Advertisement

ಸೌಕರ್ಯದ ನಿರೀಕ್ಷೆಯಲ್ಲಿ ಹಾರಾಡಿ ಶಾಲೆ

11:00 AM Jun 29, 2022 | Team Udayavani |

ಪುತ್ತೂರು: ಸರಕಾರಿ ಶಾಲೆಗಳ ಪೈಕಿ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಹಾರಾಡಿ ಸರಕಾರಿ ಮಾದರಿ ಉನ್ನತಿ ಹಿರಿಯ ಪ್ರಾಥಮಿಕ ಶಾಲೆಯು ಈ ಶೈಕ್ಷಣಿಕ ವರ್ಷದಲ್ಲಿಯು ದಾಖಲೆಯ ದಾಖಲಾತಿ ಹೊಂದಿದ್ದು ಇಲ್ಲಿಗೆ ಇನ್ನಷ್ಟು ಮೂಲ ಸೌಕರ್ಯ ದೊರೆತರೆ ವಿದ್ಯಾರ್ಥಿಗಳ ಸಂಖ್ಯೆ 1000 ಗಡಿ ದಾಟಬಹುದು.

Advertisement

ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನ ವ್ಯವಸ್ಥೆ ಹೊಂದಿರುವ ಹಾರಾಡಿ ಪ್ರಾಥಮಿಕ ಶಾಲೆ ಸರಕಾರಿ ಶಾಲೆಗಳ ಪೈಕಿ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 8 ನೇ ತರಗತಿ ತನಕ ಒಟ್ಟು 736 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 670 ವಿದ್ಯಾರ್ಥಿಗಳಿದ್ದರು.

ವಿದ್ಯಾರ್ಥಿ ಸಂಖ್ಯೆಗೆ ತಕ್ಕಷ್ಟು ಕೊಠಡಿಗಳಿಲ್ಲ

ಶಾಲೆಯಲ್ಲಿ ಹೊಸ-ಹಳತು ಸೇರಿ 22 ಕೊಠಡಿಗಳಿವೆ. ಆದರೆ ಹಳೆ ಕಟ್ಟಡದ ಕೊಠಡಿಗಳು ಕಿರಿದಾಗಿದ್ದು ಈಗಿನ ವ್ಯವಸ್ಥೆಗೆ ಪೂರಕವಾಗಿಲ್ಲ. ಹಳೆ ಕಟ್ಟಡದಲ್ಲಿ 6, 7ನೇ ತರಗತಿ, ಕಂಪ್ಯೂಟರ್‌ ತರಗತಿ ಹಾಗೂ ಸ್ಟೇಜ್‌ ಇದೆ. ಉಳಿದ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. 40 ವಿದ್ಯಾರ್ಥಿಗಳಿಗೆ ಒಂದು ತರಗತಿ ಕೊಠಡಿಯ ಆವಶ್ಯಕತೆ ಇದ್ದು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸುಸಜ್ಜಿತ 10 ಕೊಠಡಿಯ ಅಗತ್ಯವಿದೆ.

ಶೌಚಾಲಯ ಕೊರತೆ

Advertisement

ಬಾಲಕರಿಗೆ ಇರುವುದು ಒಂದು ಶೌಚಾಲಯ ಮಾತ್ರ. ಸರಕಾರದ ನಿಯಮದ ಪ್ರಕಾರ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಒಟ್ಟು 30 ಶೌಚಾಲಯ ಬೇಕಿದೆ. ಬಾಲಕಿಯರ ವಿಭಾಗದಲ್ಲಿ ಪೋಷಕರ ಸಹಕಾರ ಪಡೆದು 6 ಶೌಚಾಲಯ ನಿರ್ಮಿಸಲಾಗಿದೆ.

ಎ,ಬಿ, ಸಿ, ವಿಭಾಗ

1961ರಲ್ಲಿ ಪ್ರಾರಂಭಗೊಂಡಿರುವ ಈ ಶಾಲೆಗೆ ಹಾರಾಡಿ, ಬನ್ನೂರು, ಪಟ್ನೂರು, ಚಿಕ್ಕಮುಟ್ನೂರು, ಕೋಡಿಂಬಾಡಿ, ಬಲ್ನಾಡು ಸೇರಿದಂತೆ ಹೊರವಲಯದ ಕುಂಬ್ರ, ಮಾಣಿ, ಉಪ್ಪಿನಂಗಡಿ ಮೊದಲಾದ ಭಾಗದಿಂದ ವಿದ್ಯಾರ್ಥಿಗಳು ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿ ದಾಖಲಾತಿ ಹೆಚ್ಚಳವಾಗುತ್ತಿದೆ. 1ರಿಂದ 4ರ ತನಕ ಎ,ಬಿ,ಸಿ ವಿಭಾಗ, 5ರಿಂದ 8ರ ತನಕ ಎ, ಬಿ ವಿಭಾಗ ತೆರೆದು ತರಗತಿ ನಡೆಸಲಾಗುತ್ತಿದೆ.

ದಾನಿಗಳ ಕೊಡುಗೆ

ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ದಾನಿಗಳು. ಇನ್ನು ಹಳೆ ವಿದ್ಯಾರ್ಥಿಗಳು ಕೂಡ ಇದಕ್ಕೆ ಕೈ ಜೋಡಿಸಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಲಿದೆ. ಸರಕಾರವು ಶಾಲೆಯ ದಾಖಲಾತಿ ಗಮನಿಸಿ ಹೆಚ್ಚುವರಿ ಸೌಕರ್ಯ ಒದಗಿಸುವ ಅಗತ್ಯ ಇದೆ ಅನ್ನುವುದು ಪೋಷಕರ ಅಭಿಪ್ರಾಯ.

