Advertisement

ಶೇಂಗಾಪುರ್‌!

12:37 PM Nov 11, 2017 | |

ತಾಜಾ ತಾಜಾ ಕಡ್ಲೆಕಾಯ್‌
ಗರಂ ಗರಂ ಕಡ್ಲೆಕಾಯ್‌
ಬೆಂಗಳೂರು ನಗರದ ಬಸವನಗುಡಿಯ
ಬಡವರ ಬಾದಾಮಿ ಕಡ್ಲೆಕಾಯ್‌…

ಈ  ಹಳೇ ಚಿತ್ರಗೀತೆಯನ್ನು ಕೇಳುತ್ತಿದ್ದಂತೆಯೇ ಬಸವನಗುಡಿಯಲ್ಲಿ ನಡೆಯುವ ಸುಪ್ರಿಸಿದ್ಧ ಕಡ್ಲೆಕಾಯಿ ಚಿತ್ರ ಕಣ್ಮುಂದೆ ಬಂದು ನಿಲ್ಲುತ್ತದೆ. ಬೆಂಗಳೂರಿನ ಐತಿಹಾಸಿಕ ದೇಗುಲಗಳಲ್ಲಿ ಒಂದಾದ ಬಸವನಗುಡಿಯ ದೊಡ್ಡಗಣೇಶ ಹಾಗೂ ಶ್ರೀ ದೊಡ್ಡಬಸವ ದೇವಸ್ಥಾನವು ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸಂಪೂರ್ಣ ಸಜ್ಜಾಗಿದೆ.

Advertisement

ಹಸಿ, ಹುರಿದಿರುವ, ಬೇಯಿಸಿರುವ ಹೀಗೆ ಹಲವು ಬಗೆಯ ರುಚಿಗೆ ತಕ್ಕುದಾದ ಕಡಲೆಕಾಯಿ ಪರಿಷೆಯಲ್ಲಿ ಸಿಗುತ್ತೆ. ಬಸನವನಗುಡಿಯ ರಾಮಕೃಷ್ಣ ಆಶ್ರಮದ ರಸ್ತೆಯಿಂದ ಮೊದಲ್ಗೊಂಡು, ದೊಡ್ಡಗಣೇಶ ದೇವಸ್ಥಾನದ ಮುಂಭಾಗದಿಂದ, ದೊಡ್ಡ ಬಸವನವಗುಡಿ ರಸ್ತೆ ತನಕ ಎರಡೂ ಬೀದಿಗಳಲ್ಲೂ ಕಡಲೆಕಾಯಿ ರಾಶಿ ಹಾಕಿಕೊಂಡು ಮಾರುವ ದೃಶ್ಯ ಸಾಮಾನ್ಯ.

ಪರಿಷೆ ನಡೆದುಬಂದ ಹಾದಿ: ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರ ಕಡಲೆಕಾಯಿ ಪರಿಷೆ ಅರಂಭವಾಗುತ್ತದೆ. ಇದು ಅಧಿಕೃತವಾಗಿ ಮೂರು ದಿನ ನಡೆಯುವ ಉತ್ಸವವಾದರೂ, ಶನಿವಾರದ ತನಕವೂ ಕಡಲೆಕಾಯಿ ವ್ಯಾಪಾರ ಇರುತ್ತದೆ. ಸುಮಾರು 550-600 ವರ್ಷಗಳ ಹಿಂದೆ ದೊಡ್ಡ ಬಸವಣ್ಣನ ದೇವಾಲಯದ ಸುತ್ತಲೂ ಹಳ್ಳಿಗಳಿದ್ದವು.

