Advertisement

ಕಲ್ಯಾಣ ಕರ್ನಾಟಕ ಸ್ಥಾಪನೆಗೆ ಬಸವಣ್ಣರಿಂದ ಬುನಾದಿ

10:11 AM Feb 12, 2019 | |

ಮೊಳಕಾಲ್ಮೂರು: ಸಮಾಜದಲ್ಲಿ ಬಸವಾದಿ ಶಿವಶರಣರ ವಿಚಾಧಾರೆಗಳನ್ನು ಬರೀ ಬಾಯಿ ಮಾತಿಗೆ ಸೀಮಿತಗೊಳಿಸದೆ ನೈಜವಾಗಿ ಕಾರ್ಯಗತಗೊಳಿಸಿದ ಕೀರ್ತಿ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿ, ಇಳಕಲ್‌ ಮಹಾಂತ ಅಪ್ಪಗಳು, ಗದುಗಿನ ತೋಂಟದ ಶ್ರೀಗಳು, ಪಾಂಡೋಮೆಟ್ಟಿ ಚನ್ನಬಸವಯ್ಯ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಚಿತ್ತರಗಿ ಚಿಜ್ಯೋತಿ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಆಯೋಜಿಸಿದ್ದ ಗಡಿನಾಡ ಉತ್ಸವದ ಸಮಾರಂಭ ಹಾಗೂ ಮಹಾಂತ ಗುರು ಕಾರುಣ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸದ ಮಹತ್ವ ಹಾಗೂ ಜಾತಿ, ವರ್ಗ ರಹಿತ ಸಮಾಜದ ಸ್ಥಾಪನೆ ಮಾಡಿದರು. ವಿಶ್ವ ಮಾನವ ಸಂದೇಶ ಸಾರಿ ಕಲ್ಯಾಣ ಕರ್ನಾಟಕದ ಸ್ಥಾಪನೆಗೆ ನಾಂದಿ ಹಾಡಿದರು. ಕಲಿಯುಗದಲ್ಲಿ ದೇಶದ ತುಂಬೆಲ್ಲಾ ವ್ಯಾಪಿಸಿರುವ ಧಾರ್ಮಿಕ ಸಂಸ್ಥೆಗಳು, ಮಠಮಾನ್ಯಗಳು ಹಾಗೂ ಬೆರಳೆಣಿಕೆಯಷ್ಟು ಜನ ಮಾತ್ರ ಬಸವಣ್ಣನವರ ತತ್ವಾದರ್ಶಗಳನ್ನು ನೈಜವಾಗಿ ಪಾಲಿಸುತ್ತಿದ್ದಾರೆ. ಇಡೀ ಮಾನವ ಕುಲ ಒಂದೇ ಎಂಬ ಕಲ್ಪನೆಯನ್ನು ಬಿತ್ತಿದ ಬಸವಣ್ಣನವರು ಯಾವುದೇ ಜಾತಿ, ವರ್ಗ ಭೇದ ಮಾಡಲಿಲ್ಲ. ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ ಎಂದು ಗೌರವಾದರಗಳಿಂದ ಸಂಬೋಧಿಸಿ ಎಲ್ಲರನ್ನೂ ಅಪ್ಪಿಕೊಂಡು ಸಮ ಸಮಾಜದ ಕಲ್ಪನೆಯೊಂದಿಗೆ ಅನುಭವ ಮಂಟಪದ ಸ್ಥಾಪನೆಗೆ ಕಾರಣರಾಗಿದ್ದರು ಎಂದು ಸ್ಮರಿಸಿದರು.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ರಿಜಿಸ್ಟ್ರಾರ್‌ ಅಶೋಕ್‌ ಎನ್‌. ಛಲವಾದಿ ಮಾತನಾಡಿ, ಇಳಕಲ್ಲಿನ ಮಹಾಂತ ಅಪ್ಪಗಳು ದಲಿತರಿಗೆ ನಿಜವಾದ ಎರಡನೇ ಅಂಬೇಡ್ಕರ್‌ ಇದ್ದಂತೆ. ದಲಿತರ ಸ್ವಾಭಿಮಾನದ ಬದುಕನ್ನು ನಿರ್ಮಿಸಿಕೊಟ್ಟ ಮಹಾನ್‌ ಚೇತನವಾಗಿದ್ದಾರೆ. ಲಿಂಗಾಯತ ಪರಂಪರೆಯ ಮಠ ಮಾನ್ಯಗಳಿಗೆ ದಲಿತರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿಕೊಳ್ಳುವುದು 21ನೇ ಶತಮಾನದ ಕ್ರಾಂತಿಕಾರಿ ಬದಲಾವಣೆ. ಅವರ ವಿಚಾರಧಾರೆಗಳಂತೆ ಬಸವಲಿಂಗ ಸ್ವಾಮಿಗಳು ತ್ರಿವಿಧ ದಾಸೋಹದ ಮೂಲಕ ರಾಜ್ಯದ ಎಲ್ಲಾ ಮಠಾಧೀಶರಿಗಿಂತಲೂ ಭಿನ್ನ ವ್ಯಕ್ತಿತ್ವದವರಾಗಿದ್ದಾರೆ ಎಂದರು.

