ಬೆಂಗಳೂರು: ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿ ಎದುರಿಸುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಸಚಿವ ತನ್ವೀರ್ ಸೇಠ್ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರು ಆರೋಪಿಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ವಿಧಾನ ಸೌಧದ ಎದುರಿನ ಗಾಂಧಿ ಪ್ರತಿಮೆ ಮುಂಭಾಗ 6 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯರು ಸೋಮವಾರ ಶಿಕ್ಷಣ ತಜ್ಞರೊಂದಿಗೆ ದುಂಡುಮೇಜಿನ ಸಭೆ ನಡೆಸಿ, ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಹೊರಟ್ಟಿ, ಸಮಸ್ಯೆಗೆ ಸಂಬಂಧಿಸಿದ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಆದರೆ, ಶಿಕ್ಷಣ ಸಚಿವರು ಸೂಕ್ತ ಉತ್ತರ ನೀಡಿಲ್ಲ. ಸಚಿವರು ಬಹಿರಂಗ ಚರ್ಚೆಗೆ ಬಂದರೆ ದಾಖಲೆಗಳ ಸಮೇತ ಚರ್ಚಿಸಲು ನಾವೆಲ್ಲ ಸಿದ್ದವಿದ್ದೇವೆ ಎಂದರು.
ಸಿದ್ದರಾಮಯ್ಯ ಅವರು ಸೆ.15ರಂದು ಸಭೆ ಕರೆದಿದ್ದಾರೆ. ಅಲ್ಲಿಯ ತನಕವೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ. ನಮ್ಮ ಬೇಡಿಕೆಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗದೇ ಇದ್ದರೆ ಸೆ.15ರ ನಂತರ ಶಾಲಾ ಕಾಲೇಜು ಬಂದ್ ನಡೆಸಲಿದ್ದೇವೆ ಎಂಬ ಎಚ್ಚರಿಕೆಯನ್ನೂ ನೀಡಿದರು.
ಸದಸ್ಯರಾದ ಪುಟ್ಟಣ್ಣ, ಉಪಸಭಾಪತಿ ಮರಿತಿಬ್ಬೇಗೌಡ, ಎಸ್.ವಿ.ಸಂಕನೂರು, ಅರುಣ್ ಶಹಾಪುರ, ಚೌಡರೆಡ್ಡಿ ತೂಪಲ್ಲಿ, ರಮೇಶ್ ಬಾಬು, ಹನುಮಂತ ನಿರಾಣಿ, ರಾಮಚಂದ್ರೇಗೌಡ, ಶ್ರೀಕಂಠೇಗೌಡ ಉಪಸ್ಥಿತರಿದ್ದರು.
ಆರೋಗ್ಯ ತಪಾಸಣೆ: 6 ದಿನಗಳಿಂದ ವಿಧಾನಸೌಧದ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಏರುಪೇರಾಗಿರುವುದರಿಂದ ಸೋಮವಾರ ವೈದ್ಯರ ತಂಡ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಎಲ್ಲಾ ಸದಸ್ಯರ ಮಧುಮೇಹ, ರಕ್ತದೊತ್ತಡ ಸೇರಿದಂತೆ ಸಮಗ್ರ ಆರೋಗ್ಯದ ತಪಾಸಣೆ ನಡೆಸಿದರು.