Advertisement

ಇದ್ದೂ ಇಲ್ಲದಾದ ಆರೋಗ್ಯ ಕೇಂದ್ರ

01:15 PM Mar 18, 2020 | Naveen |

ಬಸವಕಲ್ಯಾಣ: ಹುಲಸೂರ ಪಟ್ಟಣದಲ್ಲಿ ಎರಡು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಸಮುದಾಯ ಆರೋಗ್ಯ ಕೇಂದ್ರ ಅವ್ಯವಸ್ಥೆಯ ಆಗರವಾಗಿದ್ದು,

Advertisement

ಇದರಿಂದ ರೋಗಿಗಳಿಗೆ ಅನುಕೂಲವಾಗಬೇಕಿದ್ದ ಆರೋಗ್ಯ ಕೇಂದ್ರ ಬಡವರ ಹಾಗೂ ಸಾರ್ವಜನಿಕರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಜಿಲ್ಲಾ ಪಂಚಾಯತ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಬಾರ್ಡ್‌ ಆರ್‌ ಐಡಿಎಫ್‌ನ 21ನೇ ಯೋಜನೆಯಡಿ ಬಡ ರೋಗಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಸರ್ಕಾರ ಅಚ್ಚುಕಟ್ಟಾದ ಕಟ್ಟಡದೊಂದಿಗೆ ಆಸ್ಪತ್ರೆ ಆರಂಭಿಸಿದೆ. ಇಲ್ಲಿ ಮಹಿಳೆಯರು, ಪುರುವರ ಚಿಕಿತ್ಸೆಗಾಗಿ ಪ್ರತ್ಯೇಕ ವಿಭಾಗಗಳು, ನೂತನ ಯಂತ್ರಗಳು ಸೇರಿದಂತೆ ಪ್ರತಿಯೊಂದು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ವೈದ್ಯರ ಪದೇಪದೇ ವರ್ಗಾವಣೆ ಮತ್ತು ಸಿಬ್ಬಂದಿಗಳ ಡೆಪ್ಟೆàಷನ್‌ ಕಾರಣದಿಂದ ಸಮುದಾಯ ಆರೋಗ್ಯ ಕೇಂದ್ರದ ಮೇಲೆ ಹಿಡಿತ ಇಲ್ಲದಂತಾಗಿ ಯಾರೂ ಹೇಳುವವರು, ಕೇಳುವವರು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉತ್ತಮ ಚಿಕಿತ್ಸೆ ಸಿಗುವುದು ದೂರದ ಮಾತು, ಸರಿಯಾಗಿ ರೋಗಿಗಳಿಗೆ ಮಾಹಿತಿ ನೀಡುವವರೂ ಕೂಡ ಇಲ್ಲದಾಗಿದೆ ಎಂದು ಪಟ್ಟಣದ ನಿವಾಸಿಗಳು ಹಾಗೂ ರೋಗಿಗಳು ಆರೋಪಿಸಿದ್ದಾರೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಜುರಾದ ವೈದ್ಯರು 5 ಜನ. ಇದರಲ್ಲಿ ಕೇವಲ ಒಬ್ಬರು ಖಾಯಂ, ಇಬ್ಬರು ಗುತ್ತಿಗೆ ಆಧಾರ ಮೇಲೆ ಇದ್ದಾರೆ. ಹಾಗೂ ಬೆರೆಳೆಣಿಯಷ್ಟು ಸಿಬ್ಬಂದಿ ಮಾತ್ರ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸ್ವಚ್ಚತೆ ಕಾಪಾಡಲು ಸಾಧ್ಯವಾಗದಿರುವುದು ಒಂದುಕಡೆಯಾದರೆ, ಸಾಮಗ್ರಿಗಳು ಇಟ್ಟ ಸ್ಥಳದಲ್ಲಿಯೇ ಅಧೋಗತಿ ಹಂತಕ್ಕೆ ತಲುಪಿದೆ.

