Advertisement

ಕಾಮಗಾರಿ ಶೀಘ್ರಪೂರ್ಣಗೊಳಿಸಿ

05:45 PM Dec 12, 2019 | Naveen |

ಬಸವಕಲ್ಯಾಣ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳು ಶೀಘ್ರ ಮುಗಿಸಬೇಕು ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ. ನಾರಾಯಣರಾವ್‌ ಹೇಳಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಆರ್‌ಈ ಇಲಾಖೆಯಿಂದ ನಡೆಯುತ್ತಿರುವ ಕಟ್ಟಡ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರವಾಗಿ ಮುಗಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿ ಕಾರಿ ಸಿ.ಜೆ. ಹಳ್ಳದ ಮಾತನಾಡಿ, ಫಲಿತಾಂಶ ಹೆಚ್ಚಳಕ್ಕಾಗಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಲಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಸಂವಾದ ಕಾರ್ಯಕ್ರಮ ಹಾಗೂ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಸೇರಿದಂತೆ ವಿವಿಧ ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಬಹಳಷ್ಟು ದೂರುಗಳಿವೆ. ಹೀಗಾಗಿ ಗುತ್ತಿಗೆದಾರರು ಮತ್ತು ಪಿಡಿಒಗಳಿಗೆ ಬೆನ್ನುಹತ್ತಿ ಕೆಲಸ ಮಾಡಿಸಿಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ ಎಂದರು.

ಕೋಹಿನೂರ ಮೊರಾರ್ಜಿ ಶಾಲೆಗಾಗಿ ಸ್ಥಳ-ಅನುದಾನ ಮಂಜೂರಾಗಿದೆ. ಆದರೂ ಇಂದಿಗೂ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ ಎಂದಾಗ ಮೊರಾರ್ಜಿ ಶಾಲೆಗಳು ಜಿಲ್ಲಾ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಹುಲಸೂರು ಸರ್ಕಾರಿ ಕಾಲೇಜಿನ ಮಕ್ಕಳಿಗಾಗಿ ಹಾಸ್ಟೆಲ್‌ಗಾಗಿ ಯೋಜನೆ ರೂಪಿಸಿ ನನಗೆ ಕೊಡಿ, ಅದನ್ನು ಮಾಡಿಸುವುದಾಗಿ ಭರವಸೆ ನಿಡಿದರು.

Advertisement

ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ ಇಲ್ಲದ ಕಾರಣ ಬಡ ರೋಗಿಗಳು ಸೋಲ್ಲಾಪುರ, ಉಮರ್ಗಾ ಮತ್ತು ಲಾತೂರ ಹೋಗುವಂತಾಗಿದೆ. ಆದ್ದರಿಂದ ಸಿಟಿ ಸ್ಕ್ಯಾನ್‌ ಸಂಬಂಧಪಟ್ಟಂತೆ
ನನಗೆ ವರದಿ ನೀಡಿದರೆ ಸರ್ಕಾರದ ಗಮನಕ್ಕೆ ತಂದು ಪ್ರತಿಯೊಬ್ಬರಿಗೂ ಅನುಕೂಲವಾಗುವಂತೆ ಮಾಡಲಾಗುವುದು ಎಂದು ತಾಲೂಕು ಆರೋಗ್ಯ ಅಧಿಕಾರಿಗೆ ತಿಳಿಸಿದರು.

ತಾಪಂ ಅಧ್ಯಕ್ಷೆ ಯಶೋಧಾ ರಾಠೊಡ ಮಾತನಾಡಿ, ಬಿಸಿಯೂಟ ಆಹಾರ ಪದಾರ್ಥಗಳಲ್ಲಿ ತರಕಾರಿ ಮತ್ತು ಬೇಳೆ ಇಲ್ಲದ ಊಟ ನೀಡಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಹೀಗಾಗಿ ಸಂಬಂಧಪಟ್ಟವರು ಮಕ್ಕಳಲ್ಲಿ ಪೌಷ್ಟಿಕ ಆಹಾರ ಸೀಗುವಂತೆ ಮಾಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಂತರ ಶಿಶು ಅಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪಶು ಸಂಗೋಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ಮಾಡಲಾಯಿತು.

ತಹಶೀಲ್ದಾರ್‌ ಸಾವಿತ್ರಿ ಸಲಗರ, ತಾಪಂ ಇಒ ಮಡೋಳಪ್ಪಾ ಪಿ.ಎಸ್‌, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಉಪಾಧ್ಯಕ್ಷ ಸಂಗಮೇಶ ಬಿರಾದಾರ್‌, ವ್ಯವಸ್ಥಾಪಕ ಜಯಪ್ರಕಾಶ ಚವ್ಹಾಣ ಸೇರಿದಂತೆ ಸದಸ್ಯರು, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next