ಕಲಬುರಗಿ: ದೇಶದಲ್ಲಿ ಪರಸ್ಪರರನ್ನು ಗೌರವಿಸುವ ಸಂಸ್ಕೃತಿ 12ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದನ್ನೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಣಗಾನ ಮಾಡಿ ತಮ್ಮತನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ದೊಡ್ಡ ಉಪೇಕ್ಷೆ ಏನಿಲ್ಲ ಎಂದು ಗುವಿವಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಪ್ರಸಾರಂಗದ ನಿರ್ದೇಶಕ ಹಾಗೂ ದಲಿತ ಚಿಂತಕ ಪ್ರೊ| ಎಚ್.ಟಿ. ಪೋತೆ ಹೇಳಿದರು.
ನಗರದ ಚೆಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬೀದರ ಜಿಲ್ಲೆ ಕೌಠಾ ಬಸವ ಆಶ್ರಮದ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಕಲಬುರಗಿ ಬಸವ ಪ್ರಕಾಶನ ಸಂಸ್ಥಾಪಕಿ ಲಿಂ| ಬಸಮ್ಮ ಬಸವರಾಜ ಕೋನೇಕ ಅವರ ನಾಲ್ಕನೇ ಪುಣ್ಯ ಸ್ಮರಣೋತ್ಸವ ಹಾಗೂ ಅವರ ಸ್ಮರಣಾರ್ಥ ನೀಡುವ ಬಸವ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರತಿ ವ್ಯಕ್ತಿಯೂ ಗಣ್ಯ ಎನ್ನುವ ಸಂಸ್ಕೃತಿ ನವ ಭಾರತದ ಪರಿಕಲ್ಪನೆ ಎಂದು ಮೋದಿ ಅವರು ಹೇಳಿದ್ದಾರೆ. ಆದರೆ, 12ನೇ ಶತಮಾನದಲ್ಲಿಯೇ ನಮ್ಮ ಬಸವಣ್ಣ ಪ್ರತಿಯೊಬ್ಬರು ಗೌರವಾರ್ಹರು, ಪರಸ್ಪರರು ಗೌರವಿಸಬೇಕು. ಅದರಲ್ಲಿ ವೃತ್ತಿಗೌರವೂ ಸೇರಿದಂತೆ ಎಲ್ಲರೂ ಸಮಾನರು ಎನ್ನುವ ಪರಿಕಲ್ಪನೆಯಲ್ಲ. ವಾಸ್ತವ ಆಚರಣೆಗಳನ್ನು ಜಾರಿಗೆ ತಂದಿದ್ದರು.
ಅದನ್ನು ಎಲ್ಲ ಶರಣರು ಒಪ್ಪಿ ನಡೆದಿದ್ದರು. ಆದ್ದರಿಂದ ಇವತ್ತು ನವಭಾರತ ಪರಿಕಲ್ಪನೆ ಎನ್ನುವುದು ಈ ಮೊದಲೇ ನಮ್ಮಲ್ಲಿ ಆಚರಣೆಯಲ್ಲಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಬಸವಣ್ಣ ನಮಗೆ ವಚನ ಸಾಹಿತ್ಯ ಕೊಡಲಿಲ್ಲ.. ಬದಲಿಗೆ ಪ್ರಜಾಸಾಹಿತ್ಯ ಕೊಟ್ಟರು. ಅದೂ ಚಳವಳಿ ಸಾಹಿತ್ಯವೂ ಹೌದು.
ರಾಜಸತ್ತೆ-ಪುರೋಹಿತ ಸತ್ತೆಗಳ ವಿರುದ್ಧ ಎದ್ದ ಚಳವಳಿ ಸಾಹಿತ್ಯ ಈ ವಚನ ಸಾಹಿತ್ಯ. ಅಂತಹ ದೊಡ್ಡ ಸಂಸ್ಕೃತಿಯನ್ನೇ ಬಸವಣ್ಣ ನಮಗೆ ನೀಡಿದ್ದನ್ನು ನಾವು ಹಗುರವಾಗಿ ತೆಗೆದುಕೊಂಡಿದ್ದೇವಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಈ ವೇಳೆ ಸಿದ್ದರಾಮ ಶರಣರು ಬೆಲ್ದಾಳ ಅವರಿಗೆ ಬಸವ ಸಿರಿ ಪ್ರಶಸ್ತಿ ಹಾಗೂ 11 ಸಾವಿರ ರೂ.ಗಳ ಗೌರವ ಅರ್ಪಣೆ ಮಾಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ| ವಸಂತ ಕುಷ್ಟಗಿ ಮಾತನಾಡಿದರು.
ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಸಿದ್ದಲಿಂಗೇಶ್ವರ ಬುಕ್ ಡಿಫೋ ಮತ್ತು ಪ್ರಕಾಶನದ ಬಸವರಾಜ ಕೊನೇಕ, ಸಿದ್ದಲಿಂಗ ಕೊನೆಕ, ಶರಣಬಸವ ಕೊನೆಕ ಹಾಗೂ ಗಣ್ಯರು, ಸಾಹಿತಿಗಳು, ಬರಹಗಾರರು ಕೊನೆಕ್ ಕುಟುಂಬ ಸದಸ್ಯರು ಇದ್ದರು.ಪ್ರೊ| ಶೀಶೈಲ ನಾಗರಾಳ ಸ್ವಾಗತಿಸಿದರು. ಪ್ರೊ| ಶಿವರಾಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಗವಿಸಿದ್ದಪ್ಪ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.