Advertisement

ಜನರ ಆರೋಗ್ಯ ನಿರ್ಲಕ್ಷಿಸಿದರೆ ಕ್ರಮ

03:50 PM Apr 12, 2020 | Naveen |

ಬಸವನಬಾಗೇವಾಡಿ: ತಾಲೂಕಿನಿಂದ ಬೇರೆ ರಾಜ್ಯಕ್ಕೆ ಗುಳೆ ಹೋದ ಜನರ ಮಾಹಿತಿ ನೀಡಬೇಕು. ತಾಲೂಕಿನ ಜನರಿಗೆ ಕುಡಿಯುವ ನೀರು ಮತ್ತು ಆಹಾರ ವಿತರಣೆ ಹಾಗೂ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗವಹಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದರೆ ಅಧಿ ಕಾರಿ ವಿರುದ್ಧ ಕ್ರಮ ಜರುಗಿಸಬೇಕಾಗುವುದು ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಎಚ್ಚರಿಕೆ ನೀಡಿದರು.

Advertisement

ಪಟ್ಟಣದಲ್ಲಿ ಶನಿವಾರ ಕೊರೊನಾ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮ ಕುರಿತ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದುಡಿಯಲು ಅನ್ಯರಾಜ್ಯಕ್ಕೆ ತೆರಳಿದ ಕುಟುಂಬಗಳ ಮಾಹಿತಿ ಸಂಗ್ರಹಿಸಿಬೇಕು. ಮರಳಿ ಬಂದವರನ್ನು ಗುರುತಿಸಿ ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರಿಗೆ ಪಡಿತರ ಸೇರಿದಂತೆ ದಿನಬಳಕೆ ವಸ್ತುಗಳ ವ್ಯವಸ್ಥೆಯಾಗುವಂತೆ ನೋಡಿಕೊಳ್ಳಬೇಕು. ಲಾಕ್‌ ಡೌನ್‌ ಮುಗಿದ ನಂತರ ಅನ್ಯ ರಾಜ್ಯಕ್ಕೆ ದುಡಿಮೆಗೆ ಹೋದವರು ಮರಳಿ ಬರುವ ಸಾಧ್ಯತೆ ಇರುತ್ತದೆ. ಅವರಿಗೆ ಅಗತ್ಯ ಸೌಲಭ್ಯ ಒದಗಿಸುವ ಕುರಿತು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮತಕ್ಷೇತ್ರದಲ್ಲಿರುವ ಅಲೆಮಾರಿ ಜನಾಂಗದವರನ್ನು ಗುರುತಿಸಿ ಅವರಿಗೆ ಪಡಿತರ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪಂಚಾಯ್ತಿ ವ್ಯಾಪ್ತಿಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ ಅರಿತುಕೊಳ್ಳಬೇಕು. ಪಡಿತರ ಸಮರ್ಪಕವಾಗಿ ವಿತರಣೆಯಾಗುವಂತೆ ಗಮನ ಹರಿಸಬೇಕು. ಯಾರಿಗಾದರೂ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆ ಗಮನಕ್ಕೆ ತರಬೇಕು. ತಲಾಟಿಗಳನ್ನು ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ತಹಶೀಲ್ದಾರ್‌ ಎಂ.ಎನ್‌.ಬಳಿಗಾರ ಮಾತನಾಡಿ, ತಾಲೂಕಿನ 75 ಸಾವಿರ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ 50 ಸಾವಿರದಷ್ಟು ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗಿದೆ. ಮತಕ್ಷೇತ್ರದಿಂದ ಬೇರೆ ರಾಜ್ಯಕ್ಕೆ ದುಡಿಯಲು ಹೋದ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ತಾಲೂಕು ವೈದ್ಯಾಧಿ ಕಾರಿ ಎಸ್‌.ಎಸ್‌. ಓತಗೇರಿ ಮಾತನಾಡಿ, ಟಾಸ್ಕ್ ಫೋರ್ಸ್‌ ರಚಿಸಿಕೊಂಡು ಜನರ ಮೇಲೆ ನಿಗಾ ಇಡುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಆಶಾ ಕಾರ್ಯಕರ್ತರೊಂದಿಗೆ 75 ಸಾವಿರ ಮನೆಗಳ ಸರ್ವೇ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮೇಲಿಂದ ಮೇಲೆ ಕೈ ತೊಳೆದುಕೊಳ್ಳುವುದು ಸೇರಿದಂತೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಜಾಗೃತಿ ಮೂಡಿಸಲಾಗಿದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next