ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರುವಾರ ಗಣಪತಿ ಮೂರ್ತಿಗಳ ಬದಲು ಬಸವೇಶ್ವರ
ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಗ್ರಾಮದ ಹಲವರು ತಾವು ನಿರ್ಮಿಸಿದ ನೂತನ ಮನೆಗಳಿಗೆ ಗುರು ಬಸವಣ್ಣನವರ ಮೂರ್ತಿಗಳನ್ನು ಗಣೇಶ ಹಬ್ಬದಂದು
ಪ್ರತಿಷ್ಠಾಪಿಸಬೇಕೆಂದು ಕೂಡಲಸಂಗಮದ ಬಸವ ಧರ್ಮಪೀಠದಿಂದ ಮೂರ್ತಿಗಳನ್ನು ಖರೀದಿಸಿ, ಗ್ರಾಮದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದಲ್ಲಿ ಇರಿಸಿದ್ದರು.
ಪ್ರತಿಷ್ಠಾಪನೆ ಕಾರ್ಯಕ್ಕೆ ಜಗದ್ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯುವಕರು ಪ್ರಜ್ಞಾವಂತರಾಗುತ್ತಿದ್ದು ಮೌಡ್ಯದಿಂದ ದೂರ ಸರಿಯುತ್ತಿದ್ದಾರೆ.
ಶರಣರ ಸಂದೇಶಗಳು ಅನುಷ್ಠಾನಗೊಳ್ಳುವ ಕಾಲ ಸಮೀಪಿಸುತ್ತಿದೆ. ಗ್ರಾಮದ ಕೆಲ ಲಿಂಗಾಯತರು ಗಣೇಶ ಮೂರ್ತಿ ಬದಲಾಗಿ ಬಸವಣ್ಣನವರ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಲು ಮುಂದಾಗಿರುವುದು ವಿಶೇಷವೆನಿಸಿದೆ ಎಂದರು.
ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ಪೂಜೆ, ವಚನ ಪ್ರಾರ್ಥನೆ, ಭಜನಾ ಕಾರ್ಯಕ್ರಮ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡಿ ಮೂರ್ತಿಗಳನ್ನು ತಂತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು. ಗ್ರಾಮದ ಬಸವ ಕೇಂದ್ರದ ಸದಸ್ಯರಿಂದ ಶಿರಸಂಗಿ ಲಿಂಗರಾಜ ದೇಸಾಯಿ ಹಾಗೂ ದಾಸೋಹಮೂರ್ತಿ ಡಾ.ಶಿವಬಸವ ಮಹಾಸ್ವಾಮೀಜಿಗಳ ಲಿಂಗೈಕ್ಯ ಸ್ಮರಣೆ ನಿಮಿತ್ತ ಪ್ರಾರ್ಥನೆ, ಅನುಭಾವ ಹಾಗೂ ಮೌನಾಚರಣೆ ನಡೆಯಿತು.