Advertisement

ವಿಧಾನ ಪರಿಷತ್ ಸಭಾಪತಿಗಳ ಕಾರ್ಯವೈಖರಿ ಇತರರಿಗೆ ಮಾದರಿ:ನಿರ್ಗಮಿತ ರಾಜ್ಯಪಾಲರಿಂದ ಶ್ಲಾಘನೆ

07:16 PM Jul 08, 2021 | Team Udayavani |

ಬೆಂಗಳೂರು : ಕಳೆದ ನಾಲ್ಕು ದಶಕಗಳಿಂದ ಸತತವಾಗಿ 7 ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಸ್ತುತ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನ ಸಾರಥ್ಯ ವಹಿಸಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಕಾರ್ಯವೈಖರಿ ಅನುಕರಣೀಯವಾಗಿದ್ದು, ಎಲ್ಲಾ ಪೀಠಾಸೀನಾಧಿಕಾರಿಗಳಿಗೆ ಮಾದಿರಯಾಗಿದೆ ಎಂದು ನಿರ್ಗಮಿತ ರಾಜ್ಯಪಾಲ ವಜೂಭಾಯಿ  ವಾಲಾ ಶ್ಲಾಘಿಸಿದ್ದಾರೆ.

Advertisement

ಆರು ವರ್ಷ ಹತ್ತು ತಿಂಗಳ ಕಾಲ ನಿರಂತರವಾಗಿ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿ ನಿರ್ಗಮಿಸುತ್ತಿರುವ ವಜೂಭಾಯಿ ವಾಲಾರವರನ್ನು ರಾಜಭವನದಲ್ಲಿಂದು ಭೇಟಿ ಮಾಡಿದ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ನಿರ್ಗಮಿತ ರಾಜ್ಯಪಾಲರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಭಾಪತಿಗಳ ಸದನ ಕಲಾಪ ನಡೆಸುವ ಕಾರ್ಯ ಪದ್ಧತಿಯನ್ನು ಕೊಂಡಾಡಿದ ರಾಜ್ಯಪಾಲರು ನಾಲ್ಕು ದಶಕಗಳ ಸಮಾಜಮುಖಿ ಚಿಂತನೆಗಳು ಮತ್ತು ರಾಜಕೀಯ ಅನುಭವದಿಂದ ವಿಧಾನ ಪರಿಷತ್ತಿನ ಕಲಾಪಗಳನ್ನು ಅರ್ಥಪೂರ್ಣವಾಗಿ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.

ಚಿಂತಕರ ಚಾವಡಿಯಾಗಿರುವ ವಿಧಾನ ಪರಿಷತ್ತಿನಲ್ಲಿ ವರ್ತಮಾನದ ಸಮಸ್ಯೆಗಳ ಕುರಿತು ಚಿಂತನ ಮಂಥನ ನಡೆಯುತ್ತಿರುವುದರ ಜೊತೆಗೆ ಹಲವಾರು ಮೌಲ್ವಿಕ ವಿಚಾರಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಸುವ ಮೂಲಕ ಇಡೀ ಸಮಾಜಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳ ಸಾರ್ಥಕ್ಯದ ಕುರಿತು ಸ್ಪಷ್ಟ ಸಂದೇಶ ನೀಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಪಾಲ ವಜೂಭಾಯಿ ವಾಲಾ ನುಡಿದರು.

ಹಿರಿಯ ಸದಸ್ಯರ ಅನುಭವ, ವಿಚಾರಧಾರೆ ಹಾಗೂ ಸದನದ ಘನತೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ನಡೆಸುತ್ತಿರುವ ನಿರಂತರ ಪ್ರಯತ್ನ ಎಲ್ಲರಿಗೂ ಮಾದರಿಯಾಗಿದೆ. ಆರು ವರ್ಷ ಹತ್ತು ತಿಂಗಳ ಕಾಲ ಕರ್ನಾಟಕದ ಜನತೆ ತಮಗೆ ನೀಡಿದ ಗೌರವ ಹಾಗೂ ಸಹಕಾರಕ್ಕೆ ರಾಜ್ಯಪಾಲರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next