ಬಸವಕಲ್ಯಾಣ: ನಗರ ಸಮೀಪದ ನಾರಾಯಣಪೂರ ಗ್ರಾಮದಲ್ಲಿ ಚರಂಡಿ ಸ್ವಚ್ಛಗೊಳಿಸಿ ತಿಂಗಳು ಕಳೆಯುತ್ತಿದ್ದರೂ ಗ್ರಾಮ ಪಂಚಾಯತ್‌ನವರು ಚರಂಡಿ ತ್ಯಾಜ್ಯವನ್ನು ವಿಲೇವಾರಿ ಮಾಡದಿರುವುದರಿಂದ ರಸ್ತೆ ಅಕ್ಕಪಕ್ಕ ತಿಪ್ಪೆಯಂತೆ ಸಂಗ್ರಹವಾಗಿ ಗ್ರಾಮಸ್ಥರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ.
ಗ್ರಾಮದಲ್ಲಿ ಸಂಗ್ರವಾದ ಕಸ ವಿಲೇವಾರಿ ಮಾಡುವ ಉದ್ದೇಶದಿಂದ ಅಂದಾಜು 60 ಸಾವಿರ ರೂ. ಖರ್ಚು ಮಾಡಿ ಹಳೆ ಆಟೋ ಖರೀದಿ ಮಾಡಲಾಗಿದೆ. ಆದರೂ ಅಧ್ಯಕ್ಷರು, ಸದಸ್ಯರು ಸಿಬ್ಬಂದಿ ನಿರ್ಲಕ್ಷ್ಯತನದಿಂದ ಗ್ರಾಮಸ್ಥರ ಮನೆ ಮುಂದೆ ತಿಂಗಳಿಂದ ತ್ಯಾಜ್ಯ ಬಿದ್ದು ಗಬ್ಬು ನಾರುತ್ತಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ನೀರಿನಿಂದ ಚರಂಡಿ ತ್ಯಾಜ್ಯ ರಸ್ತೆ ತುಂಬ ಹರಡಿದ್ದು, ಅದರಲ್ಲಿ ಹಂದಿ, ನಾಯಿಗಳು ಠಿಕಾಣಿ ಹೂಡುತ್ತಿವೆ. ಇದರಿಂದ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭಯದಲ್ಲಿ ಗ್ರಾಮಸ್ಥರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಉದ್ಭವಿಸಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮಗು ಇದ್ದಕ್ಕೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಗ್ರಾಮದ ಮಹಿಳೆಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಚರಂಡಿ ಸ್ವಚ್ಛಗೊಳಿಸಿದ ಕಸವನ್ನು ವಿಲೇವಾರಿ ಮಾಡಿ ಎಂದು ಕೇಳಿದರೆ, ಆಟೋಗೆ ಡೀಸೆಲ್ ಹಾಕಲು ಹಣ ಕೊಡುತ್ತಿಲ್ಲ ಎಂದು ಕೆಲ ಗ್ರಾಪಂ ಸದಸ್ಯರು ತಿಳಿಸಿದ್ದಾರೆ. ಗ್ರಾಮ ಪಂಚಾಯತ್ ಕೇಂದ್ರವಾದ ನಾರಾಯಣಪೂರ ಗ್ರಾಮದ ಸ್ಥಿತಿಯೇ ಈ ಗತಿಯಾದರೆ ಗ್ರಾಪಂ ವ್ಯಾಪ್ತಿಯ ಶಿವಪುರ, ಗುಣತೂರ, ಹುಲಗುತ್ತಿ ಗ್ರಾಮಗಳ ಚರಂಡಿಗಳ ಸ್ಥತಿ ಏನಾಗಿಎಬಹುದು ಎಂಬ ಪ್ರಶ್ನೆ ಗ್ರಾಮಸ್ತರದು.
ಗ್ರಾಮ ಪಂಚಾಯತ್‌ನಲ್ಲಿ ಏನಾದರೂ ಕಮಿಷನ್ ಸಿಗುವ ಕೆಲಸ ಇದ್ದರೆ ಸಾಕು ನಾನು ಮಾಡುತ್ತೇನೆ ಎಂದು ಮುಗಿಬೀಳುತ್ತಾರೆ. ಆದರೆ ಕಸವಿಲೇವಾರಿ ಮಾಡುವುದರಲ್ಲಿ ನಮಗೆ ಏನು ಲಾಭ ಎಂದು ನೋಡಿ-ನೋಡಲಾರದಂತೆ ಕಸದಲ್ಲಿ ಹಾಗೆ ಸಂಚರಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಗ್ರಾಮಸ್ತರ ಪ್ರಶ್ನೆಯಾಗಿದೆ.
ಗ್ರಾಮದ ಧೋಬಿ ಬಡಾವಣೆಯ ನೀರು ಸರಾಗವಾಗಿ ಹರಿದು ಹೋಗದೇ ನಿಲ್ಲುತ್ತಿದೆ. ಇದರಿಂದ ನಿವಾಸಿಗಳಿಗೆ ಸಮಸ್ಯೆ ಉಂಟಾಗಿದ್ದು. ರಾತ್ರಿ ಸಮಯದಲ್ಲಿ ಹೊರಗೆ ಬರಲಾರದಂಥಹ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಕುರಿತು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಆದ್ದರಿಂದ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಮತ್ತು ಧೊಬಿ ಬಡಾವಣೆಯಲ್ಲಿ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.