ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹಾಗೂ ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಘೋಷಿಸಿದ್ದಾರೆ.
ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ ಅವರು ರಾಜೀನಾಮೆ ಘೋಷಣೆ ಮಾಡಿದರು.
ಇದನ್ನೂ ಓದಿ:ಭಜರಂಗದಳದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಇವರಿಗಿಲ್ಲ: ರಘು ಸಕಲೇಶಪುರ ವಾಗ್ದಾಳಿ
ಬದಲಾವಣೆ ಬಗ್ಗೆ ಕೆಲವೊಮ್ಮೆ ಮನಸ್ಸಿಗೆ ಸಣ್ಣ,ಪುಟ್ಟ ನೋವಾಗುತ್ತದೆ. ನನಗೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ಬಳಿಗೆ ಹೋಗಿ ಮಾತನಾಡಲು ಧೈರ್ಯವಾಗಲಿಲ್ಲ. ಹಾಗಾಗಿ ಪತ್ರ ಬರೆದಿದ್ದೇನೆ. ಈಗಿನ ಪರಿಸ್ಥಿತಿ ನೋಡಿದರೆ ರಾಜಕೀಯದಲ್ಲಿರಬಾರದು ಎಂದೆನಿಸುತ್ತದೆ. ಜನರು ಈಗ ಹಾಗೇ ಇದ್ದಾರೆ, ರಾಜಕಾರಣಿಗಳು ಹಾಗೇ ಇದ್ದಾರೆ ಎಂದರು.
ಏಳು ಬಾರಿ ಜನರು ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಶಿಕ್ಷಕರ ಕಷ್ಟಕ್ಕೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ಇಡೀ ದೇಶದಲ್ಲಿ ನನ್ನ ರೀತಿ ಬೇರೆ ಯಾರನ್ನೂ ಆರಿಸಿ ಕಳುಹಿಸಿಲ್ಲ. ಇಂದು ಈ ಸ್ಥಾನಕ್ಕೆ ಬರಲು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಮೊದಲು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಕಳೆದ 2000 ಇಸವಿಯಿಂದ ಇಲ್ಲಿಯವರೆಗೂ ಜೆಡಿಎಸ್ ನಲ್ಲಿದ್ದೆ. ದೇವೇಗೌಡರು ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದ್ದಾರೆ. ಕುಟುಂಬದ ಸದಸ್ಯರಂತೆ ನನ್ನನ್ನ ನೋಡಿಕೊಂಡಿದ್ದಾರೆ. ಶಿಕ್ಷಕರ ಒತ್ತಾಯದ ಕಾರಣ ಈಗ ಬದಲಾವಣೆ ಮಾಡುತ್ತಿದ್ದೇನೆ. ಅನಿವಾರ್ಯವಾಗಿ ಪಕ್ಷ ಬದಲಿಸುತ್ತಿದ್ದೇನೆ. ಸ್ವತಂತ್ರವಾಗಿ ಸ್ಪರ್ಧಿಸಿದರೂ ಪಕ್ಷವೊಂದರ ಆಸರೆ ಬೇಕೇ ಬೇಕು. ಯಾವುದೇ ಪಕ್ಷದಿಂದ ನಿಂತರೂ ನಾನು ಎಂಎಲ್‌ಸಿ ಆಗುತ್ತೇನೆ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಯಾವುದೇ ಅಧಿಕಾರಕ್ಕಾಗಿ ಪಕ್ಷ ಬದಲಿಸುತ್ತಿಲ್ಲ ಎಂದರು.