ಬಸವನಬಾಗೇವಾಡಿ: ರೈತರು ದೇಶದ ಬೆನ್ನೆಲುಬು ಎಂದು ಜನಪ್ರತಿನಿಧಿಗಳು ಆಡುವ ಮಾತು ಬರಿ ಭಾಷಣಕ್ಕೆ ಸಿಮೀತವಾಗಿದ್ದು ಆತ್ಮಸಾಕ್ಷಿಯಾಗಿ ರೈತರ ಮೇಲೆ ಕಾಳಜಿ ಇದ್ದರೆ ತಕ್ಷಣ ಬಸವನಬಾಗೇವಾಡಿ ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸಿ ರೈತರಿಗೆ ಪರಿಹಾರ ಹಣ ನೀಡಬೇಕೆಂದು ಮುತ್ತಗಿಯ ವೀರ ರುದ್ರಮುನಿ ಶಿವಾಚಾರ್ಯ ಶ್ರೀಗಳು ಸರಕಾರಕ್ಕೆ ಒತ್ತಾಯಿಸಿದರು.
ಶುಕ್ರವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂದೆ ಅಖಂಡ ಕರ್ನಾಟಕ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕೃಷಿಕ ಸಮಾಜ, ಮಠಾಧೀಶರ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಡೆದ 10ನೇ ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಮಾತನಾಡಿ, ಹಸಿರು ಶಾಲು ಹೊತ್ತುಕೊಂಡು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರ ಹಿತವನ್ನು ಕಡೆಗಣಿಸಿ ರಾಜಕಾರಣ ಮಾಡುತ್ತಿರುವುದು ಖಂಡನೀಯ ಹಾಗೂ ನೋವಿನ ಸಂಗತಿಯಾಗಿದೆ. ಸ್ಥಳೀಯ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿ ರೈತರಿಗೆ ನ್ಯಾಯ ಒದಗಿಸಬೇಕು. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದರು. ಕರವೇ ಯುವ ಘಟಕದ ಜಿಲ್ಲಾಧ್ಯಕ್ಷ ಅಶೋಕ ಹಾರಿವಾಳ ಮಾತನಾಡಿ, ಜಿಲ್ಲೆಯ ಮೂವರು ಪ್ರಭಾವಿ ಸಚಿವರು ಸರಕಾರಕ್ಕೆ ಮನವರಿಕೆ ಮಾಡಿ ಶೀಘ್ರವೇ ತಾಲೂಕನ್ನು ಬರಗಾಲ ಪಟ್ಟಿಗೆ ಸೇರಿಸಿ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುತ್ತದೆ ಎಂದು ಎಚ್ಚರಿಸಿದರು.
ರಾಜ್ಯ ಸರ್ಕಾರದ ದ್ವಿಮುಖ ನೀತಿಯಿಂದ ಸಮಗ್ರ ರೈತ ಸಮುದಾಯಕ್ಕೆ ಅನ್ಯಾಯವಾಗಿದೆ. ರೈತರ ಪರ ಹಮ್ಮಿಕೊಂಡಿರುವ ಹೋರಾಟಕ್ಕೆ ರೈತರು ಸೇರಿದಂತೆ ಎಲ್ಲ ಜನರೂ ಬೆಂಬಲಿಸಬೇಕೆಂದು ಕೋರಿದರು.
ರೈತ ಮುಖಂಡ ಅರವಿಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಬಿ.ಎಲ್. ಪಾಟೀಲ, ಕಾರ್ಯದರ್ಶಿ ವೆಂಕಣ್ಣಗೌಡ ಪಾಟೀಲ, ಈರಣ್ಣ ಸಜ್ಜನ ಧರಣಿಯನ್ನುದ್ದೇಶಿಸಿ ಮಾತನಾಡಿದರು. ಸತ್ಯಾಗ್ರಹದಲ್ಲಿ ಬಾಬು ನಿಕ್ಕಂ, ಸಂತೋಷ ಕೂಡಗಿ, ಬಿ.ಎಸ್. ಹೊರ್ತಿ, ಶಿವಪ್ಪ ಮಂಗೊಂಡ, ಯಲ್ಲಪ್ಪ ಭಜಂತ್ರಿ, ಶಿವಣ್ಣ ಬಾಗೇವಾಡಿ, ನಿಂಗಣ್ಣ ಶಿವಯೋಗಿ, ಮಾಮಲ್ಲಪ್ಪ ಜೋಗಿ, ರೇವಣೆಪ್ಪ ಸಜ್ಜನ, ರಾವುತಪ್ಪ ಹಂಡಿ, ಈರಣ್ಣ ದೇವರಗುಡಿ, ಗುರಪ್ಪ ಉಣ್ಣಿಭಾವಿ, ಸಿದ್ರಾಮ ಅಂಗಡಗೇರಿ, ಮಾಚಪ್ಪ ಹೊರ್ತಿ, ಶಾಂತಗೌಡ ಬಿರಾದಾರ, ಹನುಮಂತ ತೋಟದ, ರಾಜು ಇಂಡಿ, ಅವಪ್ಪ ತಳ್ಳೋಳ್ಳಿ, ಭೀಮಪ್ಪ ಕುಂಬಾರ ಸೇರಿದಂತೆ ಅನೇಕರು ಇದ್ದರು.