ಬೆಂಗಳೂರು : ಪ್ರತೀವರ್ಷ ದೀಪಾವಳಿ ಹುಬ್ಬಳ್ಳಿಯಲ್ಲಿ ಆಚರಿಸ್ತೀನಿ, ಇವತ್ತು ಹಿರಿಯರ ಹಬ್ಬ, ನಾಡಿದ್ದು ಬೆಂಗಳೂರಿಗೆ ವಾಪಸ್ ಬರುತ್ತೇನೆ ಎಂದು ಹುಬ್ಬಳ್ಳಿಗೆ ಹೋಗುವ ಮುನ್ನ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದರು.
ಫಲಿತಾಂಶ ವಿಚಾರದಲ್ಲಿ ವ್ಯಾಖ್ಯಾನ ಸಹಜ, ಒಂದು ಕಡೆ ಸೋಲಾಗಿದೆ ಮತ್ತೊಂದು ಕಡೆ ಗೆಲುವು, ಸೋಲು ಗೆಲುವು ಸಮಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಸೋಲಿನ ಬಗ್ಗೆ ಆತ್ಮಾವಲೋಕನ ಮಾಡ್ಕೋತೇವೆ. ಗೆಲುವಿಗೆ ಶ್ರಮಪಟ್ಟ ನಮ್ಮ ನಾಯಕರು, ಕಾರ್ಯಕರ್ತರು, ಮತದಾರರಿಗೆ ಅಭಿನಂದನೆ. ಸೋಲಿನ ಅಂತರವನ್ನು ಸಾಧಿಸಬಹುದಿತ್ತು ನಾವು ಎಂದು ಉಪಚುನಾವಣೆಗಳ ಫಲಿತಾಂಶದ ಬಗ್ಗೆ ಸಿಎಂ ಹೇಳಿದರು.
ಸೋಲಿನ ಕಾರಣಗಳನ್ನು ಮುಂದಿನ ದಿನಗಳಲ್ಲಿ ಆತ್ಮವಿಮರ್ಶೆ ಮಾಡಿ ಸರಿಪಡಿಸಿಕೊಳ್ತೇವೆ. ಹಾನಗಲ್ ನಲ್ಲಿ ಸಿ ಎಂ ಉದಾಸಿಯವರ ಬೇಸ್ ಮುಂದುವರೆಸಲು ಸ್ವಲ್ಪ ಮಟ್ಟಿಗೆ ಆಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ವೇಳೆ ಜನರ ಪರ ಕೆಲಸ ಮಾಡಿದ್ರು ಅನ್ನುವ ಭಾವನೆ ಜನರಲ್ಲಿತ್ತು. ಇವೆರಡು ನಮ್ಮ ಸೋಲಿಗೆ ಕಾರಣಗಳು. ಫಲಿತಾಂಶದ ವಿಚಾರ ಹೈಕಮಾಂಡ್ ಗೆ ತಿಳಿಸುವ ಕೆಲಸ ಪಕ್ಷ ಮಾಡುತ್ತೆ ಎಂದರು.
ನಾಳೆ ಸಿಎಂ ಹುದ್ದೆಗೇರಿ ನೂರು ದಿನ ಹಿನ್ನೆಲೆಯಲ್ಲಿ ಮಾತನಾಡಿದ ಸಿಎಂ, ನೂರು ದಿನ ಅನ್ನೋದು ವಿಶೇಷ ಅಲ್ಲ. ನೂರು ದಿನಗಳಲ್ಲಿ ಏನು ಮಾಡಿದೀವಿ ಅನ್ನೋದು ಮುಖ್ಯ. ನೂರು ದಿನ ಒಂದು ವರ್ಷದ ಹಾಗೆ ಪ್ರಮುಖ ಘಟ್ಟ ಅಲ್ಲ. ನೂರು ದಿನಗಳಲ್ಲಿ ಏನು ಕೆಲಸ ಮಾಡಿದೀವಿ ಅಂತ ತಿಳಿಸುವ ಕೆಲಸ ಮಾಡ್ತೀವಿ. ನೂರು ದಿನಗಳಲ್ಲಿ ನಮ್ಮ ಅಭಿವೃದ್ಧಿ, ಸವಾಲುಗಳ ಬಗ್ಗೆ ಜನರಿಗೆ ಸ್ಥೂಲ ಮಾಹಿತಿ ಕೊಡ್ತೇವೆ ಎಂದರು.
ಬಿಟ್‌ಕಾಯಿನ್ ದಾಖಲೆ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಆರೋಪ ಮಾಡಿದ್ದಾರೆ ಅವರು ದಾಖಲೆ ಬಿಡುಗಡೆ ಮಾಡಬೇಕು. ನಾವು ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಅದು ಪಬ್ಲಿಕ್ ಡೊಮೈನ್ ನಲ್ಲೇ ಇದೆ ಎಂದರು.