Advertisement

ಯೋಗೀಶಗೌಡ ಹತ್ಯೆ ಸತ್ಯ ಬಿಚ್ಚಿಡುತ್ತೇನೆ: ಮುತ್ತಗಿ

04:24 PM Jul 10, 2021 | Team Udayavani |

ಧಾರವಾಡ: ಹೆಬ್ಬಳ್ಳಿ ಕ್ಷೇತ್ರದ ಜಿಪಂ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮುಂದುವರಿಸಿರುವ ಬೆನ್ನಲ್ಲೇ ಇದುವರೆಗೂ ಹೇಳದ ವಿಷಯಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಡುವುದಾಗಿ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹೊಸ ಬಾಂಬ್‌ ಸಿಡಿಸಿದ್ದಾನೆ.

Advertisement

ಇಲ್ಲಿನ ಉಪನಗರ ಠಾಣೆಯಲ್ಲಿ ಗುರುವಾರದಿಂದ ಸಿಬಿಐ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಹಾಜರಾಗಲು ಆಗಮಿಸಿದ್ದ ಮುತ್ತಗಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಮತ್ತೂಂದು ತಿರುವು ನೀಡಿದ್ದಾರೆ. ಈ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮುತ್ತಗಿ, ಮತ್ತೂಬ್ಬರನ್ನು ಬಲಿಪಶು ಮಾಡಬೇಡಿ. ನಾನು ಕೂಡ ಅಂಥ ಮನಸ್ಥಿತಿಯವನಲ್ಲ. ಪ್ರಾಮಾಣಿಕವಾಗಿ ಹೋರಾಟ ಮಾಡಿದವನು ನಾನು. ಯಾರ ರಾಜಕೀಯ ಉದ್ದೇಶಕ್ಕೆ ಕೊಲೆಯಾಗಿದೆ ಅನ್ನೋದು ಎಲ್ಲರಿಗೂ ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೂ ಸಾಕಷ್ಟು ವಿಷಯಗಳೂ ಬಯಲಿಗೆ ಬರಲಿವೆ. ಈ ಕುರಿತು ನಾನು ಕೂಡ ಈಗ ಸಿಬಿಐ ಮುಂದೆಯೂ ಸಾಕಷ್ಟು ವಿಷಯ ಹೇಳಲಿದ್ದು, ಮುಂದೆ ಕೋರ್ಟ್‌ನಲ್ಲಿಯೂ ಹೇಳುತ್ತೇನೆ ಎಂದರು.

ನನ್ನ ನಂಬಿದ ಹುಡುಗರ ಸಲುವಾಗಿ ಈ ತೀರ್ಮಾನ ಮಾಡಿರುವೆ. ನನ್ನೊಂದಿಗೆ ಬಹಳಷ್ಟು ಬಡ ಹುಡುಗರಿದ್ದಾರೆ. ನಾನು ವಿನಯ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ. ಯಾವುದೇ ಸಂದರ್ಭದಲ್ಲಿಯೂ ನನ್ನ ಹಾಗೂ ಹುಡುಗರನ್ನು ಬಲಿಪಶು ಮಾಡಲು ಬಿಡಲ್ಲ. ಹಾಗೆಯೇ ಬಲಿಪಶು ಮಾಡಿ ಬದುಕಲು ಆಗೋದಿಲ್ಲ. ಇದೇ ಸಂಬಂಧ ಅನೇಕ ಸತ್ಯ ಹೇಳಲಿದ್ದೇನೆ. ಸಿಬಿಐ ಮುಂದೆ ಇದುವರೆಗೂ ಹೇಳದಿರುವ ವಿಚಾರವನ್ನು ಹೇಳುತ್ತೇನೆಂದು ಸ್ಪಷ್ಟಪಡಿಸಿದರು.

ನನ್ನ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ್ದು ಗೊತ್ತಿರಲಿಲ್ಲ. ಅವರನ್ನು ವಾದಕ್ಕೆ ಕರೆಯುವಷ್ಟು ದೊಡ್ಡವನು ನಾನಲ್ಲ. ಆದರೆ ಅವರು ವಾದಿಸಿದ್ದು ಖುಷಿ ತಂದಿದೆ. ಹೀಗಾಗಿ ಈಗಿರುವ ವಕೀಲರಿಂದ ಎನ್‌ಒಸಿ ಪಡೆಯುತ್ತೇನೆ. ಆದರೆ ಕಪಿಲ್‌ ಅವರನ್ನು ಯಾರು ನೇಮಿಸಿದ್ದಾರೋ ಗೊತ್ತಿಲ್ಲ. ಒಂದು ಕಡೆ ಜಾಮೀನು ರದ್ದತಿಗೆ ಆಗ್ರಹ ನಡೆದಿದ್ದು, ಅದೇ ಕೋರ್ಟ್‌ನಲ್ಲಿ ನನಗೆ ಗೊತ್ತಿಲ್ಲದೇ ನನ್ನ ಪರ ಅವರು ಹಾಜರಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಜಾಮೀನು ಕೇಳುವುದು ಸಹಜ ಪ್ರಕ್ರಿಯೆ. ಆದರೆ ಇನ್ನೊಬ್ಬರ ಜಾಮೀನು ರದ್ದು ಮಾಡಲು ಕೋರುವವರ ಮನಸ್ಥಿತಿ ಎಂತಹದ್ದು ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಅಂಥವರ ಉದ್ದೇಶ ಏನು ಅನ್ನೋದು ಕೂಡ ಗೊತ್ತಾಗುತ್ತಿದೆ. ಮತ್ತೂಂದು ಕಡೆ ಕಪಿಲ್‌ ಸಿಬಲ್‌ರಂತಹ ವಕೀಲರು ನನ್ನ ಪರ ವಾದಿಸುತ್ತಿದ್ದಾರೆ ಎಂದರೆ ಇದೆಲ್ಲವೂ ನನಗೆ ಅರ್ಥವಾಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next