Advertisement

ಸಾರಿಗೆ ಸೌಲಭ್ಯ ವಂಚಿತ ಧಮುರಿ ಗ್ರಾಮ

10:21 AM Jun 14, 2019 | Naveen |

ವೀರಾರೆಡ್ಡಿ ಆರ್‌.ಎಸ್‌
ಬಸವಕಲ್ಯಾಣ:
ದೇಶಕ್ಕೆ ಸ್ವಾತಂತ್ರ್ಯ ದೊರಕಿ ಏಳು ದಶಕ ಕಳೆದರೂ ಧಮುರಿ ಗ್ರಾಮ ಇಂದಿಗೂ ಸಾರಿಗೆ ಸೌಲಭ್ಯದಿಂದ ವಂಚಿವಾಗಿದ್ದು, ಸಂಚಾರಕ್ಕಾಗಿ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಿತ್ಯ ಯಾತನೆ ಅನುಭವಿ ಸುವಂತಾಗಿದೆ.

Advertisement

ಜೂ.29ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ಉಜಳಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮ ಕೇವಲ 3 ಕಿ.ಮೀ.ಅಂತರದಲ್ಲಿದೆ. ಶೇ.100ರಷ್ಟು ಪರಿಶಿಷ್ಟ ಜಾತಿಯ 440 ನಿವಾಸಿಗಳು ವಾಸಿಸುವ ಕುಗ್ರಾಮ ಇದಾಗಿದೆ. ಆದರೆ ಇಂದಿಗೂ ನಿರ್ಲಕ್ಷಕ್ಕೆ ಒಳಗಾಗಿ ಮೂಲಭೂತ ಸೌಕರ್ಯಗಳಿಂದ ದೂರ ಉಳಿದಿದ್ದು ಮಾತ್ರ ಗ್ರಾಮಸ್ಥರು, ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜೂ.30ರಂದು ಬೆಳಗ್ಗೆ ಮುಖ್ಯಮಂತ್ರಿಗಳು ಧಮುರಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈ ಸುದ್ದಿ ಕೇಳಿ ಗ್ರಾಮಸ್ಥರು, ನಮ್ಮ ಸಮಸ್ಯೆಗಳಿಗೂ ಮುಕ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಬಸ್‌ ನೋಡದ ಗ್ರಾಮ: ಸ್ವಾತಂತ್ರ್ಯ ದೊರಕಿ 70 ದಶಕಗಳು ಕಳೆದರೂ ಇಂದಿಗೂ ಧಮುರಿ ಗ್ರಾಮ ಬಸ್‌ ಸಂಚಾರ ಕಂಡಿಲ್ಲ. ಇದರಿಂದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಅಪರೂಪಕ್ಕೆ ಬರುವ ಖಾಸಗಿ ವಾಹನ ಹಾಗೂ ಬೈಕ್‌ಗಳನ್ನು ಆವಲಂಬಿಸಿದ್ದಾರೆ. ರಾತ್ರಿ ಸಮಯದಲ್ಲಿ ಏನಾದರೂ ಅವಘಡಗಳು ಸಂಭವಿಸಿದರೆ ದೇವರೆ ಗತಿ ಎಂಬಂತಿದೆ ಇಲ್ಲಿನ ಸ್ಥಿತಿ. ಹಾವು ಕಚ್ಚಿದಾಗ ಸಮಯಕ್ಕೆ ವಾಹನ ಸಿಗದ ಹಿನ್ನೆಲೆಯಲ್ಲಿ ಎರಡು ಸಾವಿನ ಘಟನೆಗಳು ಗ್ರಾಮದಲ್ಲಿ ನಡೆದಿವೆ. ಧಮುರಿ ಗ್ರಾಮದಿಂದ ಉಜಳಂಬ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು, ರಸ್ತೆ ತುಂಬಾ ಜಲ್ಲಿಕಲ್ಲುಗಳು ಎದ್ದು ನಿಂತಿವೆ. ಈ ರಸ್ತೆ ನೋಡಿದರೆ ಒಂದು ಬಾರಿಯೂ ಡಾಂಬರೀಕರಣವಾಗದಿರುವಂತೆ ಕಾಣುತ್ತದೆ.

ಈ ಗ್ರಾಮದಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗೆ ಮಾತ್ರ ಶಿಕ್ಷಣ ಸೌಲಭ್ಯವಿದ್ದು, ಹೆಚ್ಚಿನ ಶಿಕ್ಷಣಕ್ಕಾಗಿ ಇಲ್ಲಿನ ವಿದ್ಯಾರ್ಥಿಗಳು ಪಕ್ಕದ ಮಹಾರಾಷ್ಟ್ರದ ಉಮರ್ಗಾ ಅಥವಾ ಉಜಳಂಬ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ.

ಕೃಷಿ ಅವಲಂಬಿತ ಗ್ರಾಮ: ಗ್ರಾಮದಲ್ಲಿ ವಾಸಿಸುವ ಪ್ರತಿಯೊಂದು ಕುಟುಂಬ ಕೃಷಿ ಮೇಲೆ ಅವಲಂಬಿತವಾಗಿವೆ. ಹೀಗಾಗಿ ಧಮುರಿ- ಉಮರ್ಗಾ ರಸ್ತೆ ಮಧ್ಯದಲ್ಲಿರುವ ಬ್ಯಾರೇಜ್‌ ಕಂ ಬ್ರಿಡ್ಜ್ನಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು ಎಂಬುದು ಗ್ರಾಮದ ಮಾಧವ ಜಾಧವ ಒತ್ತಾಯಿಸಿದ್ದಾರೆ.

Advertisement

ಕಳೆದ ನಾಲ್ಕು ವರ್ಷಗಳಿಂದ ಉಜಳಂಬ ಗ್ರಾಮ ಪಂಚಾಯತ ವತಿಯಿಂದ ಕೇವಲ ಎರಡು ಮನೆ ಮಾತ್ರ ಮಂಜೂರು ಮಾಡಲಾಗಿದೆ. ಹೀಗಾಗಿ ಗ್ರಾಮದಲ್ಲಿ ಬಹುತೇಕ ಮನೆಗಳು ಗುಡಿಸಲುಗಳಾಗಿವೆ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮಸ್ಥರ ಬೇಡಿಕೆಗಳು
ಧಮುರಿ ಗ್ರಾಮಕ್ಕೆ ಬಸ್‌ ಸೌಕರ್ಯ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು. ಗುಡಿಸಲು ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಬೇಕು. ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಿ, ಬುದ್ಧ ವಿಹಾರ ನಿರ್ಮಾಣಕ್ಕೆ ಅನುದಾನ ನೀಡಬೇಕು. ಗ್ರಾಮಕ್ಕೆ ಉತ್ತಮವಾದ ರಸ್ತೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಗಳಾಗಿವೆ.
Advertisement

Udayavani is now on Telegram. Click here to join our channel and stay updated with the latest news.

Next