Advertisement

ಬಸವಣ್ಣನಂಥ ಜೀವಪರ ಕಾಳಜಿ ವ್ಯಕ್ತಿ ಮತ್ತೂಬ್ಬರಿಲ್ಲ

10:31 AM Aug 31, 2019 | Naveen |

ಬಸವಕಲ್ಯಾಣ: ಬುದ್ಧನನ್ನು ಏಷ್ಯಾದ ಬೆಳಕೆಂದು ಕರೆದರೆ, ಬಸವಣ್ಣನವರನ್ನು ವಿಶ್ವದ ಬೆಳಕು ಎಂದು ಕರೆಯಬಹುದು. ಬಸವಣ್ಣನಂಥ ಜೀವಪರ ಜನಪರ ಕಾಳಜಿ ಹೊಂದಿದ್ದ ವ್ಯಕ್ತಿಯನ್ನು ವಿಶ್ವದಲ್ಲಿ ಮತ್ತೂಬ್ಬನನ್ನು ಕಾಣಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ಬಿಕೆಡಿಬಿ ಸಭಾಭವನದಲ್ಲಿ ಶುಕ್ರವಾರ ಮತ್ತೆ ಕಲ್ಯಾಣ ಸಮಾರೋಪ ಸಮಾರಂಭದ ನಿಮಿತ್ತನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಬಸವಣ್ಣ ಆ ಕಾಲಕ್ಕೆ ಶ್ರೇಷ್ಠವೆಂದು ಭಾವಿಸಿದ್ದ ಉನ್ನತ ಜಾತಿಯಿಂದ ಬಂದವರಾದರೂ ಅತ್ಯಂತ ಕೆಳವರ್ಗದವರ ಜೊತೆ ಬೆರೆತು ಅವರ ನೋವುಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಂಡವರು ಎಂದರು.

12ನೇ ಶತಮಾನದ ಶರಣರ ತತ್ವ ಸಿದ್ಧಾಂತಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಜಾತಿಯೆಂಬ ಭೂತವನ್ನು ಓಡಿಸಬೇಕಿದೆ. ಇವತ್ತಿನ ಶಿಕ್ಷಣ ಮಕ್ಕಳನ್ನು ನಾಗರೀಕರನ್ನಾಗಿ ರೂಪಿಸುವಲ್ಲಿ ಸೋತಿದೆ. ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು. ಸಾಧನೆಗೆ ದೇಹವೇ ಮಾಧ್ಯಮ. ಶರಣರು ದೇಹವನ್ನು ಕಾಯವೆಂದು ಕರೆದರು. ದೇಹದಲ್ಲಿ ದುರ್ಗುಣಗಳನ್ನು ತುಂಬಿಕೊಂಡು ಅದರ ಪಾವಿತ್ರ್ಯವನ್ನು ಕಳೆದುಕೊಂಡಿದ್ದೇವೆ ಎಂದರು.

ಶರಣರು ಸಾತ್ವಿಕ ಆಹಾರವನ್ನು ಸೇವಿಸಿ ಸಾತ್ವಿಕ ವ್ಯಕ್ತಿಗಳಾದರು. ನಮ್ಮ ಬುದ್ಧಿ ವಂಚನೆಯ ಬುದ್ಧಿಯಾಗದೇ ವಿವೇಕದ ಬುದ್ಧಿಯಾಗಬೇಕು. ಓದುವುದು ಇನ್ನೊಬ್ಬರ ಬಗ್ಗೆ ಚಾಡಿ ಹೇಳುವುದಕ್ಕಲ್ಲ. ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲಿಕ್ಕೆ. ನೈತಿಕ ನೆಲೆಗಟ್ಟಿಲ್ಲದ ಬದುಕು ವ್ಯರ್ಥ. ಶರಣರು ‘ದೇವರನ್ನು ಒಲಿಸಲು ಬಂದ ಪ್ರಸಾದ ಕಾಯವಿದು’ ಎಂದರು.

