Advertisement

ಜಾಗತಿಕ ಮಟ್ಟಕ್ಕೆ ಬಸವ ತತ್ವ ಪ್ರಚಾರ

09:25 AM Jan 14, 2019 | Team Udayavani |

ಬಾಗಲಕೋಟೆ: ಬಸವಣ್ಣನವರನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ವಿಶ್ವದ ಪ್ರಮುಖ ಐದಾರು ಭಾಷೆಗಳಲ್ಲಿ ಗ್ರಂಥ ತಯಾರಿಕೆ ಕಾರ್ಯ ನಡೆಯುತ್ತಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಹೇಳಿದರು.

Advertisement

ಕೂಡಲಸಂಗಮದಲ್ಲಿ ನಡೆದ ಶರಣ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಂವಿಧಾನ ಬರೆದ ಡಾ| ಅಂಬೇಡ್ಕರ್‌ ಅವರಿಗೂ ಬಸವಣ್ಣನ ಬಗ್ಗೆ ಅಷ್ಟೊಂದು ಗೊತ್ತಿರಲಿಲ್ಲ. ಆದ್ದರಿಂದ ಬಸವಣ್ಣನನ್ನು ಅಮೆರಿಕದಿಂದ ರಷ್ಯಾ ವರೆಗೂ ಪರಿಚಯಿಸಿ, ಅವರನ್ನು ಜಾಗತಿಕ ಮಹಾನ್‌ ನಾಯಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

12ನೇ ಶತಮಾನದಲ್ಲಿ ಬಸವ ತತ್ವ, ಲಿಂಗಾಯತ ಧರ್ಮ ಜನ್ಮತಾಳಿದರೂ ಕಲ್ಯಾಣ ಕ್ರಾಂತಿ ಬಳಿಕ ಬಹಳಷ್ಟು ಹಿನ್ನಡೆಯಾಗಿದೆ. ಬಸವ ತತ್ವವೇ ಅಳಿದು ಹೋಗುವ ಸಂದರ್ಭದಲ್ಲಿ ಡಾ| ಫ.ಗು. ಹಳಕಟ್ಟಿ ಬಸವ ತತ್ವಕ್ಕೆ ಮರು ಜೀವ ನೀಡಿದ್ದಾರೆ. ಅಂತಹ ಹಳಕಟ್ಟಿ ಹುಟ್ಟು ಹಾಕಿದ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷನಾಗಿ, ಬಸವಣ್ಣನನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡಲು ಅಣಿಯಾಗಿದ್ದೇವೆ ಎಂದು ಹೇಳಿದರು.

ಆರು ಭಾಷೆಯಲ್ಲಿ ಗ್ರಂಥ: ಬಸವಣ್ಣನನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಜತೆಗೆ ಅವರು ಹಾಕಿದ ಬಸವ ತತ್ವ ಪ್ರಚಾರಕ್ಕಾಗಿ ವಿಶ್ವದ ಪ್ರಮುಖ ಐದರಿಂದ ಆರು ಭಾಷೆಯಲ್ಲಿ ಗ್ರಂಥ ರೂಪಿಸುವ ಕೆಲಸ ನಡೆದಿದೆ. ಬಿಎಲ್‌ಡಿಇ ಸಂಸ್ಥೆಯಿಂದ ಈಗಾಗಲೇ ಎರಡು ಕೋಟಿ ರೂ. ಅನುದಾನ ನೀಡಿದ್ದು, ಅಗತ್ಯ ಬಿದ್ದರೆ 3 ಕೋಟಿ ರೂ. ಅನುದಾನ ನೀಡಲಾಗುವುದು. ಈ ಗ್ರಂಥವನ್ನು ವಿಶ್ವದ ಎಲ್ಲ ರಾಷ್ಟ್ರಗಳ ಅಧ್ಯಕ್ಷರು, ಎಲ್ಲ ವಿಶ್ವ ವಿದ್ಯಾಲಯ, ಕಾಲೇಜುಗಳಿಗೆ ಉಚಿತವಾಗಿ ನೀಡುವ ಉದ್ದೇಶವಿದೆ ಎಂದರು. ಅಮೆರಿಕ ಅಧ್ಯಕ್ಷರಿಗೆ ಮಹಾತ್ಮ ಗಾಂಧೀಜಿ ಗೊತ್ತಿದ್ದಾರೆ. ಆದರೆ, ಬಸವಣ್ಣ ಗೊತ್ತಿಲ್ಲ. ಹೀಗಾಗಿ ವಿಶ್ವ ಮಹಾನ್‌ ನಾಯಕರನ್ನಾಗಿ ಬಸವಣ್ಣನನ್ನು ಕಾಣುವ ಆಶಯ ನನ್ನದಾಗಿದೆ ಎಂದು ಹೇಳಿದರು.

ಬಸವಣ್ಣ ಸ್ಥಾಪಿಸಿದ್ದ ಲಿಂಗಾಯತ ಧರ್ಮ, ಅವರ ಬಸವ ತತ್ವ ಎಲ್ಲವೂ ನಶಿಸಿ ಹೋಗಿದ್ದವು. ಕಲ್ಯಾಣ ಕ್ರಾಂತಿ ಬಳಿಕ, ಬಸವ ತತ್ವಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ, ಡಾ| ಫ.ಗು. ಹಳಕಟ್ಟಿ ಅವರು, ಎಲ್ಲೋ ಅಡತಿ-ಕಿರಾಣಿ ಅಂಗಡಿ, ಯಾರದೋ ಮನೆ ಜಗಲಿ ಮೇಲಿದ್ದ ಬಸವಣ್ಣನ ವಚನ ಸಂಗ್ರಹಿಸಿ ಸಂಪುಟ ಪ್ರಕಟಿಸಿದ್ದರು. ಈ ಮೂಲಕ ಬಸವ ತತ್ವ ಪುನಃ ಪ್ರಚಲಿತಕ್ಕೆ ಬಂತು. ಅಂತಹ ಹಳಕಟ್ಟಿ ಕಟ್ಟಿದ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷನಾಗಿ, ಬಸವ ತತ್ವವನ್ನು ಇನ್ನಷ್ಟು ಪ್ರಚಾರ ಮಾಡುವ ಕೆಲಸ ಮಾಡುವೆ.
ಎಂ.ಬಿ. ಪಾಟೀಲ, ಗೃಹ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next