ಇಳಕಲ್ಲಿನ ಶ್ರೀ ಗುರುಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಕೊಂಡ್ಲಹಳ್ಳಿಯ ನೇತ್ರತಜ್ಞ ಡಾ|ನಾಗರಾಜ್‌ ಅವರಿಗೆ ‘ಮಹಾಂತ ಗುರು ಕಾರುಣ್ಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯರ್ರೇನಹಳ್ಳಿ ಮಾರಣ್ಣ, ಗುಂಡುಮುಣುಗು ಗ್ರಾಮದ ವಿಕಲಚೇತನ ಕಲಾವಿದೆ ಲಕ್ಷ್ಮೀದೇವಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಡಿ.ಒ. ಮುರಾರ್ಜಿ ಮತ್ತು ಸಂಗಡಿಗರು ವಚನ ಗಾಯನ ಪ್ರಸ್ತುತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಬಸವಲಿಂಗ ಸ್ವಾಮೀಜಿ, ಶಿರೂರು ಮಠದ ಡಾ| ಬಸವಲಿಂಗ ಶ್ರೀಗಳು, ಗಡಿನಾಡ ಉತ್ಸವ ಸಮಿತಿ ಅಧ್ಯಕ್ಷ ಪಟೇಲ್‌ ಜಿ. ಪಾಪನಾಯಕ, ಕಾರ್ಯದರ್ಶಿ ಪಿ.ಆರ್‌. ಕಾಂತರಾಜ್‌, ಜಿಪಂ ಸದಸ್ಯ ಡಾ| ಬಿ. ಯೋಗೇಶ್‌ಬಾಬು, ಕೆಡಿಪಿ ಸದಸ್ಯ ಎಸ್‌. ಜಯಣ್ಣ, ತಾಪಂ ಸದಸ್ಯ ಟಿ. ರೇವಣ್ಣ, ದಲಿತ ಸಂಘರ್ಷ ಸಮಿತಿ ಸಂಚಾಲಕ ಒ. ಕರಿಬಸಪ್ಪ ಮತ್ತಿತರರು ಭಾಗವಹಿಸಿದ್ದರು.

ರಾಜ್ಯದ ಮಠಾಧೀಶರು ತಮ್ಮ ಸೇವಾ ಕೈಂಕರ್ಯಗಳಿಂದ ದೇಶ ವಿದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೀನ ದುರ್ಬಲರ ಏಳಿಗೆಗಾಗಿ ಶಿಕ್ಷಣ, ಅನ್ನದಾಸೋಹದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಬಸವಣ್ಣನವರ ವಿಚಾರಧಾರೆಗಳನ್ನು ಚಾಚೂ ತಪ್ಪದೆ ಪಾಲಿಸಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಇಳಕಲ್ಲಿನ ಮಹಾಂತ ಅಪ್ಪಗಳು ಮೊದಲಿಗರೆನ್ನಿಸಿಕೊಂಡಿದ್ದಾರೆ ಎಂದು ಪ್ರಾಧ್ಯಾಪಕ ಪ್ರೊ| ಸಿದ್ದಣ್ಣ ಹೇಳಿದರು.