ಸುಂಕೇನಹಳ್ಳಿ, ಗವೀಪುರ, ಹೊಸಕೆರೆಹಳ್ಳಿ, ನಾಗಸಂದ್ರ, ಮಾವಳ್ಳಿ, ಉತ್ತರಹಳ್ಳಿ ಮೊದಲಾದ ಹಳ್ಳಿಗಳಲ್ಲಿದ್ದ ರೈತರು ಆಗ ಕಡಲೆಕಾಯಿಯನ್ನೇ ಪ್ರಧಾನ ಬೆಳೆಯಾಗಿ ಬೆಳೆಯುತ್ತಿದ್ದರು. ಕಡಲೆಕಾಯಿ ಇಳುವರಿ ಬರುವ ಸಂದರ್ಭದಲ್ಲಿ ಪ್ರತಿದಿನ ರಾತ್ರಿ ಬಸವ (ಹೋರಿ) ಕಡಲೆಕಾಯಿ ಗದ್ದೆಗೆ ಲಗ್ಗೆ ಇಟ್ಟು, ಬೆಳೆಯನ್ನು ತಿಂದು ಹಾಕುತ್ತಿತ್ತು. ಒಂದು ದಿನ ರೈತನೊಬ್ಬ ಗಮನಿಸಿ, ದೊಡ್ಡ ಬಸವನನ್ನು ಓಡಿಸುವ ಪ್ರಯತ್ನ ಮಾಡಿ ವಿಫ‌ಲನಾಗಿದ್ದನು.

ಒಂದು ರಾತ್ರಿ ರೈತರೆಲ್ಲ ಕಾವಲು ನಿಂತು, ಕಡಲೆಕಾಯಿ ಗದ್ದೆಗೆ ಬಂದಿದ್ದ ಬಸವಣ್ಣನನ್ನು ಓಡಿಸಿಕೊಂಡು ಬಂದರು. ಓಡಿಬಂದ ಬಸವಣ್ಣ ಬಸವನಗುಡಿ ಬಳಿಯ ಗುಹೆಯಲ್ಲಿ ಸೇರಿಕೊಂಡ. ನಂತರ ರೈತರೆಲ್ಲ ಒಂದಾಗಿ ವರ್ಷಕೊಮ್ಮೆ ತಾವಾಗಿಯೇ ಕಡಲೆಕಾಯಿ ಆಹಾರ ನೀಡುವುದಾಗಿ ಒಪ್ಪಂದ ಮಾಡಿಕೊಂಡರೆಂಬ ನಂಬಿಕೆ ಇದೆ.

Advertisement

ದೇಗುಲದ ಜೀರ್ಣೋದ್ಧಾರ: ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರು ಮಾಗಡಿಯಿಂದ ಬೇಟೆಗಾಗಿ ಬಸವನಗುಡಿ ಕಡೆ ಬಂದಾಗ ನಂದಿಯ ವಿಗ್ರಹ ನೋಡಿ ಬೆರಗಾಗಿದ್ದರಂತೆ. ನಂದಿಗೆ ರೈತರು ಪೂಜಿಸುತ್ತಿರುವುದನ್ನು ಕಂಡು, ಜಾಗದ ಮಹಿಮೆ ಮತ್ತು ಇತಿಹಾಸವನ್ನು ರೈತರಿಂದ ತಿಳಿದುಕೊಂಡರಂತೆ. ನಂತರ, 1537ರಲ್ಲಿ ಕೆಂಪೇಗೌಡರು ದೇಗುಲ ಕಟ್ಟಿಸಿ, ಜೀರ್ಣೋದ್ದಾರೆ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ.

ಏಕಶಿಲಾ ನಂದಿ: ಶಿವನ ದೇಗುಲದೊಳಗೆ ನಂದಿಯ ಪ್ರತಿಷ್ಠಾಪನೆ ಮಾಡುತ್ತಾರೆ. ನಂದಿಗಾಗಿ ಪ್ರತ್ಯೇಕ ದೇವಸ್ಥಾನ ಇರುವುದಿಲ್ಲ. ಬೆಂಗಳೂರಿನ ದೊಡ್ಡಬಸವ ದೇವಸ್ಥಾನದಲ್ಲಿ ನಂದಿಗೇ ಪ್ರಧಾನ ಪೂಜೆ. ಇದು ದಕ್ಷಿಣ ಭಾರತದ ಎರಡನೇ ಅತಿ ದೊಡ್ಡ ನಂದಿ ವಿಗ್ರಹವಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿ ದೇವಸ್ಥಾನದಲ್ಲಿರುವ 15 ಅಡಿ ಎತ್ತರ ಹಾಗೂ 27 ಅಡಿ ಉದ್ದ ನಂದಿ ದಕ್ಷಿಣ ಭಾರತದಲ್ಲೇ ದೊಡ್ಡ ನಂದಿ ಎನಿಸಿಕೊಂಡಿದೆ. ಮೈಸೂರಿನ ಚಾಮುಂಡೇಶ್ವರಿ ಬೆಟ್ಟದ ನಂದಿ, ತಂಜಾವೂರು, ಬೇಲೂರು ಹಳೇಬಿಡಿನ ನಂದಿಗಳು ನಂತರದ ಸ್ಥಾನದಲ್ಲಿವೆ.