ಶಿಕ್ಷಕರ ಕೊರತೆ

ಒಟ್ಟು 19 ಮಂಜೂರಾತಿ ಹುದ್ದೆಗಳಿವೆ.ಇದರಲ್ಲಿ ಈಗ ಪೂರ್ಣಕಾಲಿಕ ಶಿಕ್ಷಕರು ಇರುವುದು10 ಮಂದಿ ಮಾತ್ರ. 9 ಮಂದಿ ಮಾತ್ರ ಪಠ್ಯ ಬೋಧನೆಗೆ ಲಭ್ಯವಾಗುತ್ತಾರೆ. ಆರ್‌ಟಿಇ ಪ್ರಕಾರ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರ ಅಗತ್ಯವಿದ್ದು ಅದರ ಅನುಸಾರ 25 ಶಿಕ್ಷಕರ ಅಗತ್ಯತೆ ಇದೆ. 6 ಮಂದಿ ಅತಿಥಿ ಶಿಕ್ಷಕರನ್ನು ಸರಕಾರ ನೀಡಿದೆ.6 ಮಂದಿ ಶಿಕ್ಷಕರನ್ನು ಎಸ್‌ಡಿಎಂಸಿ ಮೂಲಕ ನೇಮಿಸಲಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕರ ಹುದ್ದೆ ಭರ್ತಿ ಆಗಿದ್ದರೂ, ಪೂರ್ಣಕಾಲಿಕ ಶಿಕ್ಷಕರ ಅಗತ್ಯ ಇದ್ದೆ ಇದೆ. ಜತೆಗೆ ಕಚೇರಿ ನಿರ್ವಹಣೆಗೆ ಡಿ ದರ್ಜೆ ನೌಕರರ ನೇಮಕವು ಆಗಬೇಕಿದೆ.

ಆಂಗ್ಲಮಾಧ್ಯಮ ವಿಭಾಗ

ಸರಕಾರವು ಆಂಗ್ಲ ಮಾಧ್ಯಮ ತರಗತಿ ಪ್ರಾರಂಭಿಸುವ ಮೊದಲೇ ಹಾರಾಡಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದೆ. 2012-13 ರಲ್ಲಿ 6 ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ಕಲಿಕೆ ಪ್ರಾರಂಭಗೊಂಡು 8 ನೇ ತರಗತಿ ತನಕ ವಿಸ್ತರಿಸಲಾಗಿದೆ. 1 ರಿಂದ 4 ನೇ ತರಗತಿ ತನಕ ಆಂಗ್ಲ ವಿಭಾಗ ಇದ್ದು ಮುಂದಿನ ವರ್ಷ 5 ನೇ ತರಗತಿಯಲ್ಲಿಯು ಆಂಗ್ಲ ವಿಭಾಗ ಪ್ರಾರಂಭಗೊಳ್ಳಲಿದೆ. ತನ್ಮೂಲಕ ಕನ್ನಡ ಮತ್ತು ಇಂಗ್ಲಿಷ್‌ ಎರಡು ವಿಭಾಗದಲ್ಲಿಯು 1 ರಿಂದ8 ನೇ ತರಗತಿ ತನಕ ಇಲ್ಲಿ ಕಲಿಕೆಗೆ ಅವಕಾಶ ಸಿಗಲಿದೆ.

ಸಕಾರಾತ್ಮಕ ಸ್ಪಂದನೆ: ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಳಗೊಂಡಿದೆ. ಶಾಸಕರಾದಿಯಾಗಿ ಜನಪ್ರತಿನಿಧಿಗಳು, ಇಲಾಖೆ, ದಾನಿಗಳು ಶಾಲೆಯ ಅಭಿವೃದ್ಧಿಗೆ ಗರಿಷ್ಠ ಸಹಕಾರ ನೀಡಿದ್ದಾರೆ. ಶಾಲೆಯ ಅಗತ್ಯದ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದು ಸಕಾರಾತ್ಮಕ ಸ್ಪಂದನೆ ದೊರೆತಿದೆ. -ಕೆ.ಕೆ.ಮಾಸ್ಟರ್‌, ಮುಖ್ಯಗುರು

ಪ್ರಸ್ತಾವನೆ ಸಲ್ಲಿಸಲಾಗಿದೆ: ಶೌಚಾಲಯ, ಹೊಸ ಕಟ್ಟಡದ ಆವಶ್ಯಕತೆಇದೆ. ಶಾಸಕರು ಪ್ರಾಕೃತಿಕ ವಿಕೋಪದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಕೊಠಡಿ ವ್ಯವಸ್ಥೆ ಒದಗಿಸಿದ್ದು ದಾನಿಗಳು ಕೂಡ ಸ್ಪಂದಿಸಿದ್ದಾರೆ. ಹೆಚ್ಚುವರಿ ಬೇಡಿಕೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ರಂಗಮಂದಿರ ನಿರ್ಮಾಣದ ಬೇಡಿಕೆಯು ಇದೆ. –ಕೃಷ್ಣ ನಾಯ್ಕ ಕೆ., ಅಧ್ಯಕ್ಷರು,  ಎಸ್‌ಡಿಎಂಸಿ ಹಾರಾಡಿ ಶಾಲೆ

Advertisement

Udayavani is now on Telegram. Click here to join our channel and stay updated with the latest news.

Next