ಬೀದರ್: ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನಲೆ ಶನಿವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 9ರವರೆಗೆ ಶೇ. 7.46 ರಷ್ಟು ಮತದಾನ ದಾಖಲಾಗಿದೆ. ಹೆಚ್ಚುವರಿ 62 ಮತಗಟ್ಟೆಗಳು ಸೇರಿದಂತೆ ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 231 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಮತ್ತು ಇತರೇ ನಾಲ್ಕು ಜನರು ಸೇರಿ ಒಟ್ಟು 2,39,782 ಮತದಾರರು ಇದ್ದಾರೆ.
ಇದನ್ನೂ ಓದಿ: ಉಪಚುನಾವಣೆ: ಮಸ್ಕಿಯಲ್ಲಿ ಶೇ. 11.23ರಷ್ಟು ಮತದಾನ
ನಾಮಪತ್ರಗಳನ್ನು ಸಲ್ಲಿಸಿದ 14 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದು ಅಂತಿಮವಾಗಿ ಕಣದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಕರ್ನಾಟಕ ರಾಷ್ಟ್ರ ಸಮಿತಿ, ಶಿವಸೇನಾ, ಹಿಂದೂಸ್ತಾನ ಜನತಾ ಪಾರ್ಟಿ, ಎಂಐಎಂ, ಅಖಿಲ ಭಾರತೀಯ ಮುಸ್ಲಿಂ ಲಿಗ್ (ಸೆಕ್ಯೂಲರ್) ಪಕ್ಷಗಳಿಂದ ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ನಾಲ್ವರು ಸೇರಿ ಒಟ್ಟು 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ಉಪಚುನಾವಣೆ: ಮೊದಲು ಮತ ಹಾಕಿದ ಸಖಿಗೆ ಸಸಿ ವಿತರಣೆ