ಯಾವತ್ತು ಶುರು?: ನ. 13ರ ಸೋವಾರದಿಂದ ಶುರುವಾಗಿ 3-5 ದಿನದ ವರೆಗೂ ಕಡ್ಲೆಕಾಯಿ ವ್ಯಾಪಾರ ಇರುತ್ತೆ.

4 ಲಕ್ಷ ಜನ ಸೇರುವ ನಿರೀಕ್ಷೆ!: ಈ ಬಾರಿಯ ಕಡಲೆಕಾಯಿ ಪರಿಷೆಗೆ 4 ಲಕ್ಷ ಜನರು ಸೇರುವ ಸಾಧ್ಯತೆ ಇದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ನಂದಿಗೆ ವಿಶೇಷ ಪೂಜೆ ಆರಂಭವಾಗುತ್ತದೆ. ಮೊದಲಿಗೆ  5 ಮೂಟೆ ಕಡಲೆಕಾಯಿ ಅಭಿಷೇಕ, ಬಳಿಕ ಕ್ಷೀರಾಭಿಷೇಕ, ಹೂವಿನ ಅಲಂಕಾರ, ಮಂಗಳಾರತಿಯ ನಂತರ ಪ್ರಸಾದ ವಿತರಣೆ ಇರುತ್ತೆ. ದೇವರಿಗೆ ನೈವೇದ್ಯ ಮಾಡಿದ ಕಡಲೆಕಾಯಿಯನ್ನು ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ.

ಎಲ್ಲೆಲ್ಲಿಂದ ಬರ್ತಾರೆ?: ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ಹೊಸೂರು, ಮಂಡ್ಯ, ಮೈಸೂರು, ತುಮಕೂರು, ಕುಣಿಗಲ್‌, ಪಾವಗಡ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಯ ರೈತರ ಜತೆಗೆ ಆಂಧ್ರಪ್ರದೇಶ, ತಮಿಳುನಾಡಿನ ರೈತರು ಹಾಗೂ ವ್ಯಾಪಾರಿಗಳು ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ.

ನಂದಿಗೆ ವಿಶೇಷ ಪೂಜೆ ನಡೆಯುವುದು ಸೋಮವಾರವಾದರೂ ನ.11ರಿಂದಲೇ (ಶನಿವಾರ) ಕಡಲೆಕಾಯಿ ಪರಿಷೆ ಆರಂಭವಾಗುತ್ತದೆ. ದೊಡ್ಡ ಬಸವನಗುಡಿ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ರಾಶಿ ರಾಶಿ  ಕಡಲೆಕಾಯಿ ಗ್ರಾಹಕರನ್ನು ಸೆಳೆಯುತ್ತವೆ. ಮೂರು ಬೀಜದ ಉದ್ದನೆಯ ಕಾಯಿ, ಎರಡು ಬೀಜದ ಗಿಡ್ಡ ಕಾಯಿಗಳು, ಕಡುಗುಲಾಬಿ ಬಣ್ಣದ ಬೀಜ ಹಾಗೂ ತಿಳಿ ಗುಲಾಬಿ ಬಣ್ಣದ ಬೀಜಗಳು, ಜುಳ್ಳು, ಬೊಳ್ಳು- ಹೀಗೆ ಎಲ್ಲಾ ಮಾದರಿಯ ಕಡಲೆಕಾಯಿ ಮಾರಾಟ ನಡೆಯುತ್ತೆ.

