ಸೊಲ್ಲಾಪುರ: ಜಗಜ್ಯೋತಿ ಬಸವೇಶ್ವರರ 885ನೇ ಜಯಂತ್ಯುತ್ಸವದ ಅಂಗವಾಗಿ ಮಹಾತ್ಮ ಬಸವೇಶ್ವರ ಮಧ್ಯವರ್ತಿ ಜನ್ಮೋತ್ಸವ ಮಂಡಳ ವತಿಯಿಂದ ನಗರಾದ್ಯಂತ ಅದ್ಧೂರಿ ಮೆರವಣಿಗೆ ನಡೆಯಿತು. ನಗರದ ಬಾಳಿವೇಸ್, ಉತ್ತರ ಕಸಬಾದಿಂದ ಕೌತಮ್ ಚೌಕಿನಲ್ಲಿರುವ ಬಸವೇಶ್ವರ ಪುತ್ಥಳಿವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೊದಲಿಗೆ ಮಹಾಪೌರ ಶೋಭಾ ಬನಶೆಟ್ಟಿ ಅವರು ಬಸವ ಮೂರ್ತಿಗೆ ಪುಷ್ಪಹಾರ ಅರ್ಪಿಸಿದರು.
ಮಹಾತ್ಮಾ ಬಸವೇಶ್ವರ ಮಧ್ಯವರ್ತಿ ಜನ್ಮೋತ್ಸವ ಮಂಡಳ ವತಿಯಿಂದ ಹಮ್ಮಿಕೊಂಡ ಮೆರವಣಿಗೆಯಲ್ಲಿ ವಿವಿಧ ಬಸವ ಸಂಘ-ಸಂಸ್ಥೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬಸವೇಶ್ವರ ಮೂರ್ತಿಗೆ ಪುಷ್ಪಹಾರ ಮತ್ತು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದರು.
ಮೆರವಣಿಗೆಯಲ್ಲಿ ಡೋಲು ಕುಣಿತವು ನೋಡುಗರ ಆಕರ್ಷಕದ ಕೇಂದ್ರ ಬಿಂದುವಾಗಿತ್ತು. ಅಲ್ಲದೇ ವಿವಿಧ ಕಲಾ ತಂಡಗಳು ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಪೊಲೀಸ್ ಆಯುಕ್ತ ಮಹಾದೇವ ತಾಂಬಡೆ, ಪೊಲೀಸ್ ವರಿಷ್ಠ ಅಧಿಕಾರಿ ವೀರೇಶ ಪ್ರಭು, ಮಾಜಿ ಶಾಸಕ ಶಿವಶರಣ ಪಾಟೀಲ, ರಾಜಶೇಖರ ಶಿವದಾರೆ, ವೀರಭದ್ರೇಶ ಬಸವಂತಿ ಸೇರಿದಂತೆ ಮೊದಲಾದವರು ಬಸವೇಶ್ವರ ಮೂರ್ತಿಗೆ ಗೌರವ ಸಲ್ಲಿಸಿದರು.
ಮಂಡಳದ ಸಂಸ್ಥಾಪಕ ಅಧ್ಯಕ್ಷ ನಂದಕುಮಾರ ಮುಸ್ತಾರೆ, ಕೃಷಿ ಉತ್ಪನ್ನ ಬಜಾರ ಸಮಿತಿ ಮಾಜಿ ಸಭಾಪತಿ ಇಂದುಮತಿ ಅಲಗೊಂಡ ಪಾಟೀಲ, ಮಾಜಿ ನಗರಸೇವಕ ಜಗದೀಶ ಪಾಟೀಲ, ಕೇದಾರ ಉಂಬರಜೆ, ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ವಾಲೆ, ಉತ್ಸವ ಸಮಿತಿ ಅಧ್ಯಕ್ಷ ವೀರಭದ್ರೇಶ್ವರ ಬಸವಂತಿ, ರಾಜಶೇಖರ ಹಿರೇಹಬ್ಬು, ವೇ. ಬಸವರಾಜ ಶಾಸ್ತ್ರೀ, ರಾಜೇಶ ಪಾಟೀಲ, ಮಹೇಶ ಥೋಬಡೆ, ನರೇಂದ್ರ ಗಂಭೀರೆ, ಶ್ರೀಶೈಲ ಬನಶೆಟ್ಟಿ, ಅನಿಲ ಪರಮಶೆಟ್ಟಿ, ಸುದೀಪ ಚಾಕೋತೆ, ಅಶೋಕ ನಾಗಣಸೂರೆ,
ಆನಂದ ಮುಸ್ತಾರೆ, ರಾಜಶೇಖರ ವಿಜಾಪುರೆ, ಪ್ರವೀಣ ದರ್ಗೋಪಾಟೀಲ ಸೇರಿದಂತೆ ನಗರದ ಯುವಕರು ಮತ್ತು ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.