ಹುಬ್ಬಳ್ಳಿ: ವಿಧಾನ ಪರಿಷತ್ ಸದಸ್ಯ ಹಾಗೂ ಲಿಂಗಾಯತ ಸ್ವತಂತ್ರ ಧರ್ಮ ವೇದಿಕೆ ಅಧ್ಯಕ್ಷ ಬಸವರಾಜ ಹೊರಟ್ಟಿ ಅವರಿಗೆ ಜೀವ ಬೆದರಿಕೆ ಪತ್ರ ಬಂದಿದೆ. ಹತ್ಯೆ ಯತ್ನ ನಡೆದಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ಮುನ್ನೆಚ್ಚರಿಕೆ ವಹಿಸುವಂತೆ ಅಂಚೆ ಮೂಲಕ ಪತ್ರ ಕಳುಹಿಸಿ ಎಚ್ಚರಿಸಿದ್ದಾರೆ.
ಪತ್ರದಲ್ಲಿ ಮುಂಬೈನಿಂದ ಐವರು ಶಾರ್ಪ್ ಶೂಟರ್‌ಗಳು ಬಂದಿದ್ದು, ನಿಮ್ಮನ್ನು ಹತ್ಯೆ ಮಾಡಲೆಂದೇ ಬಂದಿದ್ದಾರೆ. ಜಾಗೃತರಾಗಿರಿ ಎಂದು ಹೇಳಲಾಗಿದೆ. ಪತ್ರ ಕನ್ನಡದಲ್ಲಿ ಬರೆಯಲಾಗಿದೆ. ಯಾವ ಕಾರಣಕ್ಕೆ ಹತ್ಯೆಗೆ ಯತ್ನಿಸಲಾಗುತ್ತಿದೆ ಎಂಬುದರ ಯಾವುದೇ ಮಾಹಿತಿ ಇಲ್ಲ.
ನಿಮ್ಮ ಹಿತದೃಷ್ಟಿಯಿಂದ ಈ ಮಾಹಿತಿ ನೀಡುತ್ತಿದ್ದೇನೆ, ನಿಮ್ಮ ವಿಧೇಯ ಎಂದು ಪತ್ರದಲ್ಲಿ ನಮೂದಿಸಲಾಗಿದೆ. ಈ ಪತ್ರ ಹುಬ್ಬಳ್ಳಿಯ ಉಣಕಲ್ಲನಿಂದ ಪೋಸ್ಟ್ ಮಾಡಲಾಗಿದೆ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ 11:00 ಗಂಟೆ ಸುಮಾರಿಗೆ ಹೊರಟ್ಟಿ ಅವರ ನಿವಾಸಕ್ಕೆ ಪತ್ರ ಬಂದಿದ್ದು, ಅವರ ಕಚೇರಿ ಸಿಬ್ಬಂದಿ ಅದನ್ನು ನೋಡಿದ್ದು ತಕ್ಷಣವೇ ಹೊರಟ್ಟಿ ಅವರ ಗಮನಕ್ಕೆ ತಂದಿದ್ದಾರೆ.
ರಾಜಕೀಯವಾಗಿ ಬಸವರಾಜ ಹೊರಟ್ಟಿ ಅವರಿಗೆ ದೊಡ್ಡಮಟ್ಟದ ಶತ್ರುಗಳು ಇಲ್ಲವಾಗಿದ್ದರೂ, ಅವರು ಇತ್ತೀಚೆಗೆ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಯಾವ ಕಾರಣಕ್ಕೆ ಅವರಿಗೆ ಜೀವ ಬೆದರಿಕೆ ಬಂದಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.
ಜೀವ ಬೆದರಿಕೆ ಪತ್ರ ಕುರಿತಾಗಿ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ಅವರು, ಜೀವ ಬೆದರಿಕ ಪತ್ರ ಬಂದಿರುವ ಬಗ್ಗೆ ಕಚೇರಿ ಸಿಬ್ಬಂದಿ ತಮ್ಮ ಗಮನಕ್ಕೆ ತಂದಿದ್ದು, ಹು.ಧಾ.ಮಹಾನಗರ ಡಿಸಿಪಿ ಬಾಬಾಸಾಬ್ ನೇಮಗೌಡ ಅವರಿಗೆ ಪತ್ರ ಒಪ್ಪಿಸಲಾಗಿದೆ ಎಂದರು.