Advertisement

ಪೂಜಿಸುವುದಕ್ಕಿಂತ ಶರಣರ ವಿಚಾರ ಪಾಲಿಸಿ

10:05 AM Aug 31, 2019 | Naveen |

ಬಸವಕಲ್ಯಾಣ: ಶರಣರನ್ನು ಕೇವಲ ಪೂಜಿಸದೇ, ಅವರ ಸಂದೇಶಗಳನ್ನು ಅನುಷ್ಠಾನದಲ್ಲಿ ತರುವಂತ ಕೆಲಸ 12ನೇ ಶತಮಾನದ ನಂತರವೂ ಸಾಗಿದ್ದರೆ ‘ಮತ್ತೆ ಕಲ್ಯಾಣ’ ಅಭಿಯಾನ ನಡೆಸುವ ಅಗತ್ಯವೇ ಇರುತ್ತಿರಲಿಲ್ಲ ಎಂದು ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

Advertisement

ನಗರದ ಬಿಕೆಡಿಬಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಮಾವೇಶ ಮತ್ತು ‘ಮತ್ತೆ ಕಲ್ಯಾಣ’ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರ ಸಂದೇಶಗಳನ್ನು ಸಾರಲು ನಿಮಗೆ 900 ವರ್ಷಗಳೇ ಬೇಕಾದವಾ ಎನ್ನುವ ಪ್ರಶ್ನೆಗಳು ಅಭಿಯಾನದ ವೇಳೆ ಕೇಳಿಬಂದವು. ಮುಂದೆ ನಿಮ್ಮ ಮಕ್ಕಳು ನಿಮಗೆ ಇದೇ ಸ್ಥಳದಲ್ಲಿ ಕುಳಿತಾಗ ಇದನ್ನೇ ಪ್ರಶ್ನಿಸಬಾರದು. ಹೀಗಾಗಿ ಮತ್ತೆ ನಿಮ್ಮಲ್ಲಿ ಶರಣ ಆದರ್ಶ ಬಿತ್ತುವ ಕೆಲಸವನ್ನು ‘ಮತ್ತೆ ಕಲ್ಯಾಣ’ ಮಾಡುತ್ತಿದೆ. ಇದರಿಂದ ಇಡೀ ಸಮಾಜವನ್ನೇ ಬದಲಾಯಿಸುವ ಭ್ರಮೆ ನಮ್ಮದಾಗಿಲ್ಲ. ಕೊನೆ ಪಕ್ಷ 10 ಜನರು ತ್ಯಾಗ ಮನೋಭಾವನೆ ಮೈಗೂಡಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅಭಿಯಾನ ಯಶಸ್ವಿ ಆಗುವುದರಲ್ಲಿ ಅನುಮಾನವಿಲ್ಲ ಎಂದರು.

ಈ ಅಭಿಯಾನದಲ್ಲಿ ಶರಣರ ಸಂದೇಶಗಳ ಬೀಜ ಬಿತ್ತುವ ಕೆಲಸವನ್ನು ನಾವು ಮಾಡಿದ್ದೇವೆ. ಅದರ ಫಲ ಪಡೆದುಕೊಳ್ಳುವ ಕೆಲಸವನ್ನು ಅವರವರೇ ಮಾಡಿಕೊಳ್ಳಬೇಕು. ಇದು ಕೇವಲ ‘ಮತ್ತೆ ಕಲ್ಯಾಣ’ ವಾಗದೇ ನಿತ್ಯ ಕಲ್ಯಾಣವಾಗಬೇಕಿದೆ ಎಂದು ನುಡಿದರು. ಅಭಿಯಾನವನ್ನು ‘ನಿತ್ಯ ಕಲ್ಯಾಣ’ ಆಗಿಸುವ ನಿಟ್ಟಿನಲ್ಲಿ 18 ವರ್ಷ ದಾಟಿದ ಯುವಕ-ಯುವತಿಯರನ್ನು ಆಯ್ಕೆ ಮಾಡಿಕೊಂಡು ಅವರಿಗೆ 20 ದಿನಗಳ ಕಾಲ ಸಾಣೇಹಳ್ಳಿಯಲ್ಲಿ ಕಾರ್ಯಾಗಾರ ಮಾಡಬೇಕು ಎನ್ನುವ ಚಿಂತನೆ ನಡೆದಿದೆ. ಕಾರ್ಯಾಗಾರದಲ್ಲಿ ಭಾಗವಹಿಸುತ್ತೇನೆ ಎಂದು ಬರುವ ಯುವಕ-ಯುವತಿಯರಿಗೆ ಉಚಿತವಾಗಿ ತರಬೇತಿ ನೀಡಿ ಎಂದರು.

‘ಮತ್ತೆ ಕಲ್ಯಾಣ’ದಿಂದ ಸಮಾಜಕ್ಕೆ ಕೊಡುಗೆ ಸಂದಿದೆಯೋ ಅಥವಾ ಉಳಿದ ಕಾರ್ಯಕ್ರಮದಂತೆ ಇದಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಎಲ್ಲ ಜಿಲ್ಲೆಯ ವೇದಿಕೆ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ, ಮುಂದಿನ ಯೋಜನೆ ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು. ನೂತನ ಅನುಭವ ಮಂಟಪ ನಿರ್ಮಿಸಬೇಕು ಎಂದು ಗೊ.ರು. ಚನ್ನಬಸವ ಸಮಿತಿ ರಚಿಸಿ, ಯೋಜನೆ ಬಗ್ಗೆ ಹಿಂದಿನ ಕಾಂಗ್ರೆಸ್‌ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯನ್ನು ಪ್ರಸಕ್ತ ಸರ್ಕಾರಕ್ಕೂ ನೀಡಲಾಗಿದೆ ಎಂದು ತಿಳಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಅನುಭವ ಮಂಟಪ ಯೋಜನೆಯನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲ ಅನುದಾನ ನೀಡಬೇಕು ಎಂದು ಒತ್ತಾಯಿಸುವ ಜೊತೆಗೆ, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಡಾ| ಮಹಾದೇವ ಮತ್ತು ಶಾಸಕ ಬಿ. ನಾರಾಯಣರಾವ್‌ ವಹಿಸಕೊಳ್ಳಬೇಕು ಎಂದು ಸಲಹೆ ನೀಡಿದರು. ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆ, ಅಕ್ಕ ಡಾ| ಗಂಗಾಂಬಿಕೆ ನೇತೃತ್ವ ವಹಿಸಿದ್ದರು. ಕೂಡಲ ಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಪ್ರಭು ಸ್ವಾಮೀಜಿ, ಶಾಸಕ ಬಿ.ನಾರಾಯಣರಾವ್‌, ಜಿಲ್ಲಾಧಿಕಾರಿ ಡಾ| ಎಚ್.ಆರ್‌. ಮಹಾದೇವ, ಸಹಾಯಕ ಆಯುಕ್ತ ಜ್ಞಾನೇಂದ್ರಕುಮಾರ ಗಂಗವಾರ, ತಹಶೀಲ್ದಾರ್‌ ಸಾವಿತ್ರಿ ಶರಣು ಸಲಗರ, ಡಾ| ಎಂ.ಉಷಾ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next