ಬಸವಕಲ್ಯಾಣ: ದೇಶದ ವ್ಯವಸ್ಥೆ ಸುಧಾರಿಸುವಲ್ಲಿ ಪತ್ರಿಕಾರಂಗ ಪ್ರಮುಖ ಪಾತ್ರ ವಹಿಸಿದೆ. ಹಾಗಾಗಿ ಸಮಾಜದಲ್ಲಿ ಪತ್ರಕರ್ತರನ್ನು ತುಂಬಾ ಗೌರವದಿಂದ ಕಾಣಲಾಗುತ್ತದೆ ಎಂದು ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ ಹೇಳಿದರು.
ನಗರದ ಖೂಬಾ ಕಾಲೇಜಿನ ಬಳಿಯ ಯಾತ್ರಿ ನಿವಾಸದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಹಾಗೂ ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ. ಹಾಗಾಗಿ ನಾವು ಒಟ್ಟಾಗಿ ಕೆಲಸ ಮಾಡಿದರೆ, ಸುಂದರವಾದ ಸಮಾಜ ಹಾಗೂ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಸಾವಿತ್ರಿ ಶರಣು ಸಲಗರ ಮಾತನಾಡಿ, 1843ರ ಜೂ.1ರಂದು ‘ಮಂಗಳೂರು ಸಮಾಚಾರ’ ಪತ್ರಿಕೆ ಆರಂಭವಾಗಿರುವುದರಿಂದ ಅಂದು ಪತ್ರಿಕಾ ದಿನ ಆಚರಿಸುತ್ತ ಬರಲಾಗುತ್ತಿದೆ. ದೇಶಕ್ಕೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಂಗ ಎಷ್ಟು ಮುಖ್ಯವೊ ಪತ್ರಿಕಾರಂಗವೂ ಅಷ್ಟೇ ಮುಖ್ಯವಾಗಿದೆ ಎಂದರು.
ಪತ್ರಕರ್ತರು ಸಮಾಜದಲ್ಲಿನ ಸಮಸ್ಯೆಗಳು ಹಾಗೂ ಮೂಢ ನಂಬಿಕೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾಗಿದೆ ಎಂದರು. ಇದಕ್ಕೂ ಮುನ್ನ ಸಾನ್ನಿಧ್ಯ ವಹಿಸಿದ್ದ ಹಾರಕೂಡ ಹಿರೇಮಠ ಸಂಸ್ಥಾನದ ಡಾ| ಚನ್ನವೀರ ಶಿವಾಚಾರ್ಯರು ಉದ್ಘಾಟನೆ ನೆರವೇರಿಸಿದರು.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಕರ್ತ ಶ್ರೀನಿವಾಸ ಸಿರೂರಕರ್ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುನಾಥ ಗಡ್ಡೆ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಬಿಜೆಪಿ ಮುಖಂಡ ವಿಜಯಕುಮಾರ ಮಂಠಾಳೆ, ಶಿವರಾಜ ನರಶೆಟ್ಟೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ, ಅಧ್ಯಕ್ಷ ವೀರಶೆಟ್ಟಿ ಮಲ್ಲಶೆಟ್ಟಿ, ಪ್ರಭುಲಿಂಗಯ್ನಾ ಟಂಕಸಾಲಿಮಠ ಮತ್ತಿತರರು ಇದ್ದರು.