Advertisement

ಬಶೀರ್‌ ಸಾವು: ಹರಿದು ಬಂದ ಜನಸಾಗರ 

09:51 AM Jan 08, 2018 | Team Udayavani |

ಮಹಾನಗರ: ಕೊಟ್ಟಾರ ಚೌಕಿಯಲ್ಲಿ ಫಾಸ್ಟ್‌ಫುಡ್‌ ವ್ಯಾಪಾರ ನಡೆಸುತ್ತಿದ್ದ ಆಕಾಶ ಭವನದ ಅಬ್ದುಲ್‌ ಬಶೀರ್‌ ಅವರು ನಾಲ್ಕು ದಿನಗಳ ಸಾವು ಬದುಕಿನ ಹೋರಾಟದ ಬಳಿಕ ರವಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಈ ಸುದ್ದಿ ಹರಡುತ್ತಿದ್ದಂತೆಯೇ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಗೆ ಅವರ ಸಂಬಂಧಿಕರು ಸೇರಿದಂತೆ ಜನ ಸಾಗರ ಹರಿದು ಬಂದಿತ್ತು.

Advertisement

ಪೊಲೀಸರು ಬಿಗಿ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು. ಜನ ದಟ್ಟಣೆ ಹೆಚ್ಚುತ್ತಿದ್ದಂತೆ ಮರಣೋತ್ತರ ಪರೀಕ್ಷೆಯ ಮೊದಲೇ ಸಾರ್ವಜನಿಕರಿಗೆ ಬಶೀರ್‌ ಮೃತ ದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮೃತ ಅಬ್ದುಲ್‌ ರಶೀದ್‌ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಆಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನದ ಬಳಿಕ ಕೆಲವೇ ಹೊತ್ತಿನಲ್ಲಿ ಅವರು ವಾಪಸ್‌ ಮನೆಗೆ ತೆರಳಿದರು.

ಸ್ಥಳದಲ್ಲಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌, ಶಾಸಕ ಮೊದೀನ್‌ ಬಾವಾ, ಅಬ್ದುಲ್‌ ಬಶೀರ್‌
ಅವರ ಸಹೋದರ ಹಕೀಂ ಅವರು ಆಸ್ಪತ್ರೆಯ ಬಳಿ ಸೇರಿದ ಜನರಿಗೆ ಯವುದೇ ನೂಕುನುಗ್ಗಲು ಮಾಡದೆ ಸರತಿ ಸಾಲಿನಲ್ಲಿ ಹೋಗಿ ಅಂತಿಮ ದರ್ಶನ ಪಡೆಯುವಂತೆ ಮನವಿ ಮಾಡಿದರು. ಅದರಂತೆ ಎಲ್ಲರೂ ಸರತಿ ಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಪಾರ್ಥಿವ ಶರೀರವನ್ನು ಕುಟುಂಬರಿಗೆ ಹಸ್ತಾಂತರಿಸಲಾಯಿತು.

ಮುಖಂಡರ ಭೇಟಿ
ಅಬ್ದುಲ್‌ ಬಶೀರ್‌ ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆಯೇ ಸಚಿವ ಯು.ಟಿ. ಖಾದರ್‌, ಶಾಸಕ ಮೊದೀನ್‌ ಬಾವಾ,
ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳ ನಾಯಕರು ಭೇಟಿ ನೀಡಿ ಅಂತಿಮ
ದರ್ಶನ ಪಡೆದರು.

ಪೊಲೀಸ್‌ ಬಂದೋಬಸ್ತು 
ಎ.ಜೆ. ಆಸ್ಪತ್ರೆಯ ಶವಗಾರದ ಬಳಿ ಬಿಗು ಪೊಲೀಸ್‌ ಬಂದೋಬಸ್ತು ಮಾಡಲಾಗಿತ್ತು. ಸ್ಥಳೀಯ ಪೊಲೀಸರಲ್ಲದೆ ಮೀಸಲು ಪಡೆಯ ಪೊಲೀಸರನ್ನು ಕೂಡ ಸ್ಥಳದಲ್ಲೇ ನಿಯೋಜಿಸಲಾಗಿತ್ತು. ರಾಜ್ಯ ಎಡಿಜಿಪಿ ಕಮಲ್‌ ಪಂತ್‌, ಪಶ್ಚಿಮ ವಲಯ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಸೇರಿದಂತೆ ಉನ್ನತ ಪೊಲೀಸ್‌ ಅಧಿಕಾರಿಗಳು, ಡಿಸಿಪಿಗಳಾದ ಹನುಮಂತರಾಯ, ಉಮಾ ಪ್ರಶಾಂತ್‌, ಎಸಿಪಿಗಳಾದ ಉದಯ ನಾಯಕ್‌, ವೆಲೆಂಟೈನ್‌ ಡಿ’ಸೋಜಾ ಹಾಗೂ ನಗರದ ವಿವಿಧ ಪೊಲೀಸ್‌ ಠಾಣೆಗಳ ಇನ್‌ಸ್ಪೆಕ್ಟರ್‌ಗಳು ಸ್ಥಳದಲ್ಲಿ ಉಪಸ್ಥಿತರಿದ್ದು ಕಾನೂನು ಸುವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next