ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಸಚಿವ ಸಂಪುಟ ಒಪ್ಪಿಗೆ ನೀಡಿತ್ತಲ್ಲದೆ, ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆಯ್ಕೆ ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ಆಯ್ಕೆ ಪ್ರಕ್ರಿಯೆಗೆ ದಿಢೀರ್ ತಡೆಯೊಡ್ಡುವ ಮೂಲಕ ಬಿಜೆಪಿ ನಾಯಕರು ಹೊರಟ್ಟಿ ಅವರನ್ನು ಅತಂತ್ರ ಮಾಡುವ ಯತ್ನಕ್ಕೆ ಮುಂದಾಗಿ ದ್ದಾರೆಯೇ ಎಂಬ ಶಂಕೆ ಮೂಡಿದೆ.
ಹೊರಟ್ಟಿ ಸುಮಾರು ಮೂರು ದಶಕಗಳ ಕಾಲದ ಜನತಾ ಪರಿವಾರದ ನಂಟು ತೊರೆದು ಬಿಜೆಪಿ ಸೇರಿ ಪಶ್ಚಿಮ ಶಿಕ್ಷಕ ಕ್ಷೇತ್ರದಿಂದ ಗೆದ್ದಿದ್ದಾರೆ. ಬಿಜೆಪಿ ಸೇರುವ ಮುನ್ನ ಸ್ಥಳೀಯ ಹಾಗೂ ರಾಜ್ಯ-ರಾಷ್ಟ್ರಮಟ್ಟದ ನಾಯಕ ರೊಂದಿಗೂ ಸಮಾಲೋಚಿಸಿದ್ದರು. ಪಕ್ಷಕ್ಕೆ ಸೇರಿ ಗೆದ್ದರೆ ಮತ್ತೆ ಸಭಾಪತಿ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ.
ಪ್ರಸ್ತುತ ಬಿಜೆಪಿಯ ರಘುನಾಥ ರಾವ್ ಮಲ್ಕಾಪುರೆ ಪ್ರಭಾರ ಸಭಾಪತಿ ಯಾಗಿದ್ದಾರೆ. ಸಾಮಾನ್ಯವಾಗಿ ವಿಧಾನ ಮಂಡಲ ಅಧಿವೇಶನ ವೇಳೆ ಪೂರ್ಣಾವಧಿ ಸಭಾಪತಿಯನ್ನು ಆಯ್ಕೆ ಮಾಡಲಾಗುತ್ತದೆ.
ಹೊರಟ್ಟಿಗೆ ನೀಡಿದ ಭರವಸೆಯಂತೆ ಹಾಲಿ ಅಧಿವೇಶನ ವೇಳೆಯೇ ಸಭಾಪತಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಬೇಕಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ನೀಡಲಾಗಿತ್ತು. ನಿರೀಕ್ಷೆಯಂತೆ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಹಾಗೂ ಉಪ ಸಭಾಪತಿ ಸ್ಥಾನಕ್ಕೆ ಕೆ. ಪ್ರಾಣೇಶ್ ಹೆಸರು ಕೇಳಿ ಬಂದಿದ್ದವು. ಆದರೆ ದಿಢೀರ್ ಬೆಳವಣಿಗೆ ಯಲ್ಲಿ ಸಭಾಪತಿ ಸ್ಥಾನದ ಆಯ್ಕೆ ಪ್ರಕ್ರಿಯೆಗೆ ತಡೆಯಾಗಿದೆ. ಇದಕ್ಕೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಸೂಚನೆ ಕಾರಣ ಎಂಬ ಮಾತೂ ಕೇಳಿ ಬರುತ್ತಿದೆ.
ಡಿಸೆಂಬರ್‌ವರೆಗೆ
ಸಭಾಪತಿ ಆಯ್ಕೆ ಇಲ್ಲ
ಮೂಲಗಳ ಪ್ರಕಾರ ಡಿಸೆಂಬರ್‌ವರೆಗೆ ಸಭಾಪತಿ ಆಯ್ಕೆ ಬೇಡ ಎಂದು ನಿರ್ಧರಿಸಲಾಗಿದೆ ಎನ್ನಲಾಗಿದೆ. ಸಭಾಪತಿ ಆಯ್ಕೆ ಕುರಿತಾಗಿ ಕೆಲವು ದಿನಗಳ ಹಿಂದೆ ನಡೆದಿದ್ದ ಬಿಜೆಪಿ ಸಭೆಯಲ್ಲಿ ಪಕ್ಷದ 31 ಸದಸ್ಯರಲ್ಲಿ 27 ಮಂದಿ ಹೊರಟ್ಟಿ ಪರ ಅನಿಸಿಕೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಯಾವ ಬೆಳವಣಿಗೆಗಳಾಗಿವೆ ಎಂಬ ಮಾಹಿತಿ ನನಗಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಅದಕ್ಕೆ ಬದ್ಧನಾಗಿರುತ್ತೇನೆ.
– ಬಸವರಾಜ ಹೊರಟ್ಟಿ,
ವಿಧಾನ ಪರಿಷತ್ ಸದಸ್ಯ