ದೇವರುಗಳ ಹಂಗನ್ನು ನಿರಾಕರಿಸಿ ದೇಹವನ್ನು ಜಂಗಮ ದೇವಾಲಯ ಮಾಡಿಕೊಂಡಾಗ ನೈತಿಕ ನೆಲೆಗಟ್ಟು ಕುಸಿಯಲು ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನಗಳು ಅಗತ್ಯವಾಗಿ ಬೇಕು. ಆದರೆ ಅವುಗಳನ್ನು ಹೇಗೆ ಬಳಸುತ್ತೇವೆ ಎನ್ನುವ ವಿವೇಕ ಇಲ್ಲದೇ ಇದ್ದರೆ ಬದುಕು ನರಕವಾಗುವುದರಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು ಪಠ್ಯದ ಜೊತೆ ವಚನಗಳ ಅಧ್ಯಯನವನ್ನೂ ನಿರಂತರವಾಗಿ ಮಾಡಬೇಕು ಅರಿವಿನ ಕಣ್ಣನ್ನು ತೆರೆಯುವ ಕಾರಣಕ್ಕೆ ರುದ್ರಾಕ್ಷಿಯನ್ನು ಕಟ್ಟುತ್ತಾರೆ. ಅದರಲ್ಲಿ ಔಷಧೀಯ ಗುಣಗಳು ಇವೆ. ಕಾವಿ ತ್ಯಾಗದ ಸಂಕೇತ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಇಷ್ಟಲಿಂಗ ವೈಜ್ಞಾನಿಕವಾದುದು. ದೇಹ ಮತ್ತು ಮನಸ್ಸು ಒಂದಾಗಬೇಕಾದರೆ ಇಷ್ಟಲಿಂಗ ಸಹಕಾರಿಯಾಗಿದೆ. ಜಗದಗಲ ಮುಗಿಲಗದ ಸ್ವರೂಪವೇ ಓಂ ನಮಃ ಶಿವಾಯ. ಜಂಗಮ ಎಂದರೆ ವ್ಯಕ್ತಿಯಲ್ಲ ಅದೊಂದು ತತ್ವ, ಸಿದ್ಧಾಂತ, ನಿರಂತರ ಪ್ರಕ್ರಿಯೆ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಶ್ರೀಗಳು ಉತ್ತರಿಸಿದರು.

ಸಂವಾದಕ ನಾಡೋಜ, ಡಾ|ಬರಗೂರು ರಾಮಚಂದ್ರಪ್ಪ ಮಾತನಾಡಿ, 12ನೇ ಶತಮಾನದ ಶರಣರ ವಿಚಾರಗಳನ್ನು ಒರೆಗೆಹಚ್ಚಿ 21ನೇ ಶತಮಾನದಲ್ಲಿ ನೋಡುವುದು ಮತ್ತೆ ಕಲ್ಯಾಣದ ಆಶಯ. ಕಲ್ಯಾಣ ಎನ್ನುವ ಶಬ್ಧ ರೋಮಾಂಚನಕಾರಿಯಾದುದು. ಜಾತಿ ಇರುವುದರಿಂದಲೇ ಜಾತ್ಯತೀತ ರಾಷ್ಟ್ರ ನಿರ್ಮಾಣ ಮಾಡಬೇಕಿದೆ. ಆ ಆಶಯ ಮತ್ತೆ ಕಲ್ಯಾಣದ ಮೂಲಕ ನಡಿಯುತ್ತಿದೆ. ಓಟಿಗಾಗಿ ಜಾತಿಯನ್ನು ಪ್ರೇರೇಪಿಸಿದರೆ ಖಂಡಿಸಬೇಕು ಎಂದರು.

ಜಾತಿಯನ್ನು ಗುರುತಿಸಿ ಜಾತಿಯನ್ನು ಅಳಿಸಬೇಕು. ಅದು ನಿಜವಾದ ಜಾತ್ಯತೀತ. ಮನುಷ್ಯನಿಗೆ ಸ್ಥಾನ ಮುಖ್ಯವಲ್ಲ ಮಾನ ಮುಖ್ಯ. ಬಸವಣ್ಣನವರ ಅಂತ್ಯದ ಬಗ್ಗೆ ಯೋಚಿಸದೇ ಅವರ ಚಿಂತನೆಯ ಬಗ್ಗೆ ಯೋಚನೆ ಮಾಡಬೇಕು. ಕನ್ನಡ ಶಾಲೆಗಳಲ್ಲಿ ಕನ್ನಡ ಕಡ್ಡಾಯವಾಗಬೇಕು. ನ್ಯಾಯಾಧಿಧೀಶರು ಬದಲಾದರೆ ನ್ಯಾಯವೂ ಬದಲಾಗುತ್ತಿರುವುದು ಆಶ್ಚರ್ಯ ಮತ್ತು ದುರದೃಷ್ಟಕರ ಸಂಗತಿ. ಬಸವಣ್ಣನವರ ಹುಟ್ಟಿನ ಬಗ್ಗೆ ಯಾವುದೇ ಅನುಮಾನ ಇಲ್ಲ. ಅವರ ಹುಟ್ಟು ಚಾರಿತ್ರಿಕವಾದುದು. ಜಾತಿಯ ವಾಸ್ತವವನ್ನು ಗುರುತಿಸುವುದು ಬೇರೆ ಜಾತೀಯನ್ನು ಗುರುತಿಸುವುದು ಬೇರೆ. ಜಾತಿ ಇದೆಯೆಂದು ಒಪ್ಪಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಹಮತ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ ಧನ್ನೂರ, ಕೂಡಲ ಸಂಗಮದ ಜಯ ಮೃತ್ಯುಂಜನ ಸ್ವಾಮೀಜಿ, ಅಕ್ಕ ಡಾ|ಗಂಗಾಂಬಿಕೆ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ|ಎಂ.ಉಷಾ ಸೇರಿದಂತೆ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next