ಹಾವೇರಿ: ರೈತರ ಆದಾಯ ಎರಡು ಪಟ್ಟು ಹೆಚ್ಚಿಸೋ ಕೆಲಸ ಮಾಡುತ್ತಿದ್ದೇನೆ, ಭೂಮಿಯ ಪ್ರಮಾಣ ಕಡಿಮೆ ಆಗ್ತಿದೆ, ರೈತರ ಮಕ್ಕಳು ಬೇರೆಯವರಂತೆ ಮುಂದೆ ಬರಬೇಕು, ನಾನು ಸಿಎಂ ಆಗ್ತಿದ್ದಂತೆ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡಬೇಕು ಅಂತಾ ನಿರ್ಧಾರ ಮಾಡಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾವಿ ತಾಲೂಕು ಕಲಕಟ್ಟಿ ಗ್ರಾಮದಲ್ಲಿ 34.47 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾದ ಶಿಗ್ಗಾವಿ ಏತನೀರಾವರಿ ಯೋಜನೆಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿಗಳು. ಇಡೀ ದೇಶದಲ್ಲಿ ಇಂಥಾ ಯೋಜನೆ ಇರೋದು ಕರ್ನಾಟಕದಲ್ಲಿ ಮಾತ್ರ, ರೈತರಿಗೆ ಇದು ಮಾತ್ರವಲ್ಲದೆ ಬೇರೆ ಬೇರೆ ರೀತಿಯ ತರಬೇತಿ ಕೊಟ್ಟು ಅವರ ಅಭಿವೃದ್ಧಿ ಆಗುವಂತೆ ಮಾಡುತ್ತೇನೆ. ಗ್ರಾಮೀಣ ಪ್ರದೇಶಗಳಲ್ಲಿ ಆರ್ ಸಿಸಿ ಮನೆಗಳು ನೌಕರಿ ಮಾಡೋರದ್ದು ಮಾತ್ರ ಆಗಿದೆ, ಹೀಗಾಗಿ ರೈತರ ಮಕ್ಕಳಿಗಾಗಿ ಯೋಜನೆ ರೂಪಿಸಿದ್ದೇನೆ ಎಂದರು.
ಸಂಧ್ಯಾ ಸುರಕ್ಷಾ, ವಿಧವಾ ವೇತನ, ವಿಕಲಚೇತನರ ವೇತನ ಹೆಚ್ಚಳ ಮಾಡಿದ್ದೇನೆ, ಒಬ್ಬ ಆಡಳಿತಗಾರನಿಗೆ ಜನರ ನಾಡಿಮಿಡಿತ ಗೊತ್ತಿರಬೇಕು, ದುಡಿಮೆ ಇದ್ದ ನಾಡು ಶ್ರೀಮಂತ ಆಗಿರಬೇಕು, ನಾಡಿನ ಜನತೆ ಶ್ರೀಮಂತರಾದ್ರೆ ನಮ್ಮ ಸರಕಾರಗಳು ಶ್ರೀಮಂತ ಆಗುತ್ತವೆ. ನನ್ನ ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ಇನ್ನಷ್ಟು ಕಲ್ಪನೆಗಳನ್ನ ಇಟ್ಟುಕೊಂಡಿದ್ದೆ ಅವೆಲ್ಲವನ್ನೂ ಬರೋ ದಿನಗಳಲ್ಲಿ ಮಾಡಿಕೊಡುತ್ತೇನೆ ಎಂದರು.
ಇದನ್ನೂ ಓದಿ :ಕನ್ನಡ ಭಾಷೆಯ ಕಡೆಗಣನೆ : ಸೂಕ್ತ ವಿವರಣೆ ನೀಡಲು ಬೆಂಗಳೂರು ಮೆಟ್ರೋಗೆ ಸಚಿವರಿಂದ ನೋಟಿಸ್
ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಲೋಕೋಪಯೋಗಿ ಖಾತೆ ಸಚಿವರಾದ ಸಿ.ಸಿ ಪಾಟೀಲ,ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಉಪಸ್ಥಿತರಿದ್ದರು.