ಕೊಪ್ಪಳ: ತಾಲೂಕಿನ ಯತ್ನಟ್ಟಿಯಲ್ಲಿ ಏ.1 ರಿಂದ 7ರ ವರೆಗೂ ಆಧ್ಯಾತ್ಮಿಕ ಪ್ರವಚನ, ಜಾತ್ರಾ ಮಹೋತ್ಸವ ನಡೆಯಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಬಸವರಾಜೇಂದ್ರ ಶಿವಯೋಗಿಗಳ ವಿರಕ್ತಮಠದ ನೂತನ ಉತ್ತರಾಧಿಕಾರಿ ರುದ್ರಮುನಿ ದೇವರು ಹೇಳಿದರು.
ನಗರದ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಸವರಾಜೇಂದ್ರ ವಿರಕ್ತ ಮಠದಿಂದ 70ನೇ ಜಾತ್ರಾ ಮಹೋತ್ಸವ ನಿಮಿತ್ತ ಏ.1ರಂದು ಸಂಜೆ 6ಕ್ಕೆ ಶಿವಾನುಭವ ಹಾಗೂ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ರಾಜೂರಿನ ಉಮಾಪತಿ ಶಾಸ್ತ್ರಿ ಹಿರೇಮಠ ಪ್ರವಚನ ನೀಡುವರು. ಅಕ್ಕಮಹಾದೇವಿ ಸಂಗೀತ ಹಾಗೂ ಸಂಗಮೇಶ ತಬಲಾ ಸಾಥ್ ನೀಡುವರು.
ಏ. 5ರಂದು ಬೆಳಗ್ಗೆ 6ಕ್ಕೆ ಭಾಗ್ಯನಗರ ಹೊರ ವಲಯದಲ್ಲಿ ಕರಿಬಸವೇಶ್ವರ ದೇವಸ್ಥಾನದಿಂದ ಸುಮಂಗಲೆಯರಿಂದ ಕುಂಭೋತ್ಸವ ನಡೆಯಲಿದೆ. ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಸಂಜೆ 5:30ಕ್ಕೆ ಲಘು ರಥೋತ್ಸವ ಜರುಗಲಿದ್ದು, ನಂತರ ಧಾರ್ಮಿಕ ಪ್ರವಚನ ನಡೆಯಲಿವೆ. ಪುರಾಣ ಪ್ರವಚನಕಾರರಾಗಿ ಕುಕನೂರು ತಾಲೂಕಿನ ರಾಜೂರಿನ ಎಸ್.ಅಕ್ಕಮಹಾದೇವಿ ಭಾಗವಹಿಸಲಿದ್ದು, ಎಸ್.ಉಮಾಪತಿ ಶಾಸ್ತ್ರಿ ಸಂಗೀತ ಹಾಗೂ ಕುರ್ಲಗೇರಿಯ ಸಂಗಮೇಶ ಎನ್.ಎಸ್. ತಬಲಾ ಸಾಥ ನೀಡುವರು ಎಂದರು.
ಏ.6 ರಂದು ಬೆಳಗ್ಗೆ 6ಕ್ಕೆ ಬಸವ ರಾಜೇಂದ್ರ ಶಿವಯೋಗಿಗಳ ಕರ್ತೃ ಗದ್ದುಗೆಗೆ ಕಾಸಜಕಂಡಿಯ ಶಂಕ್ರಯ್ಯ ಅಜ್ಜ ಹಾಗೂ ಕಲ್ಲ ಅಬ್ಬಿಗೇರಿಯ ಶರಣಯ್ಯ ಅಜ್ಜನರಿಂದ ಮಹಾ ರುದ್ರಾಭಿಷೇಕ ಮತ್ತು ಮಧ್ಯಾಹ್ನ 12:30ಕ್ಕೆ ಮಹಾಗಣಾರಾಧನೆ ನಂತರ ಭಕ್ತರಿಗೆ ಮಹಾ ಪ್ರಸಾದ ನಡೆಯಲಿದೆ. ಸಂಜೆ 6ಕ್ಕೆ ಮಹಾ ರಥೋತ್ಸವ ಜರುಗುವುದು. ನಂತರ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸುವರು. ಕುಷ್ಟಗಿಯ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಚಿದಾನಂದ ಸ್ವಾಮೀಜಿ, ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ನಿಜಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ಧರೇಣುಕ ಶಿವಾಚಾರ್ಯ ಸ್ವಾಮೀಜಿ, ಮಹಾದೇವ ದೇವರು, ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಾನಗಲ್ ಕುಮಾರೇಶ್ವರ ಸಾಧಕ ಬಳಗದವರು ಭಾಗವಹಿಸುವರು.
ಏ.7 ರಂದು ಸಂಜೆ 5ಕ್ಕೆ ಬಸವ ರಾಜೇಂದ್ರ ಶಿವಯೋಗಿಗಳ ಮೂರ್ತಿ ಉತ್ಸವ ಜರುಗುವುದು. ರಾತ್ರಿ 9ಕ್ಕೆ ಕಡುಬಿನ ಕಾಳಗ ಮತ್ತು ಮದ್ದು ಸುಡುವುದು ನಂತರ ಮಹಾ ಪ್ರಸಾದ ನೆರವೇರುವುದು. ಸುತ್ತಮುತ್ತಲಿನ ಮೈನಳ್ಳಿ, ಓಜನಹಳ್ಳಿ, ಭಾಗ್ಯನಗರ, ಕಾಮನೂರು, ನರೇಗಲ್, ಹುಚ್ಚೇಶ್ವರ ಕ್ಯಾಂಪ್, ಮರೇವಾಡ ಹಾಗೂ ಬಳ್ಳಾರಿ ಸೇರಿದಂತೆ ಎಲ್ಲ ಭಕ್ತಾದಿಗಳು ಶ್ರೀಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ, ಜಾತ್ರಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜೇಂದ್ರ ಸೇವಾ ಸಮಿತಿ ಟ್ರಸ್ಟ್‌ನ ಅಧ್ಯಕ್ಷ ದೇವೇಂದ್ರಗೌಡ ಹೊಸಮನಿ, ಲಿಂಗರಾಜ ಪಲ್ಲೇದ, ಸಿದ್ದನಗೌಡ ಪೊಲೀಸ್ ಪಾಟೀಲ್, ಪರ್ವತಗೌಡ ಹೊಸಮನಿ, ರಾಜ ಶೇಖರಗೌಡ ಹೊಸಮನಿ ಉಪಸ್ಥಿತರಿದ್ದರು.