ವಿಧವಾ ವಿವಾಹ, ಅಂತರ್ಜಾತೀಯ ವಿವಾಹ, ಲಿಂಗಾಯತ ಧಾರ್ಮಿಕ ಮಠಮಾನ್ಯಗಳಿಗೆ ದಲಿತ ವಟುಗಳ ನೇಮಕ, ಮಹಾಂತ ಜೋಳಿಗೆ ಸೇರಿದಂತೆ ಇತರೆ ವಿನೂತನ ಹೆಜ್ಜೆಗಳಿಂದ ಮಹತ್ವದ ಮೈಲುಗಲ್ಲು ಸ್ಥಾಪಿಸಿ ಹೋಗಿದ್ದಾರೆ. ಗದುಗಿನ ತೋಂಟದಾರ್ಯ ಶ್ರೀಗಳು ಕನ್ನಡದ ಕುಲಗುರುಗಳಾಗಿದ್ದು, ಪುರೋಹಿತಶಾಹಿಗಳ ಯಾವ ಮುಲಾಜಿಗೂ ಬಗ್ಗದೆ ನೈಜ ಬಸವ ತತ್ವದ ಶಿಲ್ಪಿಗಳಾಗಿದ್ದರು. ಧರ್ಮವೆಂಬುದು ಮನುಷ್ಯ ಕುಲದ ಒಳಿತಿಗಾಗಿ ಎಂಬುದನ್ನು ಎತ್ತಿ ಹಿಡಿದು ಮೂಢನಂಬಿಕೆಗಳನ್ನು ದೂರ ಮಾಡಿ ಜನಸಾಮಾನ್ಯರು ಕ್ರಿಯಾತ್ಮಕವಾಗಿ ಜೀವಿಸಲು ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.

ಮಹಾಂತ ಅಪ್ಪಗಳಿಂದ ಕ್ರಾಂತಿಕಾರಿ ಬದಲಾವಣೆ
ರಾಜ್ಯದ ಮಠಾಧೀಶರು ತಮ್ಮ ಸೇವಾ ಕೈಂಕರ್ಯಗಳಿಂದ ದೇಶ ವಿದೇಶಗಳು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ದೀನ ದುರ್ಬಲರ ಏಳಿಗೆಗಾಗಿ ಶಿಕ್ಷಣ, ಅನ್ನದಾಸೋಹದ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಬಸವಣ್ಣನವರ ವಿಚಾರಧಾರೆಗಳನ್ನು ಚಾಚೂ ತಪ್ಪದೆ ಪಾಲಿಸಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಇಳಕಲ್ಲಿನ ಮಹಾಂತ ಅಪ್ಪಗಳು ಮೊದಲಿಗರೆನ್ನಿಸಿಕೊಂಡಿದ್ದಾರೆ ಎಂದು ಪ್ರಾಧ್ಯಾಪಕ ಪ್ರೊ| ಸಿದ್ದಣ್ಣ ಹೇಳಿದರು. ವಿಧವಾ ವಿವಾಹ, ಅಂತರ್ಜಾತೀಯ ವಿವಾಹ, ಲಿಂಗಾಯತ ಧಾರ್ಮಿಕ ಮಠಮಾನ್ಯಗಳಿಗೆ ದಲಿತ ವಟುಗಳ ನೇಮಕ, ಮಹಾಂತ ಜೋಳಿಗೆ ಸೇರಿದಂತೆ ಇತರೆ ವಿನೂತನ ಹೆಜ್ಜೆಗಳಿಂದ ಮಹತ್ವದ ಮೈಲುಗಲ್ಲು ಸ್ಥಾಪಿಸಿ ಹೋಗಿದ್ದಾರೆ. ಗದುಗಿನ ತೋಂಟದಾರ್ಯ ಶ್ರೀಗಳು ಕನ್ನಡದ ಕುಲಗುರುಗಳಾಗಿದ್ದು, ಪುರೋಹಿತಶಾಹಿಗಳ ಯಾವ ಮುಲಾಜಿಗೂ ಬಗ್ಗದೆ ನೈಜ ಬಸವ ತತ್ವದ ಶಿಲ್ಪಿಗಳಾಗಿದ್ದರು. ಧರ್ಮವೆಂಬುದು ಮನುಷ್ಯ ಕುಲದ ಒಳಿತಿಗಾಗಿ ಎಂಬುದನ್ನು ಎತ್ತಿ ಹಿಡಿದು ಮೂಢನಂಬಿಕೆಗಳನ್ನು ದೂರ ಮಾಡಿ ಜನಸಾಮಾನ್ಯರು ಕ್ರಿಯಾತ್ಮಕವಾಗಿ ಜೀವಿಸಲು ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next