ಚಿಕ್ಕಮಗಳೂರು: ಜಿಲ್ಲೆ ಪ್ರಕೃತಿ ಆರಾಧಕರ ನಾಡು. ಪ್ರತೀ ನಿತ್ಯ ಸಾವಿರಾರು ಪ್ರವಾಸಿಗರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಚಿಕ್ಕಮಗಳೂರು ನಗರಕ್ಕೆ ಪ್ರವೇಶಿಸುತ್ತಿದ್ದಂತೆ ಬಸವನಹಳ್ಳಿ ಕೆರೆ ಮತ್ತು ಕೋಟೆಕೆರೆ ನಿಮ್ಮನ್ನು ಸ್ವಾಗತಿಸುತ್ತವೆ. ಎರಡೂ ಕೆರೆಗಳು ಗಬ್ಬು ನಾರುತ್ತಿದ್ದು ಇಡೀ ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಂತಿವೆ.
ಕೆರೆಯ ದಂಡೆಯ ಮೇಲೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಬಸವನಹಳ್ಳಿ ಕೆರೆ ನಡುಗಡ್ಡೆ ಹಗಲು ಹೊತ್ತು ಪ್ರೇಮಿಗಳ ಅಡ್ಡೆಯಾಗಿದೆ. ಸಂಜೆ ಮದ್ಯಪ್ರಿಯರ ತಾಣವಾಗಿದೆ. ಸುಂದರವಾಗಿ ಪ್ರವಾಸಿಗರನ್ನು ಆಕರ್ಷಿಸಬೇಕಿದ್ದ ನಡುಗಡ್ಡೆ ಅನೈತಿಕ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ. ಇಡೀ ಕೆರೆ ಹಾಗೂ ನಡುಗಡ್ಡೆಯ ಸುತ್ತಲೂ ನೀರಿನಲ್ಲಿ ಜೊಂಡು ಹುಲ್ಲು ಆವರಿಸಿಕೊಂಡಿದೆ.
ಅನುಪ ಯುಕ್ತ ಗಿಡಗಂಟಿಗಳು ಇಡೀ ಕೆರೆಯನ್ನು ಆವರಿಸಿಕೊಂಡಿವೆ. ಮನೆ ನಿರ್ಮಾಣದ ತ್ಯಾಜ್ಯ ಹಾಗೂ ಅನುಪಯುಕ್ತ ವಸ್ತುಗಳನ್ನು ಕೆರೆ ದಂಡೆಯ ಮೇಲೆ ಸುರಿಯಲಾಗಿದೆ. ಇನ್ನು ಕೆರೆ ನೀರಿಗೆ ಪ್ರತೀ ನಿತ್ಯ ತ್ಯಾಜ್ಯ ಎಸೆಯುವುದರಿಂದ ನೀರು ಸಂಪೂರ್ಣ ಕಲುಷಿತಗೊಂಡು ಗಬ್ಬು ನಾರುತ್ತಿದೆ.
ನಿರ್ಜನ ಪ್ರದೇಶವಾಗಿದ್ದು ಹಗಲು ಹೊತ್ತು ಪ್ರೇಮಿಗಳ ಅಡ್ಡೆಯಾಗಿದ್ದು ಹೇಳುವರು, ಕೇಳುವರು ಇಲ್ಲದಂತಾಗಿದೆ. ರಾತ್ರಿಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿದ್ದು, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲ್, ಮದ್ಯದ ಬಾಟಲಿ, ಗಾಜಿನ ಚೂರುಗಳಿಂದ ತುಂಬಿಕೊಂಡಿದೆ. ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ಸ್ಥಾಪನೆಗೆ ಸಭಾಂಗಣ ನಿರ್ಮಿಸಲಾಗಿದ್ದು, ಅಲ್ಲೇ ಕೆಲವು ಮಳಿಗೆಗಳನ್ನು ನಿರ್ಮಿಸಲಾಗಿದೆ. ಅವುಗಳಿಗೆ ನಿರ್ಮಿಸಲಾಗಿರುವ ಕಬ್ಬಿಣದ ಬಾಗಿಲುಗಳನ್ನು ಕಳ್ಳರು ಕದಿಯಲು ಮುಂದಾಗಿ ಅಲ್ಲೇ ಬಿಟ್ಟು ಹೋದ ಕುರುಹುಗಳಿವೆ.