ಕಡ್ಲೆಕಾಯಿ ತುಲಾಭಾರ!: ಬಸವನಗುಡಿಯಲ್ಲಿ ಪ್ರತಿವರ್ಷ ನಡೆಯುವ ಕಡಲೇಕಾಯಿ ಪರಿಷೆಯಲ್ಲಿ ಕಳೆದ ಎಂಟು ವರ್ಷಗಳಿಂದ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ ನೇತೃತ್ವದಲ್ಲಿ ದೊಡ್ಡ ಗಣಪತಿ ದೇವಾಲಯದಲ್ಲಿರುವ ಬಸವಣ್ಣನ ಕಂಚಿನ ವಿಗ್ರಹಕ್ಕೆ ಕಡಲೇಕಾಯಿ ತುಲಾಭಾರ ಮಾಡುವುದು ಮತ್ತೂಂದು ಆಕರ್ಷಣೆ. ಮೂರರಿಂದ ಐದು ಮೂಟೆಯಷ್ಟು ಕಡಲೇಕಾಯಿಯನ್ನು ತುಲಾಭಾರದ ನಂತರ ಭಕ್ತರಿಗೆ ಪ್ರಸಾದದ ರೂಪದಲ್ಲಿ ಹಂಚಲಾಗುತ್ತೆ.

ಜತೆಗೆ ಕಡಲೇಕಾಯಿ ಪರಿಷೆಗೆ ಸಾಂಪ್ರದಾಯಿಕ ಹಾಗೂ ಜಾನಪದ ಸೊಗಡಿನ “ಟಚ್‌’ ನೀಡಲು ಪ್ರತಿವರ್ಷ ಬ್ಯೂಗಲ್‌ರಾಕ್‌, ನರಸಿಂಹಸ್ವಾಮಿ ಉದ್ಯಾನವನ, ಮದ್ದೂರಮ್ಮ ಗ್ರೌಂಡ್ಸ್‌, ಶಂಕರ್‌ನಾಗ್‌ ವೃತ್ತದ ಕೆಂಪೇಗೌಡ ಆಟದ ಮೈದಾನದಲ್ಲಿ ದೇವರನಾಮ, ಸುಗಮ ಸಂಗೀತ, ಹರಿಕಥೆ, ಜಾನಪದ ಕಲೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಭಕ್ತರ ಭದ್ರತೆಗಾಗಿ ಸಿಸಿ ಟಿವಿ ಆಳವಡಿಕೆ, ಕುಡಿಯುವ ನೀರು ವ್ಯವಸ್ಥೆ. ಜತೆಗೆ ಪೊಲೀಸ್‌ ಹಾಗೂ ಬಿಬಿಎಂಪಿ ಸಿಬ್ಬಂದಿಗೆ ಧರ್ಮಸ್ಥಳ ಕಲ್ಯಾಣಮಂಟದಲ್ಲಿ ಊಟ ಮತ್ತು ವಸತಿ ವ್ಯವಸ್ಥೆಯೂ ಇರುತ್ತೆ.

ನಂಬಿಕೆಯ ಆಧಾರದಲ್ಲಿ ಆರಂಭವಾದ ಕಡಲೆಕಾಯಿ ಪರಿಷೆ ಈಗ ಉತ್ಸವದ ಮಾದರಿಯಲ್ಲಿ ಸಂಪನ್ನಗೊಳ್ಳುತ್ತಿದೆ. ಕಡಲೆಕಾಯಿ ಪರಿಷೆಯಲ್ಲಿ ನಂದಿಗೆ ವಿಶೇಷ ಪೂಜೆ ನಡೆಯುತ್ತದೆ.
-ಎಸ್‌. ಸುನೀಲ್‌ ಕುಮಾರ್‌, ದೇಗುಲದ ಪ್ರಧಾನ ಅರ್ಚಕರು

ಮಳೆ ಚೆನ್ನಾಗಿ ಆಗಿರುವುದರಿಂದ ಕಡಲೆಕಾಯಿ ಇಳುವರಿಯೂ ಚೆನ್ನಾಗಿದೆ. ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರ ಆಗುತ್ತದೆ ಎಂದು ನಂಬಿದ್ದೇವೆ. ಅನೇಕ ವರ್ಷದಿಂದ ಪರಿಷೆಗೆ ಬರುತ್ತಿದ್ದೇವೆ. ಜನರಿಗೆ ಗುಣಮಟ್ಟದ ಕಡಲೆಕಾಯಿ ಒದಗಿಸುತ್ತೇವೆ. 
-ಮಲ್ಲಮ್ಮ, ಕಡಲೆಕಾಯಿ ವ್ಯಾಪಾರಿ

* ರಾಜಾ ಖಾರ್ವಿ ಕೋಡೇರಿ

Advertisement

Udayavani is now on Telegram. Click here to join our channel and stay updated with the latest news.

Next