ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿತರಾಗಿದ್ದ ಬಿಜೆಪಿಯ ಪರಿಷತ್ ಸದಸ್ಯರು ಸಾಲು ಸಾಲಾಗಿ ರಾಜೀನಾಮೆಗೆ ಮುಂದಾಗುತ್ತಿರುವುದರಿಂದ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.
ಪರಿಷತ್‌ನಲ್ಲಿ ಬಿಜೆಪಿಗೆ ಬಹುಮತದ ಕೊರತೆ ಉಂಟಾದರೆ ವಿಧಾನ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸ್ಥಾನಕ್ಕೂ ಕುತ್ತು ಉಂಟಾಗುವ ಸಾಧ್ಯತೆಯಿದೆ. ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬಿಜೆಪಿಯ ಪುಟ್ಟಣ್ಣ ಜತೆಗೆ ಬಾಬುರಾವ್ ಚಿಂಚನಸೂರ್, ಆರ್. ಶಂಕರ್ ರಾಜೀನಾಮೆ ನೀಡಿದ್ದು, ಲಕ್ಷ್ಮಣ ಸವದಿ, ಆಯನೂರ್ ಮಂಜುನಾಥ್ ರಾಜೀನಾಮೆ ಹಾದಿಯಲ್ಲಿದ್ದಾರೆ. ಈ ಮಧ್ಯೆ, ಬಿಜೆಪಿಯಿಂದ ನಾಮನಿರ್ದೇಶನಗೊಂಡಿದ್ದ ಎಚ್. ವಿಶ್ವನಾಥ್ ಸಹ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಆರು ಸದಸ್ಯರ ಬಲ ಬಿಜೆಪಿಗೆ ಕಡಿಮೆಯಾಗಲಿದೆ.
ಪರಿಷತ್‌ನ 75 ಸಂಖ್ಯಾಬಲದ ಪೈಕಿ ಬಿಜೆಪಿ 36, ಕಾಂಗ್ರೆಸ್-26, ಜೆಡಿಎಸ್-8 ಪಕ್ಷೇತರ -1 ಹಾಗೂ ಮೂರು ಖಾಲಿ ಉಳಿದಿವೆ. ಇದೀಗ ಅಥಣಿ ಕ್ಷೇತ್ರದ ಟಿಕೆಟ್ ತಪ್ಪಿಸಿಕೊಂಡು ಬೇಸರಗೊಂಡಿರುವ ಬಿಜೆಪಿಯ ಲಕ್ಷ್ಮಣ ಸವದಿ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ಕೊಡುವ ಸಾಧ್ಯತೆಯಿದೆ. ಅದೇ ರೀತಿ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಆಯನೂರು ಮಂಜುನಾಥ್ ಟಿಕೆಟ್ ಸಿಗದಿದ್ದರೆ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಬಹುದು ಎಂದು ಹೇಳಲಾಗಿದೆ. ಆಗ ಬಿಜೆಪಿ ಬಲ 34ಕ್ಕೆ ಇಳಿಯಲಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬಲ ಸೇರಿ 34 ಇರಲಿದ್ದು, ಎಚ್. ವಿಶ್ವನಾಥ್ ಕಾಂಗ್ರೆಸ್ ಪರ ವಾಲಿದರೆ ಬಿಜೆಪಿ ಬಲ 33ಕ್ಕೆ ಕುಸಿಯಲಿದೆ.
ವಿಧಾನಸಭೆ ಚುನಾವಣೆ ಅನಂತರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಗೆ ಸಭಾಪತಿ ಹಾಗೂ ಉಪಸಭಾಪತಿ ಸ್ಥಾನ ತಪ್ಪಿಸಬಹುದೆಂಬ ಲೆಕ್ಕಾಚಾರಗಳು ಈಗಲೇ ಪ್ರಾರಂಭವಾಗಿವೆ. ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪುಟ್ಟಣ್ಣ ರಾಜಾಜಿನಗರದಿಂದ, ಚಿಂಚನಸೂರ್ ಗುರುಮಿಟ್ಕಲ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಆರ್. ಶಂಕರ್ ರಾಣಿಬೆನ್ನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ. ಅದೇ ರೀತಿ ಲಕ್ಷ್ಮಣ ಸವದಿ ಹಾಗೂ ಆಯನೂರು ಮಂಜುನಾಥ್ ಸಹ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದಾರೆ. ಟಿಕೆಟ್ ಸಿಕ್ಕರೆ ತಾವು ಬಯಸಿರುವ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದ್ದಾರೆ.