ಮೂಲಸೌಕರ್ಯವಾದ ಶುದ್ಧ ಕುಡಿಯುವ
– ನೀರು, ಸಾರ್ವಜನಿಕ ಶೌಚಾಲಯ
– ಸುತ್ತಲು ಬೆಳೆದು ನಿಂತಿರುವ ಗಿಡಗಂಟಿ ತೆರವು
– ಕೈಗಾರಿಕೆ ಪ್ರದೇಶಕ್ಕೆ ಆಧುನಿಕ ಸ್ಪರ್ಶ.
– ರಾತ್ರಿವೇಳೆ ಭದ್ರತ ವ್ಯವಸ್ಥೆ ಕಲ್ಪಿಸಬೇಕು
– ಪಾರ್ಕಿಂಗ್ ವ್ಯವಸ್ಥೆ ಆಗಬೇಕು.
– ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲದಂತಾಗಬೇಕು.