ಹುಣಸೂರು: ಈ ಚಿಣ್ಣರು ಭಾನುವಾರ ಸಗಣಿಯ ಓಕುಳಿಯಾಡಿದರೆ, ಸೋಮ ವಾರದಂದು ಹುಡುಗರು ನೀರಿನ ಓಕುಳಿ ಜೊತೆಗೆ ಕುರಿಮಂದೆ ಪ್ರದಕ್ಷಿಣೆ ಹಾಕಿಸಿದರು, ಈ ಜುಳು-ಜುಳು ಓಕುಳಿಯ ಹೋಳಿ ನೋಡಲು ಗ್ರಾಮದಲ್ಲಿ ಜನಜಂಗುಳಿ..! ಇದು ಹುಣಸೂರು ತಾಲೂಕು ಗಾವಡ ಗೆರೆ ಹೋಬಳಿಯ ಮೋದೂರಿನಲ್ಲಿ ನಾಲ್ಕು ದಿನಗಳ ಕಾಲ ನಡೆವ ನೂರಾರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಸವೇಶ್ವರ ದೇವರ ಓಕುಳಿ ಹಬ್ಬದಲ್ಲಿ ಗ್ರಾಮಸ್ಥರು ಮಿಂದೆದ್ದು, ಭಕ್ತಿಯ ಪರಕಾಷ್ಠೆ ಮೆರೆದ ದೃಶ್ಯ.
ಭಕ್ತಿ ಭಾವದ ಮೆರವಣಿಗೆ: ಓಕುಳಿ ಯಾಟಕ್ಕೂ ಮುನ್ನ ಗ್ರಾಮದಿಂದ ಗೌರಿ ಕೆರೆಗೆ ಹೊರಟ ಗ್ರಾಮಸ್ಥರು ಕೆರೆಗಿಳಿದು ದೇವರ ಕಲಸಕ್ಕೆ ಪೂಜೆ ಸಲ್ಲಿಸಿದ ನಂತರ ಹರಕೆ ಹೊತ್ತವರು ಕೆರೆಯಲ್ಲಿ ಸ್ನಾನ ಮಾಡಿ, ನಂತರ ನೂರಕ್ಕೂ ಮಹಿಳೆಯರು ನೀರಿನ ಕೆಲಸ ಹೊತ್ತ ವೇಳೆ ಪಂಜಿನ ದೀವಟಿಗೆಯ ಸಲಾಂ, ವಾದ್ಯ, ತಮಟೆ, ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದ ವೇಳೆ, ಹರಕೆ ಹೊತ್ತ ಮಹಿಳೆಯರು ರಸ್ತೆಯುದ್ದಕ್ಕೂ ದೇವರ ಕಡೆಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಾ ಒಂದು ಕಿ.ಮೀ. ದೂರದ ದೇವಾಲಯದವರೆಗೂ ಸಾಗಿ ಬಂದರು. ದೇವಾಲಯದ ಬಳಿಗೆ ಮೆರವಣಿಗೆ ಬರುತ್ತಿದ್ದಂತೆ ಅಲ್ಲಿ ನರೆದಿದ್ದ ಸಾವಿರಾರು ಮಂದಿ ಭಕ್ತರು ಹೊ! ಎಂದು ಕೂಗುತ್ತಾ ಹರ್ಷ ಚಿತ್ತರಾಗಿ ಸ್ವಾಗತಿಸಿದರು.
ಓಕುಳಿಯಲ್ಲಿ ಮಿಂದೆದ್ದರು: ಓಕುಳಿಗಾಗಿ ಗ್ರಾಮದ ಗೌರಿಕೆರೆಯಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ಮೆರವಣಿಗೆ ಕಸಶ ಹೊತ್ತು ತಂದವರು ಓಕುಳಿ ಕೊಳಕ್ಕೆ ಸುರಿದರೆ, ಎತ್ತಿನಗಾಡಿ ಮೂಲಕ ಡ್ರಮ್‌ನಲ್ಲಿ ತಂದ ನೀರನ್ನು ಕೊಳಕ್ಕೆ ಸುರಿಯುವ ಶಾಸ್ತ್ರ ನೆರವೇರಿಸಿ, ದೇವಾಲಯದಲ್ಲಿ ಬಸವೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ನಂತರ ನೂರಾರು ಮಂದಿ ಯುವಕರು-ಮಕ್ಕಳು ಹೋ! ಎಂದು ಕೂಗುತ್ತಾ ಕೈಗೆ ಕಟ್ಟಿಕೊಂಡಿದ್ದ ಅಂಡೆ(ಸೇರಿನ ಮಾದರಿ)ಗಳಿಂದ ಪರಸ್ಪರ ನೀರೆರಚುತ್ತಾ, ಕಿರುಚುತ್ತಾ ಆಡುತ್ತಿದ್ದ ಹುಡುಗರ ಓಕುಳಿ ನೆರೆದಿದ್ದವರನ್ನು ರೋಮಾಂಚನಗೊಳಿಸಿದ್ದರೆ, ಹರಕೆ ಹೊತ್ತವರು ಓಕುಳಿ ನೀರು ಹೊಡಿಸಿ ಕೊಂಡರು.
ದೇವಾಲಯದ ಸುತ್ತ ಕುರಿಗಳ ದಂಡು: ಸಂಪ್ರದಾಯದಂತೆ ಮೋದೂರು, ಮೋದೂರು ಮೂಡಲಕೊಪ್ಪಲು, ಮೋದೂರು ಪಡವಲಕೊಪ್ಪಲಿನ ಕುರುಬ ಸಮುದಾಯದ ಮಂದಿ ಓಕುಳಿ ಆರಂಭ ವಾಗುತ್ತಿದ್ದಂತೆ ನೂರಾರು ಕುರಿಗಳನ್ನು ದೇವಸ್ಥಾನದ ಸುತ್ತ ನಾಲ್ಕಾರು ಪ್ರದಕ್ಷಿಣೆ ಹಾಕಿಸಿ ದೇವರಿಗೆ ನಡೆದುಕೊಂಡರು. ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
* ಸಂಪತ್ ಕುಮಾರ್