ನಿತ್ಯ ಬವಡವರ, ನಿರ್ಗತಿಕ ರೋಗಿಗಳ ಪಾಲಿಗೆ ವರದಾನವಾಗಬೇಕಾಗಿದ್ದ ಹುಲಸೂರ ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರೋಗಿಗಳಿಗೆ ಉಪಯೋಗಕ್ಕೆ ಬಾರದಂತಾಗಿದೆ. ಆರೋಗ್ಯ ಕೇಂದ್ರ ಎರಡು ಅಂತಸ್ಥಿನ ಕಟ್ಟಡ ವಾಗಿದೆ. ಒಳಗೆ ಮಹಿಳೆಯರಿಗೆ ಹಾಗೂ ಪುರುಷರಿಗಾಗಿ ಪ್ರತ್ಯೇಕ ನಾಲ್ಕು ಶೌಚಾಲಗಳನ್ನು ನಿರ್ಮಿಸಲಾಗಿದೆ. ಆದರೂ ರೋಗಿಗಳು ಉಪಯೋಗಿಸುವಂತಿಲ್ಲ. ಅವುಗಳಿಗೆ ಬೀಗ ಹಾಕಿದ್ದು, ರೋಗಿಗಳು ಹೊರಗಡೆ ಹೋಗುವಂತ ಸ್ಥಿತಿ ಇಲ್ಲಿದೆ.

ರೋಗಿಗಳ ಆರೋಗ್ಯ ಹಿತದೃಷ್ಟಿಯಿಂದ ಸಮುದಾಯ ಕೇಂದ್ರದಲ್ಲಿ ಅಳವಡಿಸಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉಪಯೋಗಕ್ಕೆ ಬಾರದಂತಾಗಿ ಧೂಳು ತಿನ್ನುತ್ತಿದೆ. ಸಂಬಂಧ ಪಟ್ಟ ವೈದ್ಯರು ಬೇಸಿಗೆ ಸಮಯದಲ್ಲೂ ಅದನ್ನು ದುರಸ್ಥಿ ಮಾಡಲು ಮುಂದಾಗದೇ ಇರುವುದು ನೋಡಿದರೆ ರೋಗಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.

Advertisement

ರೋಗಿಗಳ ಅನುಕೂಲಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಸರ್ಕಾರ ಮಂಜೂರು ಮಾಡಿದ ಯಂತ್ರಗ ಧೂಳು ತಿನ್ನುತ್ತಿದೆ. ಮೂರು ತಿಂಗಳ ಹಿಂದೆ ಮಂಜೂರಾಗಿದ್ದ ಈ ಯಂತ್ರವನ್ನು ಚನ್ನಾಗಿ ಜೋಡಣೆ ಮಾಡದೆ ಹಾಗೆ ಬೀಡಲಾಗಿದೆ. ಇದರಿಂದ ರೋಗಿಗಳಿಗೆ ಉಪಯೋಗಕ್ಕೆ ಬರುವ ಮುನ್ನವೇ ಅದು ಹಾಳಾಗುತ್ತಿದೆ. ಸಿಬ್ಬಂದಿಗಳ ಕೊರತೆಯಿಂದ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ.

ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅವಶ್ಯಕತೆಗೆ ತಕ್ಕಂತೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂವುದು ಪಟ್ಟಣದ ನಿವಾಸಿಗಳ ಒತ್ತಾಯವಾಗಿದೆ.

ರಾಜಕೀಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹುಲಸೂರ ಸಮುದಾಯ ಆರೋಗ್ಯ ಕೇಂದ್ರ ಈ ಹಂತಕ್ಕೆ ತಲುಪಿದೆ. ಇಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರೋಗಿಗಳ ಹಿತದೃಷ್ಟಿ ಯಿಂದ ರಚಿಸಿಲಾದ ಆರೋಗ್ಯ ರಕ್ಷಾ ಸಮಿತಿ ಕೇವಲ ಹೆಸರಿಗೆ ಮಾತ್ರ ಇದೆ ಹೊರತು ಸದಸ್ಯರು ನೀಡಿರುವ ಸಲಹೆಗಳನ್ನು ಯಾರೂ ಕೇಳುವುದಿಲ್ಲ. ಹೀಗಾಗಿ ಇದೇರೀತಿ ಮುಂದುವರಿದರೆ ನನ್ನ ಸದಸ್ಯ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ.
ಬಸವರಾಜ ಕೌಟೆ,
ಆರೋಗ್ಯ ರಕ್ಷಾ ಸಮಿತಿ ಸದಸ್ಯ

ಆರೋಗ್ಯ ಕೇಂದ್ರದಲ್ಲಿ ಸ್ತ್ರೀ ರೋಗ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಗರ್ಭಿಣಿಯರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಮೊದಲು ಮಹಿಳಾ ತಜ್ಞ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ನೇಮಕ ಮಾಡಿಕೊಳ್ಳಬೇಕು.
ರಾಜಕುಮಾರ ತೊಂಡಾರೆ,
ಕರವೇ ಉಪಾಧ್ಯಕ್ಷ ಹುಲಸೂರ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next