ನಡುಗಡ್ಡೆಗೆ ಸಾಗುವ ದಾರಿ ಹೊಂಡ-ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ ಅಸಾಧ್ಯವಾಗಿದೆ. ಇದರ ನಡುವೆ ಪ್ರವಾಸಿಗರನ್ನು ಸೆಳೆಯಲು ನಗರಸಭೆ ಮಾಜಿ ಅಧ್ಯಕ್ಷರೊಬ್ಬರು ವಿವೇಕಾನಂದರ ಮೂರ್ತಿಯನ್ನು ನಿರ್ಮಿಸಿ, ಸ್ವಾಮಿ ವಿವೇಕಾನಂದರ ಮೂರ್ತಿ ವಿರೂಪಗೊಂಡಿದ್ದರಿಂದ ಆ ಕಾರ್ಯವು ವಿಫಲಗೊಂಡು ಭಾರೀ ಪ್ರತಿರೋಧ ವ್ಯಕ್ತವಾಗಿದ್ದರಿಂದ ವಿವೇಕಾನಂದರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವು ಗೊಳಿಸಲಾಗಿದೆ. ತೆರವುಗೊಳಿಸಿದ ಅವಶೇಷ ಗಳು ಅಲ್ಲೇ ಎಲ್ಲೆಂದರಲ್ಲಿ ಬಿದ್ದಿದ್ದು ಫ್ಲಾÂಟ್ ಫಾರಂ ಸಂಪೂರ್ಣ ಕಿತ್ತು ಹೋಗಿದೆ. ವಾಯುವಿಹಾರಿಗಳು ಸಂಚರಿಸಲು ನಿರ್ಮಿಸಿರುವ ಫುಟ್‌ಪಾತ್ ನಿರ್ಮಾಣ ಮಾಡಿದ್ದು ಗಿಡಗಂಟಿಗಳು ಎಗ್ಗಿಲ್ಲದೆ ಬೆಳೆದು ನಿಂತಿವೆ.
ನಡುಗಡ್ಡೆಯಲ್ಲಿ ಸುಂದರ ವಿವೇಕಾನಂದರ ಮೂರ್ತಿಯ ನಿರ್ಮಾಣ ಮಾಡುವ ಬಗ್ಗೆ ಭರವಸೆ ನೀಡಲಾಗಿತ್ತು. ಪ್ರತಿಮೆ ನಿರ್ಮಾಣವಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಅದು ಕಾರ್ಯಗತವಾಗಿಲ್ಲ. ಸಂಬಂಧಿಸಿದ ಇಲಾಖೆ ಅ ಧಿಕಾರಿಗಳು ಕೆರೆ ನಿರ್ವಹಣೆ ಬಗ್ಗೆ ಗಮನ ಹರಿಸಲು ಮುಂದಾಗದಿರುವುದರಿಂದ ನಗರದ ಸೌಂದರ್ಯ ಹೆಚ್ಚಿಸಬೇಕಿದ್ದ ಕೆರೆ ಹಾಳು ಕೆರೆಯಾಗಿ ಮಾರ್ಪಟ್ಟಿದೆ. ಇಡೀ ನಗರದ ಸೌಂದರ್ಯಕ್ಕೆ ಮುಕುಟ ದಂತಿರುವ ಬಸವನಹಳ್ಳಿ ಕೆರೆಗೆ ಕಾಯಕಲ್ಪ ಕಲ್ಪಿಸಿ ಸುಂದರತಾಣವಾಗಿ ಅಭಿವೃದ್ಧಿಪಡಿಸಲು ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮುಂದಾಗುತ್ತಾರೋ ನೋಡಬೇಕಿದೆ.